ಮೈಸೂರಿನ ಐತಿಹಾಸಿಕ ಮುಡುಕುತೊರೆ ಜಾತ್ರೆ ರದ್ದು
ಮೈಸೂರು, ಜನವರಿ 30; ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಹಾಗೂ ಓಮಿಕ್ರಾನ್ ರೂಪಾಂತರ ವೈರಸ್ ಉಲ್ಬಣವಾಗುತ್ತಿರುವುದು ಆತಂಕಕಾರಿಯಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಜನ ಸೇರುವ ಜಾತ್ರೆಗಳನ್ನು ಈಗಾಗಲೇ ನಿಷೇಧಿಸಲಾಗಿದೆ.
ಅದರಂತೆ ಸುಮಾರು ಹದಿನೇಳು ದಿನಗಳ ಕಾಲ ನಡೆಯಬೇಕಾಗಿದ್ದ ಮುಡುಕುತೊರೆ ಜಾತ್ರೆಯನ್ನು ಜಿಲ್ಲಾಡಳಿತ ರದ್ದು ಮಾಡಿದೆ. ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ತಲಕಾಡು ಹೋಬಳಿಯ ಮುಡುಕುತೊರೆಯಲ್ಲಿ ಫೆಬ್ರವರಿ 3 ರಿಂದ 19ರವರೆಗೆ ಶ್ರೀ ಭಮರಾಂಭ ಸಮೇತ ಶ್ರೀ ಮಲ್ಲಿಕಾರ್ಜುನ ದೇವಾಲಯದ ಜಾತ್ರಾ ಮಹೋತ್ಸವ ನಡೆಯಬೇಕಿತ್ತು.
ಈ ಜಾತ್ರೆಗೆ ಸ್ಥಳೀಯರು ಮಾತ್ರವಲ್ಲದೆ, ಹೊರಗಿನಿಂದಲೂ ಜನ ಸೇರುತ್ತಿದ್ದು, ಪ್ರತಿದಿನವೂ ಒಂದೊಂದು ವಿಶೇಷತೆಯಿದ್ದು, ಇಲ್ಲಿ ದನಗಳ ಜಾತ್ರೆ, ರಥೋತ್ಸವ ಹೀಗೆ ವೈಭವವಾಗಿ ನಡೆಯುತ್ತದೆ. ಆದರೆ ಈ ಬಾರಿ ಜಾತ್ರೆ ರದ್ದಾಗಿದೆ.
ಈ ಬಾರಿ ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಾತ್ರೆ ನಡೆದರೆ ಕೊರೊನಾ ಉಲ್ಭಣಗೊಳ್ಳುವ ಸಾಧ್ಯತೆ ಹೆಚ್ಚಾಗಿರುವ ಕಾರಣದಿಂದ ಜಿಲ್ಲಾಡಳಿತ ಜಾತ್ರೆಯನ್ನು ರದ್ದು ಗೊಳಿಸಿದೆ. ಈ ಬಗ್ಗೆ ಶ್ರೀ ವೈದ್ಯನಾಥೇಶ್ವರ ಹಾಗೂ ಸಮೂಹ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಹೆಚ್. ಬಿ. ನಟೇಶ್ ಮಾಹಿತಿ ನೀಡಿದ್ದಾರೆ.

ಮೈಸೂರು ಜಿಲ್ಲಾಡಳಿತ ಆದೇಶ
ಮೈಸೂರು ಜಿಲ್ಲಾಧಿಕಾರಿ ನೀಡಿರುವ ಆದೇಶವನ್ನು ಉಲ್ಲೇಖಿಸಿರುವ ಹೆಚ್.ಬಿ.ನಟೇಶ್ ಸರ್ಕಾರದ ಆದೇಶದ ಅನ್ವಯ ಜಾತ್ರೆಗಳು, ಹಬ್ಬಗಳು, ಮೆರವಣಿಗೆಗಳು ಮತ್ತು ಜನಸಂದಣಿ ಸೇರುವ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಇಲ್ಲದಿರುವುದರಿಂದ ಜಾತ್ರಾ ಮಹೋತ್ಸವವನ್ನು ಕಾರ್ಯಕ್ರಮಗಳನ್ನು ದೇವಾಲಯದ ಒಳಪ್ರಾಂಗಣದಲ್ಲಿ ಸರಳವಾಗಿ ಮತ್ತು ಸಾಂಪ್ರದಾಯಬದ್ದವಾಗಿ ನಡೆಸಲು ಜಿಲ್ಲಾಧಿಕಾರಿಗಳು ಅನುಮತಿಸಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ ಪಾಲಿಸಲು ಹಾಗೂ ಮಾಸ್ಕ್ ಧರಿಸಿ ಕೋವಿಡ್-19ರ ನಿಯಮಗಳನ್ನು ಪಾಲಿಸಬೇಕೆಂದು ಸೂಚಿಸಿದ್ದು, ಅದರಂತೆ ಭಕ್ತಾಧಿಗಳು, ದನ-ಕರುಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

ಮುಡುಕುತೊರೆ ಜಾತ್ರೆ ವಿಶೇಷತೆ
ಇಷ್ಟಕ್ಕೂ ಈ ಜಾತ್ರೆ ಬಗ್ಗೆ ಮತ್ತು ಈ ಸ್ಥಳದ ಬಗ್ಗೆ ಹೇಳದೆ ಹೋದರೆ ಅಪೂರ್ಣವಾದಂತೆಯೇ ಸರಿ. ಮುಡುಕುತೊರೆ ಕ್ಷೇತ್ರವು ಮೈಸೂರು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೊಂದಾದ ತಿ.ನರಸೀಪುರದಿಂದ 19 ಕಿ. ಮೀ. ದೂರದಲ್ಲಿದೆ. ಕಾವೇರಿ ನದಿ ಪಶ್ಚಿಮದಿಂದ ಉತ್ತರ ದಿಕ್ಕಿನತ್ತ ಹರಿದು, ಪೂರ್ವಕ್ಕೆ ಮುರಿದು ದಕ್ಷಿಣಕ್ಕೆ ಪ್ರವೇಶಿಸಿದ್ದರಿಂದ ಮುಡುಕುತೊರೆ ಎಂಬ ಹೆಸರು ಬಂದಿದೆ. ಇಲ್ಲಿನ ಸೋಮಗಿರಿ ಬೆಟ್ಟದ ಮೇಲಿನ ಐತಿಹಾಸಿಕ ಮಲ್ಲಿಕಾರ್ಜುನ ದೇಗುಲದ ಆಧಿದೈವ. ಈ ದೇಗುಲ ನೆಲೆ ನಿಂತ ಬೆಟ್ಟವು ಸುಮಾರು 300 ಅಡಿಯಷ್ಟು ಎತ್ತರದಲ್ಲಿದ್ದು, ಈ ಬೆಟ್ವನ್ನೇರಲು 101 ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಈ ದೇಗುಲದ ಬಳಿಯೇ ಪತ್ನಿ ಭ್ರಮರಾಂಬೆಯ ದೇವಾಲಯವಿದೆ.
ಮುಡುಕುತೊರೆಯ ಮಲ್ಲಿಕಾರ್ಜುನ ಜಾತ್ರೆ ವಿಶೇಷವಾಗಿದ್ದು, ಇದನ್ನು ಮುಡುಕುತೊರೆ ಜಾತ್ರೆ ಎಂದೇ ಕರೆಯುವುದು ರೂಢಿ. ಸುಮಾರು ಹದಿನೇಳು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಪ್ರತಿಯೊಂದು ದಿನವೂ ವಿಶೇಷವಾಗಿರುತ್ತದೆ. ಜಾತ್ರೆಯ ಅಂಗವಾಗಿ ಶಯನೋತ್ಸವ, ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವ, ಕೈಲಾಸ ವಾಹನೋತ್ಸವ, ಮಂಟಪೋತ್ಸವಗಳು, ಗಿರಿ ಪ್ರದಕ್ಷಿಣೆ, ಪರ್ವತ ಪರಿಷೆ ಕಾರ್ಯಕ್ರಮಗಳು ನಡೆಯಲಿವೆಯಲ್ಲದೆ, ಮಹಾಭಿಷೇಕದೊಂದಿಗೆ ಜಾತ್ರೆಗೆ ತೆರೆಬೀಳಲಿದೆ.

ಕಜ್ಜಾಯದ ಮಣೆ ಬಟ್ಟಲು ಉಡಿಸುವ ಹರಕೆ
ರಥೋತ್ಸವ ದಿನದಂದು ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ತವೆಯಲ್ಲದೆ, ಸಾಂಪ್ರದಾಯಿಕ ವಿಧಿವಿಧಾನದಂತೆ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಈ ಸಂದರ್ಭ ಗೊರವರ ಕುಣಿತ, ನಂದಿಕಂಬ, ಪೂಜಾಕುಣಿತ, ಕಂಸಾಳೆ, ಸೋಬಾನೆ, ಜಾಗಟೆ ಸೇವೆ, ತುತ್ತೂರಿ, ಕೊಂಬುಸೇವೆ ಮೊದಲಾದ ಜನಪದೀಯ ತಂಡಗಳು ತಮ್ಮ ಕಲೆಯ ಪ್ರದರ್ಶನದ ಮೂಲಕ ರಥೋತ್ಸವಕ್ಕೆ ಮೆರಗು ನೀಡುತ್ತವೆ.
ಇನ್ನು ಜಾತ್ರೆಯ ಸಂದರ್ಭ ತೆಪ್ಪೋತ್ಸವವೂ ಕೂಡ ವಿಜೃಂಭಣೆಯಿಂದ ನಡೆಯತ್ತದೆ. ಬೆಳಗ್ಗಿನ ಜಾವ ನಡೆಯುವ ತೆಪ್ಪೋತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ಪಾಲ್ಗೊಳ್ಳುತ್ತಾರೆ. ತೆಪ್ಪದ ದಿನ ಗೊರವರು ಗಿರಿಯ ಮೇಲೆ ಕುಣಿಯುವುದು ವಿಶೇಷವಾಗಿರುತ್ತದೆ. ಇದೇ ಸಂದರ್ಭ ಕಜ್ಜಾಯದ ಮಣೆ ಬಟ್ಟಲು ಉಡಿಸುತೀವಿ ಎಂದು ಹರಕೆ ಮಾಡಿಕೊಂಡವರು ತಮ್ಮ ಹರಕೆಯನ್ನು ಒಪ್ಪಿಸುತ್ತಾರೆ.

ಶಿವರಾತ್ರಿಗೆ ಬಸವನೊಂದಿಗೆ ಭಕ್ತರ ಪರಿಷೆ
ಅದೇ ದಿನ ಪರ್ವತ ಪರಿಷೆಯ ದಿನಾಂಕವನ್ನು ನೆರೆದ ಹಿರಿಯರ ಸಮ್ಮುಖದಲ್ಲಿ ನಿಗದಿಪಡಿಸಲಾಗುತ್ತದೆ. ಪರ್ವತ ಪರಿಷೆ ಎಂಬುವುದು ಈ ಜಾತ್ರೆಯ ವೈಶಿಷ್ಟ್ಯತೆಯಲ್ಲೊಂದಾಗಿದೆ. ಸಾಮಾನ್ಯವಾಗಿ ಶಿವರಾತ್ರಿ ಸಂದರ್ಭ ಬಸವನೊಂದಿಗೆ ಭಕ್ತರು ಪರಿಷೆ ಹೊರಡುತ್ತಾರೆ. ಕಾಲ್ನಡಿಗೆಯಲ್ಲಿಯೇ ಮದ್ದೂರು, ಚನ್ನಪಟ್ಟಣ, ಬೆಂಗಳೂರು, ನಂದ್ಯಾಲ ಮೂಲಕ ಶ್ರೀಶೈಲವನ್ನು ಯುಗಾದಿ ಸಂದರ್ಭ ತಲುಪುತ್ತಾರೆ ಅಲ್ಲಿ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ವೃತ ತೆಗೆಯಲಾಗುತ್ತದೆ. ಮತ್ತೆ ಒಂದು ತಿಂಗಳಿಗೆ ಕಾಲ್ನಡಿಗೆಯಲ್ಲಿಯೇ ಮುಡುಕುತೊರೆಗೆ ಹಿಂತಿರುಗಿ ಪರಿಷೆ ಯಶಸ್ವಿಯಾದುದಕ್ಕೆ ಮಲ್ಲಿಕಾರ್ಜುನನಿಗೆ ಪೂಜೆ ಸಲ್ಲಿಸುತ್ತಾರೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಮುಡುಕುತೊರೆ ಜಾತ್ರೆ ಕೊರೊನಾ ಕಾರಣಗಳಿಂದ ಕಳೆದ ಎರಡು ವರ್ಷಗಳಿಂದ ಸರಳವಾಗಿ ಸಂಪ್ರದಾಯವಾಗಿ ನಡೆಯುತ್ತಿದ್ದು, ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಲಾಗಿದೆ. ಜಾತ್ರೆ ಎಂದರೆ ಜನ ಇರಬೇಕು. ಆದರೆ ಕೊರೊನಾ ಕಾರಣದಿಂದ ಜನರಿಲ್ಲದ ಜಾತ್ರೆಯನ್ನು ನೋಡಬೇಕಾಗಿರುವುದು ದುರ್ದೈವದ ಸಂಗತಿಯಾಗಿದೆ.












Click it and Unblock the Notifications