ಭಾರತೀಯ ಸೇನೆಗೆ 1 ಕೋಟಿ ರೂ.ದೇಣಿಗೆ ನೀಡಿದ ಮೈಸೂರಿನ ಡಾ. ಚಂದ್ರಶೇಖರ್
ಮೈಸೂರು, ಮಾರ್ಚ್ 7: ಮೈಸೂರಿನಲ್ಲಿ ವೈದ್ಯರೊಬ್ಬರು ಸದ್ದಿಲ್ಲದೆ ಭಾರತೀಯ ವಾಯುಸೇನೆಗೆ ತಮ್ಮದೇನಾದರೂ ಕೊಡುಗೆ ನೀಡಬೇಕೆಂದು ಮನಸ್ಸು ಮಾಡಿ ರಕ್ಷಣಾ ನಿಧಿಗೆ ಬರೋಬ್ಬರಿ ಒಂದು ಕೋಟಿ ರೂ. ಮೊತ್ತವನ್ನು ನೀಡಿದ್ದಾರೆ.
ಹೌದು, ಭಾರತೀಯ ಸೇನೆಯ ರಕ್ಷಣಾ ನಿಧಿಗೆ 1 ಕೋಟಿ ರೂ. ಹಣವನ್ನು ದೇಣಿಗೆ ನೀಡುವ ಮೂಲಕ ಯೋಧರ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ ವೈದ್ಯ ಚಂದ್ರಶೇಖರ್. ಬುಧವಾರ (ಮಾ.06) ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಪ್ರಬುದ್ಧರ ಗೋಷ್ಠಿ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಚಂದ್ರಶೇಖರ್, ದೇಣಿಗೆ ಹಣದ ಚೆಕ್ ನೀಡಿದ್ದಾರೆ.

ನಗರದ ಗೋಕುಲಂ ಬಡಾವಣೆಯಲ್ಲಿರುವ ಆದಿತ್ಯಾ ಅಧಿಕಾರಿ ಆಸ್ಪತ್ರೆ ಮುಖ್ಯಸ್ಥರಾಗಿರುವ ಡಾ. ಚಂದ್ರಶೇಖರ್ ಅವರು ಯೋಧರಿಗಾಗಿ ಸಹಾಯಧನ ನೀಡಿದ್ದಾರೆ. ಇಷ್ಟು ಮೊತ್ತದ ಹಣವನ್ನು ಕೊಟ್ಟಿರುವ ಬಗ್ಗೆ ಯಾರೊಂದಿಗೂ ತಿಳಿಸದೆ, ತಮ್ಮ ಕೈಲಾದಷ್ಟು ಮಾಡಿರುವ ಸಹಾಯ ಅಭಿನಂದನಾರ್ಹವೇ ಸರಿ.

ಈಗಿನ ದಿನಮಾನಸದಲ್ಲಿ ಮಾಧ್ಯಮದ ಮುಂದೆ ಪ್ರಚುರಪಡಿಸಲು ಹಣ ನೀಡುವ ಜನರಿದ್ದಾರೆ. ಆದರೆ ಅವೆಲ್ಲವನ್ನು ಮೀರಿದಂತೆ ನಡೆದುಕೊಂಡ ಡಾ. ಚಂದ್ರಶೇಖರ್ ಅವರ ಕಾರ್ಯ ಮೆಚ್ಚುವಂತಹದ್ದು.












Click it and Unblock the Notifications