Mysuru Dasara 2024: ಮೈಸೂರಿನ ಮನೆಗಳಲ್ಲೀಗ ಬೊಂಬೆಗಳದ್ದೇ ದರ್ಬಾರ್: ಏನಿದರ ವಿಶೇಷತೆ?
ಮೈಸೂರು, ಅಕ್ಟೋಬರ್, 05: ಜಗವೇ ಒಂದು ಬೊಂಬೆಯಾಟ. ಆ ವಿಧಿ ಸೂತ್ರಧಾರ. ಅವನಾಡಿಸಿದಂತೆ ನಾವಾಡುವವಯ್ಯಾ ಎಂಬುವುದು ಜನಜನಿತ ಮಾತು. ಅದಕ್ಕಾಗಿಯೇ ಏನೋ ಮೈಸೂರನ್ನಾಳಿದ ರಾಜಒಡೆಯರು ತಮ್ಮ ಆರಾಧನೆಯಲ್ಲಿ ಗೊಂಬೆಗೂ ಒಂದು ಮಹತ್ವದ ಸ್ಥಾನ ನೀಡಿ ನಾಡಹಬ್ಬ ನವರಾತ್ರಿಯಲ್ಲಿ ದಸರಾ ಮೆರವಣಿಗೆಯಂತೆಯೇ ಬೊಂಬೆಗೂ ವಿಶೇಷ ಸ್ಥಾನ ಕಲ್ಪಿಸಿದರು.
ನವರಾತ್ರಿಯ ಒಂಬತ್ತು ದಿನವೂ ಅರಮನೆಯಲ್ಲಿ ವಿವಿಧ ಬೊಂಬೆಗಳನ್ನು ಸಾಲಾಂಕೃತವಾಗಿ ಜೋಡಿಸಿ, ಪೂಜಿಸಿ ಪ್ರದರ್ಶಿಸುವುದು ರಾಜಒಡೆಯರ ಆಡಳಿತದ ಆರಂಭದಿಂದಲೂ ಬಂದಿದ್ದು, ಅದರಂತೆಯೇ ಮೈಸೂರಿನ ಮನೆಮನೆಗಳಲ್ಲಿ ಬೊಂಬೆಗಳ ದರ್ಬಾರ್ ನಡೆಯುತ್ತದೆ.

ನವರಾತ್ರಿಯ ಈ ದಿನಗಳಲ್ಲಿ ಮೈಸೂರನ್ನೊಮ್ಮೆ ಸುತ್ತುಹೊಡೆದರೆ ಅರಮನೆ, ಕೋಟೆ, ಪಾರಂಪರಿಕ ಕಟ್ಟಡಗಳು, ಅಂಗಡಿ ಮಳಿಗೆಗಳು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದರೆ, ಮನೆಮನೆಗಳಲ್ಲಿ ಬಣ್ಣಬಣ್ಣದ ಬೊಂಬೆಗಳನ್ನು ಕೂರಿಸಿ ಮಹಿಳೆಯರು ಆರತಿ ಬೆಳಗುತ್ತಿರುತ್ತಾರೆ. ಇನ್ನು ಈ ಬೊಂಬೆಗಳ ದರ್ಬಾರ್ ಜೋರಾಗಿದ್ದು, ಇದು ಮೈಸೂರು ದಸರಾದ ಮೆರಗನ್ನು ಹೆಚ್ಚಿಸುತ್ತಿದೆ.
ಆಶ್ವೀಜ ಮಾಸದ ಶುಕ್ಲಪಕ್ಷದ ಪ್ರಥಮ ದಿವಸ ನವರಾತ್ರಿ ಆರಂಭವಾಗುವಾಗ ಮನೆ-ಮನೆಗಳಲ್ಲಿ ವಿವಿಧ ಬಣ್ಣದ ವಿವಿಧ ನಮೂನೆಯ ಗೊಂಬೆಗಳನ್ನು ಅಲಂಕರಿಸಿ ಮುತೈದೆಯರು ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸುತ್ತಾರೆ. ಇದು ಪಾಡ್ಯದಿಂದ ಆರಂಭವಾಗಿ ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ,ಅಷ್ಠಮಿ, ನವಮಿ ತನಕ ಒಂಬತ್ತು ದಿನಗಳ ಕಾಲ ನಡೆಯುತ್ತದೆ. ಇದು ನವರಾತ್ರಿಯ ವಿಶೇಷ ಆಚರಣೆಯಾಗಿ ಗಮನ ಸೆಳೆಯುತ್ತದೆ.
ಕಲಾಪೋಷಕ ರಾಜಒಡೆಯರ್‌ಗೆ ಗೌರವ: ನವರಾತ್ರಿ ಸಮಯದಲ್ಲಿ ಮನೆ-ಮನೆಗಳಲ್ಲಿ ಬೊಂಬೆ ಕೂರಿಸಿ ಪೂಜಿಸುವ ಸಂಪ್ರದಾಯ ಕೇವಲ ಮೈಸೂರಿನಲ್ಲಿ ಮಾತ್ರವಲ್ಲ, ರಾಜ್ಯದ ಇತರ ಕಡೆಗಳಲ್ಲಿಯೂ ಇರುವುದನ್ನು ನಾವು ಕಾಣಬಹುದು. ಆದರೆ ಮೈಸೂರಿನಲ್ಲಿ ಮಾತ್ರ ಬೊಂಬೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದನ್ನು ನಾವು ಕಾಣಬಹುದು. ಮೈಸೂರಿನ ಹಲವು ಮನೆಗಳಲ್ಲಿ ಬೊಂಬೆಗಳನ್ನು ಕೂರಿಸಲಾಗುತ್ತಿದ್ದು, ಕೆಲವರು ಸಾರ್ವಜನಿಕರಿಗೂ ವೀಕ್ಷಿಸಲು ಅವಕಾಶ ನೀಡುತ್ತಾರೆ. ಬೊಂಬೆ ಪ್ರದರ್ಶನದಲ್ಲಿಯೂ ವಿಶೇಷತೆಯನ್ನು ನಾವು ಕಾಣಬಹುದಾಗಿದ್ದು, ಇಲ್ಲಿ ರಾಜ-ರಾಣಿಯರದ್ದೇ ದರ್ಬಾರು ಇರುತ್ತದೆ.
ಮೈಸೂರು ರಾಜಒಡೆಯರ ಪ್ರತೀಕವೆಂಬಂತೆ ಅವರಿಗೆ ಗೌರವ ಸೂಚಕವಾಗಿ ಪ್ರತಿ ಮನೆಯ ಬೊಂಬೆಗಳ ಸಾಲಿನಲ್ಲಿ ರಾಜರಾಣಿ ಬೊಂಬೆ ಮೇಲ್ಪಂಕ್ತಿಯಲ್ಲಿ ಸ್ಥಾನ ಪಡೆದಿರುತ್ತವೆ. ಈ ಬೊಂಬೆಗಳನ್ನು ಪಟ್ಟದ ಬೊಂಬೆಗಳೆಂದು ಕರೆಯಲಾಗುತ್ತದೆ. ಉಳಿದಂತೆ ಅಂಬಾರಿ ಹೊತ್ತ ಆನೆ, ಪದಾತಿದಳ, ಕುದುರೆ, ಒಂಟೆಗಳ ಸಾಲು, ಮೈಸೂರು ಅರಮನೆ ಸೇರಿದಂತೆ ಹಲವು ಬೊಂಬೆಗಳು ಪ್ರದರ್ಶನದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುತ್ತವೆ.
ಮನೆಯಲ್ಲಿ ಬೊಂಬೆಗಳನ್ನಿಡುವ ವೇಳೆ ಮೈಸೂರನ್ನಾಳಿದ ಅದರಲ್ಲೂ ದಸರಾ ಆಚರಣೆಯನ್ನು ಜಾರಿಗೆ ತಂದ ರಾಜಒಡೆಯರ್‌ಗೂ ಸ್ಥಾನ ನೀಡಲಾಗುತ್ತದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಬೊಂಬೆಯನ್ನಿಡುವುದು ಒಂದು ಆಚರಣೆಯಾಗಿ ಉಳಿಯದೆ ಅದಕ್ಕೆ ಪ್ರೋತ್ಸಾಹ ನೀಡಿ ಬೆಳೆಸಿದವರು ಮೈಸೂರಿನ ಮಹಾರಾಜರಾಗಿದ್ದ ರಾಜಒಡೆಯರ್. ಇವರು ಕಲಾ ಪೋಷಕರಾಗಿದ್ದರು. ಆದ್ದರಿಂದ ಆಡಳಿತದಲ್ಲಿ ಕಲೆಗೆ ಒತ್ತು ನೀಡಿದ್ದರು.
ಬೊಂಬೆ ಪ್ರದರ್ಶನದಲ್ಲಿದೆ ಕಥಾ ಹಂದರ: ಇವರು ಅರಮನೆಯಲ್ಲಿ ದರ್ಬಾರ್ ಹಾಲ್, ಚಿತ್ರಶಾಲೆ, ವಿವಾಹ ಮಂಟಪ, ಭೋಜನ ಶಾಲೆ, ಶಸ್ತ್ರಗಾರವಿರುವಂತೆ ಬೊಂಬೆಗಳ ಪ್ರದರ್ಶನಕ್ಕೂ ಒಂದು ಪ್ರತ್ಯೇಕ ಸ್ಥಳವನ್ನು ಮೀಸಲಿರಿಸಿದ್ದು ವಿಶೇಷವಾಗಿದೆ. ಇನ್ನು ಅವರು ಬೊಂಬೆಗಳನ್ನೆಷ್ಟು ಪ್ರೀತಿಸುತ್ತಿದ್ದರೆಂಬುದಕ್ಕೆ ಅರಮನೆಯ ತೊಟ್ಟಿಮನೆಯಲ್ಲಿ ಗತಕಾಲದ ಕಲಾತ್ಮಕತೆಯನ್ನು ಸಾರುವ ದಂತ, ಶ್ರೀಗಂಧದ ಮರ ಸೇರಿದಂತೆ ಬೆಲೆಬಾಳುವ ಮರಗಳಿಂದ ಕೆತ್ತಿದ ಅಪೂರ್ವ ಬೊಂಬೆಗಳಿರುವುದೇ ಸಾಕ್ಷಿಯಾಗಿದೆ.
ಕಲಾಪೋಷಕರಾಗಿದ್ದ ರಾಜಒಡೆಯರು ಕಲಾತ್ಮಕ ಬೊಂಬೆಗಳ ಕೆತ್ತನೆಯನ್ನೇ ತಮ್ಮ ಬದುಕಾಗಿಸಿಕೊಂಡ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಬದುಕಲು ಅವಕಾಶ ಮಾಡಿಕೊಟ್ಟರು. ಇವರ ಪ್ರೋತ್ಸಾಹದಿಂದ ಹಲವು ಕಲಾಕಾರರು ಬೆಳಕಿಗೆ ಬಂದರು ಎಂಬುವುದರಲ್ಲಿ ಎರಡು ಮಾತಿಲ್ಲ.
ನವರಾತ್ರಿ ಆರಂಭದಂದು ಮನೆಗಳಲ್ಲಿ ಬೊಂಬೆಗಳನ್ನು ಕೂರಿಸುವ ಸಂಭ್ರಮ ಕಾಣಿಸುತ್ತದೆ. ಅಂದು ಮಣ್ಣು, ಗಾಜು, ಉಲ್ಲಾನ್, ಪ್ಲಾಸ್ಟಿಕ್, ಪಿಂಗಾಣಿ, ಮಣ್ಣು ಶ್ರೀಗಂಧ ಹೀಗೆ ವಸ್ತುಗಳಿಂದ ತಯಾರಿಸಿದ ಗೊಂಬೆಗಳನ್ನು ಮನೆಯಲ್ಲಿ ಕೂರಿಸುತ್ತಾರೆ. ಈ ಗೊಂಬೆಗಳು ಸಾಮಾನ್ಯವಾಗಿ ಪುರಾಣದ ಕಥೆಗಳನ್ನು, ನಾಡಿನ ಪರಂಪರೆಯನ್ನು ಸಾರುತ್ತಿರುತ್ತವೆ. ಈಶ್ವರ, ಗಣಪತಿ, ಲಕ್ಷ್ಮಿ, ಸರಸ್ವತಿ, ದುರ್ಗಿ ಮೊದಲಾದ ದೇವರ ಮೂರ್ತಿಗಳನ್ನೂ, ದುಷ್ಟ ಸಂಹಾರಕ್ಕೆ ಸಂಬಂಧಿಸಿದ ಕಥಾ ಹಿನ್ನಲೆಗಳನ್ನು ಹೊಂದಿರುವ ಗೊಂಬೆಗಳು ಇಲ್ಲಿ ಸ್ಥಾನ ಪಡೆಯುತ್ತವೆ.
ದಸರಾದಲ್ಲಿ ಬೊಂಬೆ ಪ್ರದರ್ಶನಕ್ಕೆ ಪ್ರೋತ್ಸಾಹ: ಬೊಂಬೆ ಪ್ರದರ್ಶನದ ಬಗ್ಗೆ ಕೆಲವರು ಹಿಂದಿನ ಕಾಲದಲ್ಲಿ ಮಕ್ಕಳಿಗೆ ಈಗಿನ ಕಾಲದಂತೆ ಮನೋರಂಜನೆಗೆ ಯಾವುದೇ ಆಧುನಿಕ ಆಟಿಕೆಗಳಿರಲಿಲ್ಲ. ಹಾಗಾಗಿ ಮಕ್ಕಳು ಬಾಲ್ಯದಿಂದಲೇ ಗೊಂಬೆಗಳೊಂದಿಗೆ ಆಡುತ್ತಾ ಬೆಳೆಯುತ್ತಿದ್ದರು. ಅಲ್ಲದೆ, ಬಾಲ್ಯವಿವಾಹವೂ ನಡೆಯುತ್ತಿದ್ದ ಕಾಲವಾದುದರಿಂದ ಹೆತ್ತವರು ಮಗಳನ್ನು ಮದುವೆ ಮಾಡಿಕೊಡುವಾಗ ಆಟವಾಡುತ್ತಿದ್ದ ಗೊಂಬೆಗಳನ್ನು ಸಹ ಜೊತೆಯಲ್ಲಿಯೇ ನೀಡುತ್ತಿದ್ದರು. ಅಲ್ಲದೆ, ವರ್ಷಕ್ಕೊಮ್ಮೆ ಈ ಗೊಂಬೆಗಳನ್ನು ಒಂದೆಡೆ ಪ್ರತಿಷ್ಠಾಪಿಸಿ ಅದಕ್ಕೆ ಆರತಿ ಬೆಳಗಿ ಪೂಜಿಸುವಂತೆ ಹೇಳುತ್ತಿದ್ದರೆಂದೂ ಅದರಂತೆ ಈ ಬೊಂಬೆ ಹಬ್ಬ ರೂಢಿಗೆ ಬಂದಿರಬಹುದೆಂದು ಹೇಳುತ್ತಾರೆ.
ಅದು ಏನೇ ಇರಲಿ ಬೊಂಬೆ ಕೂರಿಸುವ ಸಂಪ್ರದಾಯವನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿರುವುದು ವಿಶೇಷವೇ. ಅದರಂತೆ ಮೈಸೂರು ದಸರಾದಲ್ಲಿ ಬೊಂಬೆ ಕೂರಿಸುವ ಮೈಸೂರಿನ ಮಹಿಳೆಯರನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಮೈಸೂರು ದಸರಾ ಸಾಂಸ್ಕೃತಿಕ ಸಮಿತಿ ದಸರಾ ಬೊಂಬೆ ಪ್ರದರ್ಶನವನ್ನು ಏರ್ಪಡಿಸಿ ಉತ್ತಮ ಪ್ರದರ್ಶನಕ್ಕೆ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಾ ಬಂದಿರುವುದು ವಿಶೇಷವಾಗಿದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications