ಮೈಸೂರಿನಲ್ಲಿ ಶುರುವಾಗಿದೆ ಚುನಾವಣಾ ಬೆಟ್ಟಿಂಗ್ ಭರಾಟೆ
ಮೈಸೂರು, ಮೇ 14 : ಬಹು ನಿರೀಕ್ಷಿತ ವಿಧಾನಸಭಾ ಚುನಾವಣೆ ಮತದಾನ ಮುಗಿದಿವೆ, ಈಗೇನಿದ್ದರು ಗೆಲುವು ಸೋಲಿನ ಲೆಕ್ಕಾಚಾರವಷ್ಟೆ. ಇದೇ ಸಮಯದ 'ಸದುಪಯೋಗ?!' ಪಡೆದುಕೊಳ್ಳಲು ಮುಂದಾಗಿದ್ದಾರೆ ಜೂಜುಕೋರರು.
ಹೌದು, ರಾಜ್ಯದ ಹಲವೆಡೆ ಈಗ ಚುನಾವಣಾ ಫಲಿತಾಂಶದ ಮೇಲೆ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದೆ ಅದರಲ್ಲಿಯೂ ಮೈಸೂರಿನಲ್ಲಂತೂ ಬೆಟ್ಟಿಂಗ್ ಬಲು ಜೋರು. ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪರ ಹಾಗೂ ವಿರುದ್ಧ ಬೆಟ್ಟಿಂಗ್ ದಂಧೆ ಎಗ್ಗಿಲ್ಲದೆ ಸಾಗುತ್ತಿದೆ.
ಚುನಾವಣೆ ಘೋಷಣೆಯಾದ ಕಳೆದ ಒಂದೂವರೆ ತಿಂಗಳಿನಿಂದಲೂ ಆಯಾ ರಾಜಕೀಯ ಪಕ್ಷಗಳ ಪರ ಬಿರುಸಿನ ಪ್ರಚಾರ ಕೈಗೊಂಡಿದ್ದ ಕಾರ್ಯಕರ್ತರು ಚುನಾವಣೆ ಮುಗಿಯುತ್ತಿದ್ದಂತೆ ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಹಣ, ನಿವೇಶನ, ಕುರಿ, ಮೇಕೆ ಮತ್ತಿತರ ವಸ್ತುಗಳನ್ನು ಪಣಕ್ಕಿಡುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿ ಕೆಲ ವಿಧಾನಸಭಾ ಕ್ಷೇತ್ರಗಳು ಜಿದ್ದಾಜಿದ್ದಿನಿಂದ ಕೂಡಿವೆ. ಹೀಗಾಗಿ ಮೇ 15ರ ಫಲಿತಾಂಶದತ್ತ ಎಲ್ಲರೂ ಚಿತ್ತ ಹರಿಸಿದ್ದಾರೆ. ಈ ನಡುವೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಜನರು ಚುನಾವಣೆಯಲ್ಲಿ ಸ್ಪರ್ಧಿಸಿರುವ ತಮ್ಮ, ತಮ್ಮ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸದೊಂದಿಗೆ ಲಕ್ಷಾಂತರ ರೂ. ಮೌಲ್ಯದ ನಿವೇಶನ ಹಾಗೂ ಹಣವನ್ನು ಪಣಕ್ಕಿಟ್ಟಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅತಿ ಹೆಚ್ಚು ಬೆಟ್ಟಿಂಗ್
ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಘೋಷಿಸಲ್ಪಟ್ಟಿರುವ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಹಾಗೂ ಜನತಾದಳ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರ ನಡುವೆ ಏರ್ಪಟ್ಟಿರುವ ಸ್ಪರ್ಧೆ ಇಡೀ ರಾಜಕೀಯ ರಂಗದಲ್ಲಿ ಕುತೂಹಲ ಮೂಡಿಸಿದ್ದು, ಇಲ್ಲಿ ಅತಿ ಹೆಚ್ಚು ಬೆಟ್ಟಿಂಗ್ ನಡೆಯುತ್ತಿದೆ.
ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡ ಅವರ ಪರವಾಗಿ ಕ್ಷೇತ್ರದ ಜನರು ಅತಿ ಹೆಚ್ಚು ಹಣವನ್ನು ಬೆಟ್ಟಿಂಗ್ ರೂಪದಲ್ಲಿ ತೊಡಗಿಸುತ್ತಿದ್ದಾರೆ. ಆದರೆ, ಜಿಟಿಡಿ ಅವರ ಕಡೆಯವರೂ ಸಹ ತಾವೇನೂ ಕಡಿಮೆ ಇಲ್ಲ ಎಂದು ತಮ್ಮ ನಾಯಕನ ಪರ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಗೆ ಬರುವ ಹಿನಕಲ್, ಇಲವಾಲ, ಉದ್ಬೂರು, ಬೋಗಾದಿ, ಹೊಸಹುಂಡಿ, ರಾಮಕೃಷ್ಣನಗರ, ಮತ್ತಿತರ ಪ್ರದೇಶಗಳಲ್ಲದೆ, ಕ್ಷೇತ್ರವನ್ನು ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ ಕೂಡ ಸಿದ್ದರಾಮಯ್ಯ ಹಾಗೂ ಜಿಟಿಡಿ ಅವರ ಪರ ಬೆಟ್ಟಿಂಗ್ ಹವಾ ಮುಂದುವರಿದಿದೆ.
ಉಳಿದಂತೆ ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಮುಖಾಮುಖಿ ಆಗಿರುವ ಬಾದಾಮಿ ಕ್ಷೇತ್ರದ ಬಗ್ಗೆ ಕೂಡ ಮೈಸೂರಿನಲ್ಲಿ ಬೆಟ್ಟಿಂಗ್ ನಡೆಯುತ್ತಿದೆ. ಇದು ಮಾತ್ರವಲ್ಲದೆ ಮೈಸೂರು ನಗರ ವ್ಯಾಪ್ತಿಯ ಜಿದ್ದಾಜಿದ್ದಿ ಕ್ಷೇತ್ರವೆಂದು ಹೆಸರು ವಾಸಿಯಾಗಿರುವ ಕೃಷ್ಣರಾಜ ಕ್ಷೇತ್ರದಲ್ಲಿಯೂ ಕೂಡ ಬೆಟ್ಟಿಂಗ್ ವ್ಯಾಪಕ ವಾಗಿ ನಡೆಯುತ್ತಿದೆ. ಮಾಜಿ ಸಚಿವ ಎಸ್.ಎ.ರಾಮದಾಸ್ ಹಾಗೂ ಹಾಲಿ ಶಾಸಕ ಎಂ.ಕೆ. ಸೋಮಶೇಖರ್ ಅವರ ಪರ ಹಾಗೂ ವಿರುದ್ಧ ಲಕ್ಷಾಂತರ ರೂ. ಹಣವನ್ನು ಅಭಿಮಾನಿಗಳು ಪಣಕ್ಕಿಟ್ಟಿದ್ದು, ಫಲಿತಾಂಶಕ್ಕಾಗಿ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಇನ್ನು ನರಸಿಂಹರಾಜ ಕ್ಷೇತ್ರದಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಅಬ್ದುಲ್ ಮಜೀದ್ ಪರ ಹೆಚ್ಚಿನ ಬೆಟ್ಟಿಂಗ್ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ತನ್ವೀರ್ ಸೇಠ್ ಹಾಗೂ ಬಿಜೆಪಿ ಅಭ್ಯರ್ಥಿ ಸಂದೇಶ ಸ್ವಾಮಿ ಪರ ಕೂಡ ಹಲವಾರು ಮಂದಿ ಪಣ ಕಟ್ಟಿದ್ದಾರೆ.
ಮಾಜಿ ಸಚಿವ ಎ.ಎಚ್.ವಿಶ್ವನಾಥ್ ಅವರು ಕಣಕ್ಕಿಳಿದಿರುವ ಕಾರಣ ಹುಣಸೂರು ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಹಾಗೂ ವಿಶ್ವನಾಥ್ ಪರ ಅತಿ ಹೆಚ್ಚು ಬೆಟ್ಟಿಂಗ್ ದಂಧೆ ನಡೆಯುತ್ತಿದೆ. ಹುಣಸೂರಿನ ಮಂಜುನಾಥ್ ಅಭಿಮಾನಿಯೊಬ್ಬರು ತಮ್ಮ ಎರಡು ಎಕರೆ ಜಮೀನನ್ನು ಮಂಜುನಾಥ್ ಪರ ಪಣಕ್ಕಿಟ್ಟಿರುವ ಬಗ್ಗೆ ತಿಳಿದು ಬಂದಿದೆ. ವಿಶ್ವನಾಥ್ ಪರ ಕೂಡ ಸಾಕಷ್ಟು ಮಂದಿ ಹಣ ಹಾಗೂ ಜಮೀನನ್ನು ಪಣಕ್ಕಿಟ್ಟಿದ್ದಾರೆ.
ಉಳಿದಂತೆ ಕೆಆರ್.ನಗರ, ಎಚ್.ಡಿ.ಕೋಟೆ, ನಂಜನಗೂಡು ಕ್ಷೇತ್ರಗಳಲಿ ಸಾ.ರಾ.ಮಹೇಶ್, ಅನಿಲ್ ಚಿಕ್ಕಮಾದು, ಕಳಲೆ ಎನ್.ಕೇಶವಮೂರ್ತಿ ಪರ ಅತಿ ಹೆಚ್ಚಿನ ಬೆಟ್ಟಿಂಗ್ ದಂಧೆ ನಡೆಯುತ್ತಿದ್ದು, ಒಟ್ಟಾರೆ ಪ್ರಕಟವಾಗಲಿರುವ ಫಲಿತಾಂಶದಿಂದ ಯಾರು ಏನನ್ನು ಕಳೆದುಕೊಳ್ಳಲಿದ್ದಾರೆ ಎಂಬುದು ತಿಳಿದು ಬರಲಿದೆ.












Click it and Unblock the Notifications