ಹಾಡಹಗಲೇ ಮೈಸೂರಿನಲ್ಲಿ ಪ್ರವಾಸಿಗರ ಮೇಲೆ ಹಲ್ಲೆ: ಓರ್ವ ಬಂಧನ
ಮೈಸೂರು, ಮೇ 21: ಮೈಸೂರಿನಲ್ಲಿ ಹಾಡಹಗಲೇ ಮದ್ಯಪಾನ ಮಾಡಿದ ನಾಲ್ವರು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ನಾಲ್ವರ ಪೈಕಿ ಒಬ್ಬ ಆರೋಪಿ ಚಂದು ಎಂಬಾತನನ್ನು ಕೆ.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಿಂದ ಟಿಟಿ ವಾಹನದಲ್ಲಿ ಬಂದ ಪ್ರವಾಸಿಗರು ಚಾಮುಂಡಿಬೆಟ್ಟದಿಂದ ಕೆ.ಆರ್.ಎಸ್‌ಗೆ ಹೋಗುವ ಮಾರ್ಗಮಧ್ಯೆ ಚಾಮರಾಜ ನೂರಡಿ ರಸ್ತೆಯಲ್ಲಿ ತಾತಯ್ಯ ವೃತ್ತದ ಸಿಗ್ನಲ್ ಬಳಿ ವಾಹನ ನಿಲ್ಲಿಸಿದ್ದಾರೆ. ರಸ್ತೆ ಬದಿ ಮದ್ಯ ಸೇವಿಸುತ್ತ ಕುಳಿತಿದ್ದ ನಾಲ್ವರು ವಾಹನದಲ್ಲಿದ್ದ ಮಹಿಳೆಯರನ್ನು ಚುಡಾಯಿಸಿ, ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾರೆ. ಇದರಿಂದ ಕೋಪಗೊಂಡ ಪ್ರವಾಸಿಗರು ಪ್ರಶ್ನಿಸಿದ್ದಾರೆ.
ಇದರಿಂದ ಕೆರಳಿದ ದುಷ್ಕರ್ಮಿಗಳು ಪ್ರವಾಸಿಗರಾದ ಕಾರ್ತಿಕ್, ಪರಮೇಶ್, ಮುರಳಿ, ಸೆಲ್ವಂ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ರಸ್ತೆ ವಿಭಜಕದಲ್ಲಿ ಇಡಲಾಗಿದ್ದ ಹೂ ಕುಂಡಗಳ ಗಿಡಗಳನ್ನು ಕಿತ್ತುಕೊಂಡು ಹೊಡೆದಿದ್ದಾರೆ. ಬಿಯರ್ ಬಾಟಲಿಗಳನ್ನು ಪ್ರವಾಸಿಗರ ಮೇಲೆ ಎಸೆದಿದ್ದಾರೆ. ಮಹಿಳೆಯರ ಬಟ್ಟೆಗಳನ್ನು ಹಿಡಿದು ಎಳೆದಾಡಿದ್ದಾರೆ.

ಇದರಿಂದ ಗಾಯಗೊಂಡ ಐವರು ಪ್ರವಾಸಿಗರನ್ನು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಕಳುಹಿಸಲಾಗಿದೆ. ಆರೋಪಿಗಳ ಪೈಕಿ ಒಬ್ಬಾತನನ್ನು ಬಂಧಿಸಲಾಗಿದೆ, ಉಳಿದ ಮೂವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಕೆ.ಆರ್.ಠಾಣೆಯಲ್ಲಿ ದಾಖಲಾಗಿದೆ.












Click it and Unblock the Notifications