Wayanad Landslide: ಕನ್ನಡಿಗರ ರಕ್ಷಣೆಗೆ ವಯನಾಡಿಗೆ ತಂಡ ಕಳುಹಿಸಿದ ಮೈಸೂರು ಜಿಲ್ಲಾಡಳಿತ
ವಯನಾಡು ಮಹಾ ಭೂಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 250ಕ್ಕೇರಿದೆ. ಭೂಕುಸಿತದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯವರು ಕೂಡ ಇದ್ದು, ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ. ಮೈಸೂರು ಜಿಲ್ಲಾಡಳಿತ ಕೂಡ ಜಿಲ್ಲೆಯ ಯಾರಾದರೂ ಭೂಕುಸಿತದಲ್ಲಿ ಸಿಲುಕಿದ್ದರೆ ರಕ್ಷಣೆ ಮಾಡಲು ಇಬ್ಬರು ಅಧಿಕಾರಿಗಳ ತಂಡವನ್ನು ಕೇರಳಕ್ಕೆ ಕಳುಹಿಸಿದೆ.
ಕೇರಳದ ವಯನಾಡಿನ ಭೂ ಕುಸಿತ, ಪ್ರವಾಹದಲ್ಲಿ ಸಿಲುಕಿಕೊಂಡ ಮೈಸೂರು ಜಿಲ್ಲೆಯವರ ರಕ್ಷಣೆ ಹಾಗೂ ಮಾಹಿತಿಗಾಗಿ ಕಂಟ್ರೋಲ್ ರೂಂ ಆರಂಭಿಸಲಾಗಿದೆ. ಸಂಬಂಧಿಸಿದವರು ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ ದೂರವಾಣಿ: 0821-2423800 ಅಥವಾ 1077ಗೆ ಕರೆ ಮಾಡಲು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ಹೇಳಿದ್ದಾರೆ.

ಮೈಸೂರು ಜಿಲ್ಲಾಡಳಿತ ಹೆಗ್ಗಡದೇವನಕೋಟೆ ತಾಲೂಕು ಆಸ್ಪತ್ರೆ ಹಾಗೂ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ತಜ್ಞ ವೈದ್ಯರನ್ನು ನಿಯೋಜನೆ ಮಾಡಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರಲು ವಾಹನಗಳನ್ನು ಕೂಡ ಸಜ್ಜಾಗಿಟ್ಟುಕೊಂಡಿದೆ.
ಪಾರ್ಥಿವ ಶರೀರಗಳ ಸಂರಕ್ಷಣೆಗೆ ಶೈತ್ಯಾಗಾರದ ಘಟಕಗಳನ್ನು ಒದಗಿಸುವ ಸರಬರಾಜುದಾರನ್ನು ಗುರುತಿಸಲಾಗಿದೆ. ಮೈಸೂರಿಗರ ರಕ್ಷಣೆಗೆ ಸಹಾಯವಾಣಿ ತೆರೆಯಲಾಗಿದೆ. ಕೇರಳದಲ್ಲಿರುವ ಮೈಸೂರಿನ ಕುಟುಂಬದವರು ಮಾಹಿತಿ ನೀಡಿದರೆ ರಕ್ಷಣೆ ನೀಡಲಾಗುವುದು. ಇದುವರೆಗೂ ಯಾರೂ ದೂರು ದಾಖಲಿಸಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಇಬ್ಬರ ತಂಡವನ್ನು ವಯನಾಡಿಗೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ತಿಳಿಸಿದ್ದಾರೆ.
ಜನ ಸೇವೆಗೆ ಮೈಸೂರು ವೈದ್ಯರ ತಂಡ
ವಯನಾರು ಭೂಕುಸಿತದಲ್ಲಿ ಗಾಯಗೊಂಡವರ ತಪಾಸಣೆಗಾಗಿ ಜಿಲ್ಲಾ ಆಡಳಿತ ವತಿಯಿಂದ ತಜ್ಞ ವೈದ್ಯರ ತಂಡವನ್ನು ಔಷಧಿಗಳೊಂದಿಗೆ ನಿಯೋಜನೆ ಮಾಡಲಾಗಿದೆ. ಈ ತಂಡವನ್ನು ಕರ್ನಾಟಕ ಮತ್ತು ಕೇರಳ ಗಡಿ ಭಾಗವಾದ ಬಾವಲಿ ಚೆಕ್ ಪೋಸ್ಟ್‌ನಲ್ಲಿ ಹುಣಸೂರು ಉಪ ವಿಭಾಗಾಧಿಕಾರಿ ವೆಂಕಟರಾಜು ತಹಶೀಲ್ದಾರ್ ಶ್ರೀನಿವಾಸ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ. ರವಿಕುಮಾರ್, ತಜ್ಞ ವೈದ್ಯರಾದ ಡಾ. ಶ್ರೀನಿವಾಸ್, ಡಾ. ನಾಗೇಶ್ ರಾವ್, ಡಾ. ಶೇಷಾದ್ರಿ, ಹಿರಿಯ ಔಷಧ ವಿತರಣಾಧಿಕಾರಿ ಉಮೇಶ್ ತಂಡವನ್ನು ಕೇರಳ ವಯನಾಡಿಗೆ ಕಳುಹಿಸಕೊಡಲಾಗಿದೆ.
ಹುಣಸೂರು ಉಪ ವಿಭಾಗಾಧಿಕಾರಿ ವೆಂಕಟರಾಜು ಮಾತನಾಡಿ ನಮ್ಮ ಜಿಲ್ಲಾ ಆಡಳಿತ ವತಿಯಿಂದ ನುರಿತ ತಜ್ಞರನ್ನು ವಯನಾಡಿಗೆ ಕಳಿಸಿ ಕೊಡುತ್ತಿದ್ದೇವೆ ಹಾಗೂ ಜಿಲ್ಲೆಯಲ್ಲೂ ಸಹ ಅಗತ್ಯ ಔಷಧಿಗಳೊಂದಿಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಹುಣಸೂರು ತಾಲೂಕಿನ ದೊಡ್ಡ ಬೈರನಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ತುರ್ತು ವಾಹನವನ್ನು ನಿಯೋಜಿಸಲಾಗಿದೆ. ಹೆಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಐದು ತುರ್ತು ವಾಹನ ಮತ್ತು10 ಬೆಡ್‌ಗಳನ್ನು ಸಿದ್ದಪಡಿಸಿಕೊಂಡಿದ್ದೇವೆ ಹಾಗೂ ಮುಂಜಾಗ್ರತೆ ಕ್ರಮವಾಗಿ ಅಗತ್ಯ ಔಷಧಿಗಳನ್ನು ಸಹ ಇಟ್ಟುಕೊಳಲಾಗಿದೆ ಎಂದು ಹೇಳಿದರು.












Click it and Unblock the Notifications