ಈ ಬಾರಿ ಸರಳ ಸಂಪ್ರದಾಯಕ್ಕಷ್ಟೆ ಸುತ್ತೂರು ಜಾತ್ರೆ ಸೀಮಿತ
ಮೈಸೂರು, ಫೆಬ್ರವರಿ 08; ಐತಿಹಾಸಿಕ ಸುತ್ತೂರು ಜಾತ್ರೆ ಈ ಬಾರಿ ಫೆಬ್ರವರಿ 9 ಮತ್ತು 10ರಂದು ನಡೆಯಲಿದೆ. ಕೋವಿಡ್ ಮಹಾಮಾರಿಯ ಕಾರಣದಿಂದಾಗಿ ಸರಳ ಮತ್ತು ಸಂಪ್ರದಾಯಕ್ಕಷ್ಟೆ ಜಾತ್ರೆ ಸೀಮಿತವಾಗಿದೆ.
ಪ್ರತಿ ವರ್ಷವೂ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರಿನ ಶ್ರೀ ಕ್ಷೇತ್ರದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆ ಎಂದರೆ ವಿಭಿನ್ನ ಹಾಗೂ ವಿಶಿಷ್ಟವಾಗಿ ನಡೆಯುತ್ತಿತ್ತಲ್ಲದೆ, ಇಡೀ ಊರಿಗೆ ಊರೇ ಸಂಭ್ರಮಿಸುತ್ತಿತ್ತು.
ಮೈಸೂರು: ಕೊರೊನಾ ಕಾರಣದಿಂದ ಸುತ್ತೂರು ಜಾತ್ರೆ ರದ್ದು
ಸುಮಾರು ಆರು ದಿನಗಳ ಕಾಲ ನಡೆಯುತ್ತಿದ್ದ ಜಾತ್ರೆಗೆ ಸುತ್ತಮುತ್ತಲಿನ ಜನ ಮಾತ್ರವಲ್ಲದೆ ದೂರದ ಊರುಗಳಿಂದಲೂ ಜನರು ಆಗಮಿಸಿ ಜಾತ್ರಾ ಸಡಗರದಲ್ಲಿ ಮಿಂದೇಳುತ್ತಿದ್ದರು. ಸುತ್ತೂರಿನ ಜಾತ್ರೆಯಲ್ಲಿ ನೂರಾರು ಊರುಗಳ ಜನರು ಸೇರುತ್ತಿದ್ದರು.
ಸುತ್ತೂರು ಶ್ರೀಗಳಿಂದ ಮೈಸೂರು ಮೃಗಾಲಯಕ್ಕೆ ಹಣಕಾಸಿನ ನೆರವು
ಇದು ಬರೀ ಜಾತ್ರೆಯಾಗಿರದೆ ಪರಂಪರೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮಹೋತ್ಸವಗಳ ಸಂಗಮದೊಂದಿಗೆ ಗ್ರಾಮೀಣ ಸೊಗಡನ್ನು ಬಿಂಬಿಸುವ ಕಲೆಗಳ ಪ್ರದರ್ಶನವಾಗಿಯೂ ಗಮನಸೆಳೆಯುತ್ತಿತ್ತು. ರೈತರಿಂದ ಹಿಡಿದು ಉದ್ಯಮಿಗಳ ತನಕ, ಸೇವಕರಿಂದ ಆರಂಭವಾಗಿ ರಾಜಕಾರಣಿಗಳ ತನಕ ಅಷ್ಟೇ ಅಲ್ಲದೆ ವಿವಿಧ ಧಾರ್ಮಿಕ ಗುರುಗಳ ಸಮ್ಮಿಲನವೂ ಆಗುತ್ತಿತ್ತು. ಕಲೆ ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಹೀಗೆ ಎಲ್ಲವೂ ಮಿಳಿತಗೊಂಡು ಜಾತ್ರೆ ಸಡಗರ ಸಂಭ್ರಮದಲ್ಲಿಯೇ ಸಂಪನ್ನಗೊಳ್ಳುತ್ತಿತ್ತು.
ಸುತ್ತೂರು ಮಠದಿಂದ ಸಿಎಂ ಪರಿಹಾರ ನಿಧಿಗೆ 50ಲಕ್ಷ ರೂ. ದೇಣಿಗೆ

ಆರು ದಿನವಲ್ಲ ಒಂದೇ ದಿನ ಜಾತ್ರೆ
ಈ ಬಾರಿ ಜಾತ್ರೆಯಲ್ಲಿ ನಡೆಯುವ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಎಂದಿನಂತೆ ನಡೆಯಲಿದ್ದು ಸಾರ್ವಜನಿಕರಿಗೆ ಪಾಲ್ಗೊಳ್ಳಲು ಅವಕಾಶವಿರುವುದಿಲ್ಲ. ಈ ಬಾರಿಯ ಜಾತ್ರೆ ಹೇಗಿರಲಿದೆ ಎನ್ನುವುದನ್ನು ನೋಡುವುದಾದರೆ ಆರು ದಿನಗಳ ಜಾತ್ರಾ ಕಾರ್ಯಕ್ರಮವನ್ನು ಸರಳವಾಗಿ, ಸಾಂಪ್ರದಾಯಿಕವಾಗಿ ಪೂಜೆಗೆ ಸೀಮಿತಗೊಳಿಸಿ ಫೆ. 10ರಂದು ನಡೆಸಲಾಗುತ್ತಿದೆ.
ಈ ಕಾರ್ಯಕ್ರಮಗಳು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದ್ದು, ವಿಜಯಪುರದ ಶ್ರೀ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು, ಮಠಾಧಿಪತಿಗಳು, ರಾಜಕೀಯ ಮುಖಂಡರು, ಅಧಿಕಾರಿಗಳು ಹಾಗೂ ಕೆಲವು ಗಣ್ಯರಷ್ಟೆ ಭಾಗವಹಿಸಲಿದ್ದಾರೆ.

ಫೆ.9ರಿಂದ ಸುತ್ತೂರು ಜಾತ್ರೆ ಆರಂಭ
ಜಾತ್ರಾ ಪ್ರಯುಕ್ತ ಫೆಬ್ರವರಿ 9 ಮಂಗಳವಾರದಂದು ಮಧ್ಯಾಹ್ನ ಶ್ರೀಮಠದಿಂದ ಉತ್ಸವಮೂರ್ತಿಯನ್ನು ಕರ್ತೃಗದ್ದುಗೆಗೆ ಬಿಜಯಂಗೈಸಲಾಗುವುದು. ನಂತರ ಎಲ್ಲ ಪೂಜಾಕೈಂಕರ್ಯಗಳು ಪ್ರಾರಂಭವಾಗುತ್ತವೆ. ಫೆಬ್ರವರಿ 10 ಬುಧವಾರ ಪ್ರಾತಃಕಾಲ 4 ಗಂಟೆಗೆ ಕರ್ತೃಗದ್ದುಗೆ, ಮಹದೇಶ್ವರ ಸನ್ನಿಧಿ, ನಂಜುಂಡೇಶ್ವರ, ವೀರಭದ್ರೇಶ್ವರ ಮತ್ತು ಸೋಮೇಶ್ವರ ದೇವಸ್ಥಾನಗಳಲ್ಲಿ ಮಹಾರುದ್ರಾಭಿಷೇಕ, ಪ್ರಾತಃಕಾಲ 5 ಗಂಟೆಗೆ ಶಿವದೀಕ್ಷೆ-ಲಿಂಗದೀಕ್ಷೆ, ಬೆಳಗ್ಗೆ 6 ಗಂಟೆಗೆ ಸುತ್ತೂರು ಗ್ರಾಮದ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಜರುಗಲಿವೆ. 6ಕ್ಕೆ ಪ್ರಭಾತ್ ಫೇರಿ, 7.20ಕ್ಕೆ ಕನಕಪುರದ ಶ್ರೀ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳವರಿಂದ ಷಟ್‍ಸ್ಥಲ ಧ್ವಜಾರೋಹಣ, 7.30ಕ್ಕೆ ಆದಿಜಗದ್ಗುರುಗಳವರ ಉತ್ಸವಮೂರ್ತಿಗೆ ರಾಜೋಪಚಾರ, 10 ಗಂಟೆಗೆ ರಥಗಳಿಗೆ ವಿಶೇಷ ಪೂಜೆ ನೆರವೇರುತ್ತದೆ.

ಉತ್ಸವಮೂರ್ತಿಗೆ ರುದ್ರಾಭಿಷೇಕ
ಮಧ್ಯಾಹ್ನ 2.35ಕ್ಕೆ ಕಪಿಲಾ ನದಿತೀರದಲ್ಲಿ (ತೆಪ್ಪದಕಡುವು) ಉತ್ಸವಮೂರ್ತಿಗೆ ರುದ್ರಾಭಿಷೇಕ ಮತ್ತು ವಿಶೇಷ ಪೂಜೆಯನ್ನು ನೆರವೇರಿಸಿ ಸಂಜೆ 6.30ಕ್ಕೆ ಉತ್ಸವಮೂರ್ತಿಯನ್ನು ಕರ್ತೃಗದ್ದುಗೆಯಿಂದ ಶ್ರೀಮಠಕ್ಕೆ ಬಿಜಯಂಗೈಸಲಾಗುವುದು. ಫೆ. 9ರ ಸಂಜೆಯಿಂದ 10ರ ಮಧ್ಯಾಹ್ನದವರೆಗೆ ಜೆಎಸ್‍ಎಸ್ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿದೆ. ಇತಿಹಾಸದಲ್ಲಿಯೇ ಈ ಬಾರಿ ಜಾತ್ರೆ ಸರಳವಾಗಿ ನಡೆಯುತ್ತಿರುವುದು ಜನರಲ್ಲಿ ನಿರಾಸೆಯನ್ನುಂಟು ಮಾಡಿದ್ದಂತು ನಿಜ.

ಪರಮ ಮಹಿಮೆಯ ಕ್ಷೇತ್ರ ಸುತ್ತೂರು
ಜಾತ್ರೆಯ ಈ ಸಂದರ್ಭ ನಾವು ಸುತ್ತೂರಿನ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಈ ಕ್ಷೇತ್ರದ ಮಹಿಮೆ ಏನೆಂಬುದು ತಿಳಿದು ಬರುತ್ತದೆ. ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಕಂಚಿಯ ರಾಜೇಂದ್ರ ಚೋಳನೂ ಹಾಗೂ ತಲಕಾಡಿನ ಗಂಗರಾಜ ರಾಚಮಲ್ಲ ಇಬ್ಬರು ವೈರಿಗಳಾಗಿದ್ದರು. ಇವರಿಬ್ಬರ ನಡುವೆ ಆಗಾಗ್ಗೆ ಯುದ್ಧಗಳು ನಡೆಯುತ್ತಿದ್ದವು. ಒಮ್ಮೆ ಇವರಿಬ್ಬರು ಭಾರೀ ಸೈನ್ಯದೊಂದಿಗೆ ಯುದ್ಧಕ್ಕೆ ಸಜ್ಜಾಗುತ್ತಾರೆ. ಆಗ ರಾಜೇಂದ್ರ ಚೋಳ ಏರಿ ಹೊರಟಿದ್ದ ಕುದುರೆ ಗೊತ್ತುಗುರಿಯಿಲ್ಲದೆ ಓಡತೊಡಗಿತ್ತು. ಏನೇ ಮಾಡಿದರೂ ಕುದುರೆಯನ್ನು ತಡೆದು ನಿಲ್ಲಿಸುವುದಕ್ಕೆ ರಾಜನಿಗೆ ಸಾಧ್ಯವಾಗಲಿಲ್ಲ. ಹಾಗೆ ಓಡಿದ ಕುದುರೆ ಕಪಿಲಾ ನದಿ ತೀರದಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳಿಗೆ ಪ್ರದಕ್ಷಿಣೆ ಹಾಕಿ ನಿಂತಿತು. ಇದರಿಂದ ಅಚ್ಚರಿಗೊಂಡ ರಾಜಾ ರಾಜೇಂದ್ರ ಚೋಳ ಕುದುರೆಯಿಂದಿಳಿದು ಧ್ಯಾನದಲ್ಲಿ ನಿರತರಾಗಿದ್ದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಪಾದಕ್ಕೆರಗುತ್ತಾನೆ.

ವೈರತ್ವ ಬಿಟ್ಟು ಸಹಬಾಳ್ವೆ ಕಲಿತ ರಾಜರು
ಅದೇ ವೇಳೆಗೆ ರಾಜೇಂದ್ರ ಚೋಳನ ಕುದುರೆಯನ್ನು ಹಿಂಬಾಲಿಸಿಕೊಂಡು ರಾಚಮಲ್ಲನೂ ಅಲ್ಲಿಗೆ ಬರುತ್ತಾನೆ. ತನ್ನ ಮುಂದೆ ಬಂದು ನಿಂತ ರಾಜರಿಬ್ಬರನ್ನು ಕಂಡ ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳು ಅವರಿಬ್ಬರಿಗೆ ವೈರತ್ವವನ್ನು ಬಿಟ್ಟು ಸಹಬಾಳ್ವೆ ನಡೆಸುವಂತೆಯೂ ಅಲ್ಲದೆ ಯುದ್ಧದಿಂದ ಆಗುವ ಸಾವು ನೋವುಗಳ ಬಗ್ಗೆ ಬೋಧಿಸುತ್ತಾರೆ. ಅವರ ಬೋಧನೆಯಿಂದ ಇಬ್ಬರಿಗೂ ಜ್ಞಾನೋದಯವಾಗುತ್ತದೆ. ಮುಂದೆ ಅವರು ಯುದ್ಧವನ್ನು ಬಿಟ್ಟು ಆ ಪುಣ್ಯಕ್ಷೇತ್ರದಲ್ಲಿಯೇ ನೆಲೆಸುತ್ತಾರೆ. ಅಂತಹವೊಂದು ಪುಣ್ಯಕ್ಷೇತ್ರವೇ ಸುತ್ತೂರು ಶ್ರೀ ಕ್ಷೇತ್ರವಾಗಿದೆ.