ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಕೈಬಿಡದಿದ್ದರೆ ಹೋರಾಟ
ಮೈಸೂರು, ಜ. 29: ದೇಶದಲ್ಲಿ ಕೈಗಾರಿಕಾ ಕ್ರಾಂತಿ ನಡೆಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 2013ರ ಭೂ ಸ್ವಾಧೀನ ಮತ್ತು ಪುನರ್ವಸತಿ ಕಾಯಿದೆಗೆ ತಿದ್ದುಪಡಿ ತರಲು ಉದ್ದೇಶಿದೆ. ಇದು ರೈತ ವಿರೋಧಿ ನಿರ್ಧಾರವಾಗಿದ್ದು ತಿದ್ದುಪಡಿ ಕೈಬಿಡಬೇಕೆಂದು ಮೈಸೂರು ರೈತರು ಕೋರಿದ್ದಾರೆ.
ಈ ಕುರಿತು ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ರೈತರು ಮೈಸೂರು ಉಪ ವಿಭಾಗಾಧಿಕಾರಿ ಮೂಲಕ ಮನವಿ ಸಲ್ಲಿಸಿದ್ದಾರೆ. ಮೊದಲಿನ ಕಾಯಿದೆ ಪ್ರಕಾರ ರೈತರ ಭೂಮಿಯು ಐದು ವರ್ಷದೊಳಗೆ ಮೂಲ ಉದ್ದೇಶಕ್ಕೆ ಬಳಕೆಯಾಗದಿದ್ದರೆ ರೈತರಿಗೆ ವಾಪಸ್ ನೀಡಬೇಕು. ಆದರೆ, ಈಗ ತರಲು ಉದ್ದೇಶಿಸಿರುವ ತಿದ್ದುಪಡಿಯು ಐದು ವರ್ಷಗಳ ನಂತರವೂ ಭೂಮಿ ಬಳಕೆಯಾಗದಿದ್ದರೂ ಸರ್ಕಾರದ ಹತ್ತಿರವೇ ಇರುತ್ತದೆ ಎಂದು ರೈತರು ಆರೋಪಿಸಿದ್ದಾರೆ. [ರೈತರಿಗೆ ತಂತ್ರಜ್ಞಾನ ಕೊಡಿ]

ಹಿಂದಿನ ಕಾಯಿದೆ ಪ್ರಕಾರ ಭೂಮಿಗಳನ್ನು ಕೈಗಾರಿಕೆ ಸ್ಥಾಪನೆಯ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬಹುದಿತ್ತು. ಆದರೆ, ಹೊಸ ತಿದ್ದುಪಡಿಯ ಪ್ರಕಾರ ರಕ್ಷಣಾ ಚಟುವಟಿಕೆ, ಗ್ರಾಮೀಣ ಮೂಲಸೌಕರ್ಯ ಹಾಗೂ ರಾಷ್ಟ್ರೀಯ ರಕ್ಷಣೆಗೋಸ್ಕರವೂ ಬಳಸಬಹುದು. [ಮೋದಿಗೆ ಪಾಠ ಕಲಿಸ್ತಾರೆ ಜನ]
ಉದ್ದೇಶಿತ ತಿದ್ದುಪಡಿಯನ್ನು ಕೈಬಿಡದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ರೈತರು ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications