Suttur Jatra 2023 : ಇತಿಹಾಸ ಪ್ರಸಿದ್ಧ ಸುತ್ತೂರು ಜಾತ್ರೆಗೆ ಅದ್ಧೂರಿ ಚಾಲನೆ: ಶ್ರೀಮಠಕ್ಕೆ ಹರಿದು ಬಂದ ಭಕ್ತಸಾಗರ
ಮೈಸೂರು, ಜನವರಿ 19: ಕೊರೊನಾ ಕಾರಣದಿಂದ ಕಳೆದ ಎರಡು ವರ್ಷ ನಿಂತಿದ್ದ ಹೆಸರಾಂತ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ.
ಕಪಿಲ ನದಿ ತೀರವಾದ ಸುತ್ತೂರಿನಲ್ಲಿ ಬುಧವಾರ ಅಕ್ಷರಶಃ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ಕುಟುಂಬ ಸಮೇತ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದು, ಮಕ್ಕಳು ಬೆಂಡುಬತ್ತಾಸು ಮೆಲುತ್ತ ಜಾತ್ರೆಯಲ್ಲಿ ಸಂಭ್ರಮಿಸುತ್ತಿದ್ದಾರೆ. ಇಡೀ ಸುತ್ತೂರು ಜಾತ್ರೆ ಹೊನಲಿನಲ್ಲಿ ಮಿಂದಿದ್ದು, ಲಕ್ಷಾಂತರ ಮಂದಿಗೆ ಅನ್ನದಾಸೋಹವೂ ನಡೆಯುತ್ತಿದೆ.
ಮೊದಲ ದಿನ ರಾಜ್ಯಮಟ್ಟದ ಭಜನಾ ಮೇಳ, ದೋಣಿ ವಿಹಾರ, ರಾಜ್ಯಮಟ್ಟದ ಚಿತ್ರಸಂತೆ, ಸಿರಿಧಾನ್ಯ ಮೇಳ, ಕೃಷಿ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ.

ರೈತರಲ್ಲಿ ಜಾಗೃತಿ ಮೂಡಿಸುವ ಜಾತ್ರೆ ಸುತ್ತೂರು ಜಾತ್ರೆ
ಸುತ್ತೂರು ಮಠದಲ್ಲಿ ನಡೆದ ಸುತ್ತೂರು ಜಾತ್ರಾ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ 6 ದಿನಗಳ ಜಾತ್ರೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, "ಸುತ್ತೂರು ಜಾತ್ರೆ ಇಡೀ ನಾಡಿನಲ್ಲಿ ಪ್ರಸಿದ್ಧ ಜಾತ್ರೆ. ಇದು ಕೇವಲ ಜಾತ್ರೆಯಲ್ಲ ರೈತರಲ್ಲಿ ಜಾಗೃತಿ ಮೂಡಿಸುವ, ದೀನ ದುರ್ಬಲರಿಗೆ ಹಲವು ಸೌಲಭ್ಯ ಕಲ್ಪಿಸುವ ಕಾರ್ಯಕ್ರಮ" ಎಂದು ಸಂತಸ ವ್ಯಕ್ತಪಡಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಆಗಿದ್ದರೆ ಸುತ್ತೂರು ಮಠ ಕಾರಣ
ಮಾತು ಮುಂದುವರಿಸಿದ ಅವರು, "ಹಳೆ ಮೈಸೂರು ಭಾಗದಲ್ಲಿ ಸುತ್ತೂರು ಜಾತ್ರೆಗೆ ತನ್ನದೆ ವೈಶಿಷ್ಟ್ಯ ಇದೆ. ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಆಗಿದ್ದರೆ ಅದಕ್ಕೆ ಸುತ್ತೂರು ಮಠ ಕಾರಣ. ಅಮೆರಿಕಾ, ದುಬೈನಲ್ಲೂ ಸುತ್ತೂರು ಶಾಲೆ ಇದೆ. ಭಕ್ತರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಸಾಮಾಜಿಕ ಕೆಲಸಗಳನ್ನು ಶ್ರೀಮಠ ಮಾಡುತ್ತಿದೆ" ಎಂದು ಜಾತ್ರೆಯಲ್ಲಿ ನೆರೆದಿದ್ದ ಜನರೊಂದಿಗೆ ಖುಷಿ ಹಂಚಿಕೊಂಡರು.

ಪರಂಪರೆಯ ಕೊಂಡಿಗಳನ್ನು ರಕ್ಷಿಸುವ ಕೆಲಸವನ್ನು ಶ್ರೀಮಠ ಮಾಡುತ್ತಿದೆ
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ''ರಾಜ್ಯದಲ್ಲಷ್ಟೆ ಅಲ್ಲದೆ ದೇಶದಲ್ಲಿ ಸುತ್ತೂರು ಜಾತ್ರೆ ಪ್ರಸಿದ್ಧಿ ಪಡೆದಿದೆ. 12ನೇ ಶತಮಾನದಲ್ಲಿ ಬಸವಣ್ಣನವರು ದುರ್ಬಲ ಸಮುದಾಯಕ್ಕೆ ಧ್ವನಿ ನೀಡಿ ಶಕ್ತಿ ನೀಡಿದರು. ಅದರಂತೆ ಸುತ್ತೂರು ಮಠ ಶಿಕ್ಷಣ ಹಾಗೂ ಜ್ಞಾನ ದಾಸೋಹವನ್ನು ಮಾಡುತ್ತಿದೆ. ಪರಂಪರೆಯ ಕೊಂಡಿಗಳನ್ನು ರಕ್ಷಿಸುವ ಕೆಲಸವನ್ನು ಶ್ರೀಮಠ ಮಾಡುತ್ತಿದೆ,'' ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗಣ್ಯರ ಸಮಾಗಮ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ರಾಜ್ಯ ಸಚಿವ ನಾರಾಯಣ ಸ್ವಾಮಿ, ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಚಿದಾನಂದ ಸ್ವಾಮೀಜಿ, ಶಾಸಕ ಸಿ.ಎಸ್. ನಿರಂಜನ್ ಕುಮಾರ್, ಕರ್ನಾಟಕ ರಾಜ್ಯ ಸಾಯಿ ಕರ್ಮಚಾರಿ ಆಯೋ ಗದ ಅಧ್ಯಕ್ಷ ಎಂ.ಶಿವಣ್ಣ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಲೇಖಕ ನಂದೀಶ್ ಹಂಚೆ ಸೇರಿದಂತೆ ಇತರರು ಇದ್ದರು.












Click it and Unblock the Notifications