ಇಂಧನ ಮೂಲಸೌಕರ್ಯ ಉತ್ಪಾದನೆ ಹೆಚ್ಚಿಸಿಕೊಂಡರೆ ರಾಷ್ಟ್ರ ನಿರ್ಮಾಣ ಸಾಧ್ಯ: ಸಾಗರ್ ಅದಾನಿ
ನವದೆಹಲಿ: ಭಾರತವು 2047ರ ಅಭಿವೃದ್ಧಿ ಗುರಿ ಹಾಕಿಕೊಂಡಿದೆ. ಇದನ್ನು ಯಶಸ್ವಿಯಾಗಿ ಮುಂದುವರಿಸಲು ಸದೃಢ ಇಂಧನ ಅಡಿಪಾಯದ ಅಗತ್ಯತೆ ಕುರಿತು ಚರ್ಚೆಗಳು ನಡೆಯುತ್ತಿವೆ. ಅದರಲ್ಲಿ ಬೃಹತ್ ಪ್ರಮಾಣದ ವಿದ್ಯುದ್ದೀಕರಣ, ನವೀಕರಿಸಬಹುದಾದ ಇಂಧನ, ಜಲವಿದ್ಯುತ್, ಪರಮಾಣು ಹಾಗೂ ದಕ್ಷ ಉಷ್ಣ ವಿದ್ಯುತ್ ಯೋಜನೆಗಳು ಪ್ರಮುಖವಾಗಿವೆ. ನೀರು, ಆಹಾರ, ಡಿಜಿಟಲ್ ಹಾಗೂ ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗೆ ಕೈಗೆಟುಕುವ ಮತ್ತು ಸುಲಭವಾಗಿ ಲಭ್ಯವಿರುವ ಶಕ್ತಿಯು ಅತ್ಯಗತ್ಯವಾಗಿದೆ ಎಂದು ಅದಾನಿ ಗ್ರೂಪ್‌ನ ಕಾರ್ಯಕಾರಿ ನಿರ್ದೇಶಕ ಸಾಗರ್ ಅದಾನಿ ಅವರುಈ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಮಂಗಳವಾರ ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ಅವರು ಮಾತನಾಡಿದರು.21ನೇ ಶತಮಾನದಲ್ಲಿ ಇಂಧನ ಲಭ್ಯತೆಯು ಯಾವುದೇ ದೇಶದ ಸ್ಥಿತಿಗತಿ ನಿರ್ಧರಿಸುವ ಪ್ರಮುಖ ಕ್ಷೇತ್ರವಾಗಿದೆ. ಸಮೃದ್ಧ, ವಿಶ್ವಾಸಾರ್ಹ ಮತ್ತು ಕೈಗೆಟುಕುವ ವಿದ್ಯುತ್ ಮೂಲ ಸೌಕರ್ಯವನ್ನು ನಿರ್ಮಿಸುವುದರ ಮೇಲೆ ಭಾರತದ ದೀರ್ಘಕಾಲೀನ ಬೆಳವಣಿಗೆಯ ಮಹತ್ವಾಕಾಂಕ್ಷೆಗಳು ಅವಲಂಬಿತವಾಗಿವೆ ಎಂದು ಪ್ರತಿಪಾದಿಸಿದರು.

ಇತ್ತೀಚೀನ ಜಾಗತಿಕ ಸಂಘರ್ಷಗಳು ಮತ್ತು ಪೂರೈಕೆ ಸರಣಿಯ ಅಡೆತಡೆಗಳು ಇಂಧನ ಆಘಾತಗಳು ಆರ್ಥಿಕತೆಗಳನ್ನು ಹೇಗೆ ರಾತ್ರೋರಾತ್ರಿ ಪ್ರಭಾವಿಸಬಹುದು ಎಂಬುದನ್ನು ಸ್ಪಷ್ಟಪಡಿಸಿವೆ. ಸದ್ಯದ ಪರಿಸ್ಥಿತಿಯಲ್ಲಿ, ಪ್ರತಿರಾಷ್ಟ್ರಕ್ಕೂ ಸವಾಲು ಕೇವಲ ಬೆಳವಣಿಗೆಯ ಬಗ್ಗೆ ಮಾತ್ರವಲ್ಲ, ಅಂತಹ ಅಡಚಣೆಗಳನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯದ ಬಗ್ಗೆಯೂ ಇದೆ ಎಂಬುದನ್ನು ವಿವರಿಸಿದರು.
ಇಂಧನ ಉತ್ಪಾದನೆ ಇಲ್ಲದೇ ರಾಷ್ಟ್ರ ನಿರ್ಮಾಣ ಅಸಾಧ್ಯ
ಭಾರತದ ಕುರಿತು ಹೆಮ್ಮೆಯ ಮಾತುಗಳಾಡಿದ ಅದಾನಿ, ದೇಶದ ಯುವ ಜನತೆ, ರೈತರು ಮತ್ತು ಉದ್ಯಮಿಗಳು ಪ್ರಬಲ ಆರ್ಥಿಕ ಭವಿಷ್ಯ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದ್ದಾರೆ. ದೃಢವಾದ ಇಂಧನ ಅಡಿಪಾಯ ಮುಖ್ಯವಾಗಿದೆ. ಅದಿಲ್ಲದೇ ರಾಷ್ಟ್ರ ನಿರ್ಮಾಣ ಅಸಾಧ್ಯ. ಭಾರತದಲ್ಲಿನ ಪ್ರತಿಯೊಂದು ಪ್ರಮುಖ ಅಭಿವೃದ್ಧಿ ಸವಾಲು ಇಂಧನಕ್ಕೆ ನೇರವಾಗಿ ಸಂಬಂಧಿಸಿದೆ ಎಂದರು.
ಅದಾನಿ ಅವರು ಹೇಳುವಂತೆ, ನೀರಿನ ಸುರಕ್ಷತೆಗೆ ಲವಣಾಂಶ ತೆಗೆದುಹಾಕಲು (desalination) ಮತ್ತು ವಿತರಣೆಗೆ ಇಂಧನ ಬೇಕು. ಅದೇ ರೀತಿ, ಆಹಾರ ಭದ್ರತೆಯು ಗೊಬ್ಬರಗಳು, ನೀರಾವರಿ ಮತ್ತು ಲಾಜಿಸ್ಟಿಕ್ಸ್ ಅನ್ನು ಅವಲಂಬಿಸಿದೆ. ಡಿಜಿಟಲ್ ಬೆಳವಣಿಗೆಗೆ ಡೇಟಾ ಸೆಂಟರ್‌ಗಳು, ಕೃತಕ ಬುದ್ಧಿಮತ್ತೆ (AI) ಮತ್ತು ಕಂಪ್ಯೂಟಿಂಗ್ ಮೂಲಸೌಕರ್ಯಕ್ಕೆ ನಿರಂತರ ವಿದ್ಯುತ್ ಪೂರೈಕೆ ಅಗತ್ಯ ಎಂದು ಅವರು ವಿವರಿಸಿದರು.
ಇಂಧನ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗಬೇಕು
ಭಾರತದ ತಲಾವಾರು ಇಂಧನ ಬಳಕೆ ಜಾಗತಿಕ ಸರಾಸರಿಗಿಂತ ಗಣನೀಯವಾಗಿ ಕಡಿಮೆಯಿದೆ ಎಂದು ಸಾಗರ್ ಅದಾನಿ ಸೂಚಿಸಿದರು. ಇದು ಭವಿಷ್ಯದಲ್ಲಿ ಭಾರತ ಎದುರಿಸಲಿರುವ ಇಂಧನ ಬೇಡಿಕೆಯ ಅಗಾಧ ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ. 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿ ಹೊಂದಿದ್ದರೆ, ಕ್ರಮೇಣ ವಿಸ್ತರಣೆಯ ಬದಲು ಇಂಧನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
2,000 ಜಿಜಿ ಇಂಧನ ಅಗತ್ಯ
ಮುಂದಿನ ಎರಡು ದಶಕಗಳಲ್ಲಿ ಭಾರತಕ್ಕೆ ಸುಮಾರು 2,000 ಗಿಗಾವಾಟ್ಗಳಷ್ಟು ಹೊಸ ಇಂಧನ ಸಾಮರ್ಥ್ಯದ ಅಗತ್ಯವಿದೆ. ಈ ಬೃಹತ್ ವಿಸ್ತರಣೆಯೊಂದಿಗೆ ಇಂಧನವು ಕೈಗೆಟುಕುವ, ಸುಲಭವಾಗಿ ಲಭ್ಯವಿರುವ ಮತ್ತು ಶುದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಸಾಗರ್ ಅದಾನಿ ಅವರು ವೈವಿಧ್ಯಮಯ ಇಂಧನ ಮಿಶ್ರಣಕ್ಕೆ ಒತ್ತು ನೀಡಿದ್ದು ಕಂಡು ಬಂತು. ನವೀಕರಿಸಬಹುದಾದ ಇಂಧನ, ಜಲವಿದ್ಯುತ್, ದಕ್ಷ ಉಷ್ಣ ವಿದ್ಯುತ್ ಮತ್ತು ಪರಮಾಣು ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ನವೀಕರಿಸಬಹುದಾದ ಇಂಧನವು ವೇಗವಾಗಿ ವಿಸ್ತರಿಸುತ್ತಿದ್ದರೂ, ಭೂಮಿಯ ಲಭ್ಯತೆ ಮತ್ತು ಅನಿಯಮಿತ ವಿದ್ಯುತ್ ಉತ್ಪಾದನೆಯಂತಹ ಸವಾಲುಗಳು ಸಮರ್ಥವಾಗಿ ನಿರ್ವಹಿಸಬೇಕಿದೆ ಎಂದರು.
ಇಂಧನ ಕ್ಷೇತ್ರದಲ್ಲಿ ಅದಾನಿ ಗ್ರೂಪ್‌ನ ಪಾತ್ರ
ಅದಾನಿ ಗ್ರೂಪ್‌ನ ಪಾತ್ರದ ಕುರಿತು ಮಾತನಾಡಿದ ಅವರು, ಈ ಸಮೂಹವು ಭಾರತದ ದೀರ್ಘಕಾಲೀನ ಇಂಧನಕ್ಕೆ ಬೆನ್ನೆಲುಬಿನಂತೆ ಕಾರ್ಯ ನಿರ್ವಹಿಸುತ್ತಿದೆ. ಅಧ್ಯಕ್ಷ ಗೌತಮ್ ಅದಾನಿ ಅವರು ಸಮಗ್ರ ಹೂಡಿಕೆ ಕಾರ್ಯತಂತ್ರದ ಮೂಲಕ ಇಂಧನ ಪರಿವರ್ತನೆಗಾಗಿ 100 ಶತಕೋಟಿಗೂ ಹೆಚ್ಚು ಹೂಡಿಕೆ ಮಾಡಲು ಬದ್ಧರಾಗಿದ್ದಾರೆ ಎಂದು ತಿಳಿಸಿದರು.
ಅದಾನಿ ಗ್ರೂಪ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯ, ಶೇಖರಣಾ ವ್ಯವಸ್ಥೆಗಳು, ಪ್ರಸರಣ ಜಾಲಗಳು ಮತ್ತು ಹಸಿರು ಹೈಡ್ರೋಜನ್ ಪರಿಸರ ವ್ಯವಸ್ಥೆಗಳನ್ನು ವಿಸ್ತರಿಸುತ್ತಿದೆ. ಬಂದರುಗಳು, ಲಾಜಿಸ್ಟಿಕ್ಸ್, ವಿಮಾನ ನಿಲ್ದಾಣಗಳು ಮತ್ತು ಡೇಟಾ ಸೆಂಟರ್‌ಗಳಲ್ಲಿನ ಹೂಡಿಕೆಗಳು ಸಮಗ್ರ ಸ್ಥಿತಿಸ್ಥಾಪಕತ್ವವನ್ನು ಸಾಧಿಸುವ ವಿಶಾಲ ದೃಷ್ಟಿಯ ಭಾಗವಾಗಿವೆ ಎಂದು ಅದಾನಿ ಗ್ರೂಪ್ ದೂರದೃಷ್ಟಿ, ಕಾರ್ಯವೈಖರಿ, ಹೂಡಿಕೆ ಕುರಿತು ವಿವರಿಸಿದರು.












Click it and Unblock the Notifications