ಮಗ ಸತ್ತ ನಾಲ್ಕು ದಿನದಲ್ಲೇ ಅಪ್ಪನ ಸಾವು; ಕುಟುಂಬಕ್ಕೆ ಕೊರೊನಾ ತಂದಿತ್ತ ಸಂಕಟ
ಮೈಸೂರು, ಜುಲೈ 18: ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮಿತಿ ಮೀರುತ್ತಿವೆ. ಜಿಲ್ಲಾಡಳಿತ ಸೋಂಕಿನ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ವಹಿಸಿದ್ದರೂ ದಿನೇ ದಿನೇ ಹೆಚ್ಚು ಪ್ರಕರಣಗಳು ಕಂಡುಬರುತ್ತಿರುವುದು ಆತಂಕ ಮೂಡಿಸಿದೆ.
Recommended Video
ಈ ನಡುವೆ ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ ಅಪ್ಪ ಮಗ ಬಲಿಯಾಗಿರುವ ದಾರುಣ ಸಂಗತಿ ನಡೆದಿದೆ. ಮಗ ಸತ್ತ ನಾಲ್ಕು ದಿನದಲ್ಲೇ ಅಪ್ಪನೂ ಕೊರೊನಾ ವೈರಸ್ ನಿಂದಾಗಿ ಸಾವನ್ನಪ್ಪಿದ್ದಾರೆ. ಕೃಷಿ ಇಲಾಖೆ ಸಹಾಯಕ ಇಂಜಿನಿಯರ್ ಸಂಸಾರದಲ್ಲಿ ಕೊರೊನಾ ಅಟ್ಟಹಾಸ ಮೆರೆದ ಘಟನೆ ಬಗ್ಗೆ ವಿವರ ಇಲ್ಲಿದೆ...

ಕೊರೊನಾದಿಂದ ಸಾವನ್ನಪ್ಪಿದ್ದ 12 ವರ್ಷದ ಮಗ
ಕೃಷಿ ಇಲಾಖೆ ಸಹಾಯಕ ಇಂಜಿನಿಯರ್ ಕುಟುಂಬದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಕಳೆದ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದರು. ಪತ್ನಿ ಹಾಗೂ ಮೂವರು ಮಕ್ಕಳ ಸಮೇತ ಇಂಜಿನಿಯರ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಜುಲೈ 15ರಂದು 12 ವರ್ಷದ ಪುತ್ರ ಸಾವನ್ನಪ್ಪಿದ್ದ.

ಮಗ ಸತ್ತ ನಾಲ್ಕೇ ದಿನಗಳ ಅಂತರದಲ್ಲಿ ಅಪ್ಪ ಸಾವು
ಮಗ ಸತ್ತ ನಂತರ ಇಂಜಿನಿಯರ್ ಪರಿಸ್ಥಿತಿಯೂ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ಅವರನ್ನು ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ 47 ವರ್ಷದ ಇಂಜಿನಿಯರ್ ಸಾವನ್ನಪ್ಪಿದ್ದಾರೆ. ಮಗ ಸತ್ತ ನಾಲ್ಕೇ ದಿನಗಳ ಅಂತರದಲ್ಲಿ ತಂದೆಯೂ ಸಾವನ್ನಪ್ಪಿದ್ದು, ಅವರ ಕುಟುಂಬಕ್ಕೆ ಅರಗಿಸಿಕೊಳ್ಳಲಾರದ ನೋವಾಗಿದೆ.

ಕೋವಿಡ್ ಆಸ್ಪತ್ರೆಯಲ್ಲಿ ಪತ್ನಿ, ಇಬ್ಬರು ಹೆಣ್ಣು ಮಕ್ಕಳು
ಸದ್ಯಕ್ಕೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸಾವನ್ನಪ್ಪಿದ ಅಪ್ಪ ಮಗನ ಅಂತ್ಯಕ್ರಿಯೆಯಲ್ಲೂ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಭಾಗವಹಿಸಲು ಸಾಧ್ಯವಾಗಿಲ್ಲ. ಕೊರೊನಾ ತಂದ ಈ ದುಃಸ್ಥಿತಿಗೆ ಇಡೀ ಕುಟುಂಬವೇ ನಲುಗುವಂತಾಗಿದೆ.

ತಿ.ನರಸೀಪುರದಲ್ಲಿ ಅರ್ಧ ಶತಕ ದಾಟಿದ ಸೋಂಕು
ಮೈಸೂರಿನ ನರಸೀಪುರದಲ್ಲಿ ಮತ್ತೆ 5 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಎಸ್.ಕೆಬ್ಬೇಹುಂಡಿ ಗ್ರಾಮದ 30 ವರ್ಷದ ಪುರುಷ, ಹೊರಳಹಳ್ಳಿ ಗ್ರಾಮದ 70 ವರ್ಷದ ಮಹಿಳೆ, ಬನ್ನೂರು ಪಟ್ಟಣದ 34 ವರ್ಷದ ಪುರುಷ ಹಾಗೂ ಮೂಗೂರು ಗ್ರಾಮದ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರೆಲ್ಲರನ್ನೂ ಕೋವಿಡ್ 19 ಆಸ್ಪತ್ರೆಗೆ ರವಾನಿಸಲಾಗಿದೆ.












Click it and Unblock the Notifications