ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಕೊಲೆ ಬೆದರಿಕೆ
ಮೈಸೂರು, ನ. 30: ಮೈಸೂರಿನ ಸಾಂಸ್ಕೃತಿಕ ಸಂಸ್ಥೆ ರಂಗಾಯಣ ಮತ್ತೆ ಸದ್ದು ಮಾಡಿದೆ. ಟಿಪ್ಪು ನಿಜ ಕನಸುಗಳು ನಾಟಕದ ಮೂಲಕ ಸುದ್ದಿ ಮಾಡಿದ್ದ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರಿಗೆ ಇದೀಗ ಕೊಲೆ ಬೆದರಿಕೆ ಪತ್ರ ಬಂದಿದೆ. ಈ ಸಂಬಂಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಇತ್ತೀಚಿಗೆ ಬೆಂಗಳೂರಿನ ಸೆಷನ್ ಕೋರ್ಟ್‌ನಲ್ಲಿ ಅಡ್ಡಂಡ ಕಾರ್ಯಪ್ಪ ರಚನೆಯ ಟಿಪ್ಪು ನಿಜ ಕನಸುಗಳು ನಾಟಕ ಮಾರಾಟ ಹಾಗೂ ಹಂಚಿಕೆಗೆ ತಡೆಯಾಜ್ಞೆ ನೀಡಲಾಗಿತ್ತು. ಆದರೆ, ನಾಟಕ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಆದರಿಗ ಶಿವಮೊಗ್ಗ ಮೂಲದ ಅನಾಮಧೇಯ ವ್ಯಕ್ತಿಯೊಬ್ಬರು ರಂಗಾಯಣದ ನಿರ್ದೇಶಕರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ.
ಅಡ್ಡಂಡ ಕಾರ್ಯಪ್ಪ ಬರೆದಿರುವ ಟಿಪ್ಪು ನಿಜಕನಸುಗಳು ಪುಸ್ತಕ ಮಾರಾಟ, ವಿತರಣೆಗೆ ತಡೆ
''ನೀನೀಗ ಸಾಯುವ, ಕೊಲೆ ಆಗುವ ಹಂತ ತಲುಪಿದ್ದೀಯ. ನಿನ್ನನ್ನು ನೀನು ನಂಬಿರುವ ದೇವರೂ ಉಳಿಸುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ. ಹಾಗೆಯೇ ಶಿವಮೊಗ್ಗದಿಂದ ಮತ್ತೊಂದು ಪೋಸ್ಟ್ ಕಾರ್ಡ್ ಬಂದಿದೆ" ಎಂದು ಅಡ್ಡಂಡ ಕಾರ್ಯಪ್ಪ ದೂರಿನಲ್ಲಿ ತಿಳಿಸಿದ್ದಾರೆ.
''ನ.28 ರಂದು ಶಿವಮೊಗ್ಗ ಜಿಲ್ಲೆಯ ಬ್ರಾಹ್ಮಣ ಬೀದಿ, ಕೋಟೆ ರಸ್ತೆಯ ಶ್ರೀರಾಂ ಎಂಬ ವಿಳಾಸದಿಂದ ಪತ್ರ ಬಂದಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಮಹೇಶ್ ಚಂದ್ರಗುರು ಎಂಬುವವರು ವಿಡಿಯೊವೊಂದರಲ್ಲಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅದನ್ನು ಎಲ್ಲೆಡೆ ಹಂಚುತ್ತಿದ್ದಾರೆ. ಇದರಿಂದ ಪ್ರಚೋದನೆಗೊಂಡ ಕೆಲವರು (ಹೆಸರು ಗೊತ್ತಿಲ್ಲ) ನನ್ನನ್ನು ನಿಂದಿಸಲು ತೊಡಗಿದ್ದಾರೆ'' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚಿಗೆ ಮೈಸೂರಿನ ಕಲಾಮಂದಿರದಲ್ಲಿ ಹಾಗೂ ಭೂಮಿಗೀತದಲ್ಲಿ ಟಿಪ್ಪು ಸುಲ್ತಾನ್ ಅವರ ಕುರಿತ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನಗೊಂಡಿದೆ. ಪೊಲೀಸರ ಬಿಗಿ ಭದ್ರತೆಯಲ್ಲಿ ನಾಟಕ ಪ್ರದರ್ಶನ ಮಾಡಲಾಗಿತ್ತು. ನಾಟಕಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. 'ಟಿಪ್ಪು ನಿಜಕನಸುಗಳು' ಪುಸ್ತಕದ ವಿತರಣೆ ಮತ್ತು ಮಾರಾಟಕ್ಕೆ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ.