ಕಪಿಲೆ ಅಬ್ಬರ ಇಳಿಮುಖ, ಮೈಸೂರು –ಊಟಿ ರಸ್ತೆ ಸಂಚಾರಮುಕ್ತ
ಮೈಸೂರು, ಆಗಸ್ಟ್ 14 : ಕಪಿಲೆಯ ಪ್ರವಾಹದಲ್ಲಿಇಳಿಮುಖವಾಗಿದ್ದು, ನಂಜನಗೂಡು ಪಟ್ಟಣ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಕಬಿನಿ ಅಣೆಕಟ್ಟೆಯ ಹೊರಹರಿವು 45 ಸಾವಿರ ಕ್ಯೂಸೆಕ್ ಗೆ ತಗ್ಗಿದ್ದರಿಂದ ನಂಜನಗೂಡಿನಲ್ಲಿ ಪ್ರವಾಹ ಇಳಿಮುಖವಾಗಿದೆ.
ರಾಷ್ಟ್ರೀಯಹೆದ್ದಾರಿ-766ರಲ್ಲಿ ಮಲ್ಲನಮೂಲೆ ಸಮೀಪ ಕಪಿಲೆಯ ಪ್ರವಾಹದ ನೀರು ಆರೇಳು ಅಡಿಗಳಷ್ಟು ಎತ್ತರದವರೆಗೂ ಹರಿಯುತ್ತಿದ್ದುದರಿಂದ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ನೀರು ಖಾಲಿಯಾಗಿದ್ದರಿಂದ ಸೋಮವಾರ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದು, ವಾಹನ ಸಂಚಾರ ಆರಂಭವಾಗಿದೆ.
ಕಪಿಲೆಯ ಪ್ರವಾಹದಲ್ಲಿ ಇಳಿಮುಖವಾಗಿದ್ದರೂ ತಾಲೂಕಿನ ಸಾವಿರಾರು ಎಕರೆ ಕೃಷಿಭೂಮಿಯಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ರೈತರು ಭಾರೀ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ. ಪಟ್ಟಣ ಸೇರಿದಂತೆ ಸಮೀಪದ ಹಳ್ಳಿಗಳಲ್ಲಿನ ತಗ್ಗುಪ್ರದೇಶದ ಅನೇಕ ಮನೆಗಳು ಪ್ರವಾಹದ ಹೊಡೆತದಿಂದಾಗಿ ಹಾನಿಗೀಡಾಗಿವೆ.

ಊಟಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕೂಡ ಜಲಾವೃತವಾಗಿ, ಬಂದ್ ಆಗಿತ್ತು. ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ಈ ಭಾರೀ ಪ್ರವಾಹ ಉಂಟಾಗಿತ್ತು. ಇದೀಗ ಹೊರಹರಿವು ಇಳಿಕೆಯಾಗಿ ಕಪಿಲಾ ನದಿ ನೀರಿನ ಮಟ್ಟ ಕಡಿಮೆಯಾಗಿದ್ದರಿಂದ ಪ್ರವಾಹದ ನೀರು ಸಹ ಇಳಿಮುಖವಾಗಿದೆ.
ಪ್ರವಾಹ ಇಳಿಮುಖವಾಗಿ ನದಿಪಾತ್ರ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಸಂತ್ರಸ್ತರ ಬದುಕು ಎಂದಿನಂತಾಗಲು ಒಂದು ವರ್ಷವೇ ಬೇಕಾಗಬಹುದು ಎಂಬ ಪರಿಸ್ಥಿತಿ ಇದೆ.












Click it and Unblock the Notifications