ಮೈಸೂರು: ಸುರಕ್ಷಿತ ದೀಪಾವಳಿಗೆ ಒಂದಷ್ಟು ಸಲಹೆ
ಮೈಸೂರು, ಅಕ್ಟೋಬರ್ 17 : ಬೆಳಕಿನ ಹಬ್ಬ ದೀಪಾವಳಿ ಪಟಾಕಿಯ ಅಬ್ಬರದಿಂದಾಗಿ ತೊಂದರೆಯಾಗದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ಸಜ್ಜಾಗಿದೆ. ಮೈಸೂರು ನಗರದಾದ್ಯಂತ ದೀಪಾವಳಿ ಹಬ್ಬದ ಸಮಯದಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಾಗೃತರಾಗಿರಲು ನಗರ ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
125 ಡೆಸಿಬಲ್(ಎ-1)ಗಿಂತ ಹೆಚ್ಚಿನ ಶಬ್ದವನ್ನು ಉಂಟು ಮಾಡುವ ಪಟಾಕಿಗಳನ್ನು ತಯಾರಿಸುವುದು, ಶೇಖರಿಸುವುದು, ಮಾರಾಟ ಮಾಡುವುದು ಮತ್ತು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ರಾತ್ರಿ 10 ರಿಂದ ಬೆಳಿಗ್ಗೆ 6 ರವರೆ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಲೈಸೆನ್ಸ್ ಹೊಂದಿದ ವಿಶ್ವಾಸಾರ್ಹ ಮಾರಾಟಗಾರರಿಂದ ಪಟಾಕಿಗಳನ್ನು ಖರೀದಿಸುವುದು ಹಾಗೂ ಪಟಾಕಿಗಳನ್ನು ಸುಡುವ ಮುನ್ನ ಅದರ ಹೊದಿಕೆಯ ಮೇಲೆ ನಮೂದಿಸಿರುವ ಎಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರು ಸೂಚಿಸಿದ್ದಾರೆ.

ಪಟಾಕಿಗಳನ್ನು ಉರಿಸಲು ಉದ್ದನೆಯ ಕ್ಯಾಂಡಲ್ ಅಥವಾ ಉದ್ದನೆಯ ಅಗರ ಬತ್ತಿಗಳನ್ನು ಉಪಯೋಗಿಸುವ ಬೆಂಕಿಯನ್ನು ಮೊದಲ ಹಂತದಲ್ಲೇ ಆರಿಸಲು ಯಾವಾಗಲೂ ಕೈಗೆ ಎಟಕುವಂತೆ/ ಸಮೀಪದಲ್ಲಿ ನೀರನ್ನು ಇಟ್ಟುಕೊಳ್ಳುವುದು. ಆಕಾಶದಲ್ಲಿ ಸಿಡಿಯುವ ಪಟಾಕಿಗಳು/ರಾಕೆಟ್ ಗಳನ್ನು ಸುರಕ್ಷಿತವಾಗಿ ಕೆಳಗೆ ಬೀಳಬಹುದಾದ ವಿಸ್ತಾರವಾದ ವಲಯ/ಸ್ಥಳದಲ್ಲಿ ಉಪಯೋಗಿಸುವುದು. ಆಕಾಶದಲ್ಲಿ ಸಿಡಿಯುವ ಪಟಾಕಿ/ರಾಕೆಟ್ ಗಳ ದಾರಿಗೆ ಅಡ್ಡ ಬರಬಹುದಾದ ಎತ್ತರ ಗೋಡೆಗಳು, ಮರಗಳು, ತಂತಿಗಳು ಹಾಗೂ ಒತ್ತೊತ್ತಾಗಿ ಮನೆಗಳಿರುವ ಸ್ಥಳಗಳಲ್ಲಿ ಹಚ್ಚಬೇಡಿ. ಪಟಾಕಿಗಳನ್ನು ಹಚ್ಚಿದ ನಂತರ ಅದು ಸುಡದ ಪಕ್ಷದಲ್ಲಿ ಅವುಗಳನ್ನು ವಿಲೇವಾರಿ ಮಾಡಲು ನೀರಿನಲ್ಲಿ ಅದ್ದಬೇಕೆಂದು ತಿಳಿಸಿದ್ದಾರೆ.
ಅಲ್ಲದೇ ಪಟಾಕಿಗಳನ್ನು ಕೈಯಲ್ಲಿ ಹಿಡಿದಿರುವಾಗ ಉರಿಸಬೇಡಿ, ಅವನ್ನು ಕೆಳಗಿಟ್ಟು ಹೊತ್ತಿಸಿ ಮತ್ತು ದೂರ ನಡೆಯಿರಿ. ಮಕ್ಕಳು ಪಟಾಕಿಗಳನ್ನು ಸುಡುವಾಗ ಯಾವಾಗಲೂ ಒಬ್ಬರು ವಯಸ್ಕರ ಸಮ್ಮುಖದಲ್ಲಿ ಸುಡುವುದು. ಪಟಾಕಿಗಳನ್ನು ಯಾವುದೇ ಮುಚ್ಚುವ ವಸ್ತುಗಳಲ್ಲಿ ಹಾಕಿ ಹೊತ್ತಿಸಬೇಡಿ. ಪಟಾಕಿಗಳನ್ನು ಸಿಡಿಸುವಾಗ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ ಸಿಡಿಸಿದ ಪಟಾಕಿಗಳು/ರಾಕೆಟ್ ಗಳು ಮನೆಯೊಳಗೆ ಬರದಂತೆ ಎಚ್ಚರ ವಹಿಸುವುದು. ಮನೆಯೊಳಗೆ ಯಾವುದೇ ಪಟಾಕಿಗಳನ್ನು ಹಚ್ಚಬೇಡಿ. ಪಟಾಕಿಗಳನ್ನು ಸಾರ್ವಜನಿಕ ದಾರಿ/ವಾಹನಗಳು ಓಡಾಡುವ ದಾರಿಯಲ್ಲಿ ಹಚ್ಚದೆ ಹೊರ ಬಯಲಿನಲ್ಲಿ ಹಚ್ಚಿರಿ. ಪಟಾಕಿಗಳಿಂದ ಯಾವುದೇ ಪ್ರಯೋಗ ಮಾಡಬೇಡಿ. ಮನೆಗಳಲ್ಲಿ ಸ್ವತಃ ಪಟಾಕಿಗಳನ್ನು ತಯಾರು ಮಾಡುವಂತಿಲ್ಲ. ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ. ಎ. ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳಿಂದ ಕಟ್ಟುನಿಟ್ಟಿನ ಸಲಹೆ
ಈ ವರ್ಷದ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯ ನಿಯಂತ್ರಿಸಲು ಸಾರ್ವಜನಿಕರು ನಗರ ಮತ್ತು ಪಟ್ಟಣಗಳಲ್ಲಿ ನಿರ್ಜನ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಸಾಮೂಹಿಕವಾಗಿ ಪಟಾಕಿ ಸಿಡಿಸುವಂತೆ ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಮನವಿ ಮಾಡಿದ್ದಾರೆ.
ಭಾರತ ಸರ್ಕಾರವು ಪರಿಸರ ಕಾಯ್ದೆ, 1986ರ ತಿದ್ದುಪಡಿ 1999ಮತ್ತು 2000 ಅಡಿ ಜಿಲ್ಲೆಯಲ್ಲಿ ಪಟಾಕಿಗಳು ಸಿಡಿಯುವ ಜಾಗದಿಂದ ನಾಲ್ಕು ಮೀಟರ್ ದೂರದಲ್ಲಿ 125 dB (A1) ಅಥವಾ 145 dB (c) pk ಗಿಂತ ಅಧಿಕ ಶಬ್ದ ಉಂಟು ಮಾಡುವ ಪಟಾಕಿಗಳ ತಯಾರಿಕೆ, ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ. ಪಟಾಕಿ ಸರಗಳಿಗೆ ಶಬ್ದ ಮಿತಿಯು 5 log(N) db ಅಷ್ಟು ಕಡಿಮೆ ಇರಬೇಕು (ಎನ್ ಎಂದರೆ ಪಟಾಕಿ ಸರದಲ್ಲಿರುವ ಪಟಾಕಿಗಳ ಸಂಖ್ಯೆ) ರಾತ್ರಿ 10ರಿಂದ ಬೆಳಿಗ್ಗೆ 6ರ ವರಗೆ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ ಎಂದು ತಿಳಿಸಿದ್ದಾರೆ.












Click it and Unblock the Notifications