ಮೈಸೂರಿನಲ್ಲಿ ಕೊರೊನಾ ಬಗ್ಗೆ ಅಗತ್ಯ ಕ್ರಮ: ಜಿಲ್ಲಾಧಿಕಾರಿ
ಮೈಸೂರು, ಮಾರ್ಚ್ 13: ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಅವರು ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ವಹಿಸುವ ಕುರಿತು ಮಾಹಿತಿ ನೀಡಿದರು.
ಭಾರತ ಸೇರಿದಂತೆ 121 ದೇಶದಲ್ಲಿ ಕೊರೊನಾ ವೈರಸ್ ಹರಡಿದೆ. ಕರ್ನಾಟಕ ರಾಜ್ಯವು ರೋಗ ತಡೆಗಟ್ಟಲು ಎಲ್ಲಾ ರೀತಿ ಪ್ರಯತ್ನ ಮಾಡುತ್ತಿದೆ. ಕರ್ನಾಟಕದಲ್ಲಿ ಒಟ್ಟು 5 ಜನರಿಗೆ ಕೊರೋನಾ ವೈರಸ್ ಖಚಿತವಾಗಿದೆ ಎಂದರು.
ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ಸಾರ್ವತ್ರಿಕ ತಪಾಸಣೆ ಮುಂದುವರೆದಿದೆ. ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಾ ಮಾತನಾಡಿದರು.

ಅಧಿಕಾರಿಗಳಿಗೆ ಜಿಲ್ಲಾ ಮಟ್ಟದ ತರಬೇತಿ ನೀಡಲಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಪಾರಂಪರಿಕ ಸ್ಥಳ, ಯಾತ್ರಾ ಸ್ಥಳ, ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ನಗರ ಗ್ರಾಮಾಂತರ ಬಸ್ ನಿಲ್ದಾಣ, ಜಿಲ್ಲಾ ಗಡಿಭಾಗಗಳಲ್ಲಿ ಮಾಹಿತಿ ಮತ್ತು ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೊರೊನಾ ವೈರಸ್ ಪೀಡಿತ ದೇಶಗಳಿಂದ ಹಿಂತಿರುಗಿರುವ ಸೋಂಕಿನ ವ್ಯಕ್ತಿಯ ಸಂಪರ್ಕದಲ್ಲಿರುವ ಯಾರಾದರೂ ಭಾರತಕ್ಕೆ ಹಿಂತಿರುಗಿದ ದಿನದಿಂದ 14 ದಿನಗಳವರೆಗೆ ರೋಗ ಲಕ್ಷಣಗಳು ಇರಲಿ, ಇಲ್ಲದಿರಲಿ ಮನೆಯಲ್ಲಿ ಪ್ರತ್ಯೇಕವಾಗಿರಬೇಕು ಎಂದು ಹೇಳಿದರು.
ಕೆಮ್ಮು, ಸೀನು, ಜ್ವರ ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಕೆಮ್ಮುವಾಗ, ಸೀನುವಾಗ ಕರವಸ್ತ್ರ, ಟಿಶ್ಯೂ ಪೇಪರನ್ನು ಬಳಸಬೇಕು. ನೀರು ಮತ್ತು ಸೋಪು ಬಳಸಿ ಆಗಾಗ ಕೈ ತೊಳೆದುಕೊಳ್ಳಬೇಕು. ಸಮೂಹ, ಗುಂಪು ಸೇರುವುದನ್ನು ಮಾಡಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.












Click it and Unblock the Notifications