ಮೈಸೂರಿನಲ್ಲಿ ಒಂದಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ
ಮೈಸೂರು, ಮೇ 5: ಬೆಂಗಳೂರಿನ ನಂತರ ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಕೋವಿಡ್-19 ರೋಗಿಗಳನ್ನು ಹೊಂದಿ ಕೆಂಪು ವಲಯವಾಗಿದ್ದ ಮೈಸೂರು ಜಿಲ್ಲೆ ಇದೀಗ ಹಸಿರು ವಲಯದತ್ತ ತಿರುಗುತ್ತಿದೆ.
ಇಂದು ಮೂವರು ಕೋವಿಡ್-19 ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 90 ಸೋಂಕಿತರಿದ್ದ ಮೈಸೂರಿನಲ್ಲಿ ಇದೀಗ ಸೋಂಕಿತರ ಸಂಖ್ಯೆ 8 ಕ್ಕೆ ಇಳಿದಿದ್ದು, ಮೈಸೂರಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ವಯನಾಡಿನಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದ ಎಚ್.ಡಿ ಕೋಟೆಯ 10 ಮಂದಿ ಮತ್ತು ಕೆ.ಆರ್ ನಗರ ತಾಲ್ಲೂಕಿನ ಆರು ಮಂದಿ ಸೋಂಕಿತರೂ ನೆಗೆಟಿವ್ ಆಗಿದ್ದಾರೆ ಎಂದರು.
ಈಗ ಕೇವಲ 26 ಜನರು ಮಾತ್ರ ಕ್ವಾರಂಟೈನ್ ನಲ್ಲಿದ್ದು, ಶೀಘ್ರ ಸೋಂಕು ಮುಕ್ತ ಜಿಲ್ಲೆ ಆಗಲಿದ್ದು, ಮೈಸೂರಿನ ಜ್ಯುಬಿಲಿಯಂಟ್ ಕಾರ್ಖಾನೆಯ 1500 ನೌಕರರನ್ನು ಕಟ್ಟು ನಿಟ್ಟಿನ ಕ್ವಾರಂಟೈನ್ ನಲ್ಲಿ ಇರಿಸಿದ್ದರಿಂದಾಗಿ ಸೋಂಕು ಹರಡುವುದು ತಪ್ಪಿದ್ದು, ಜನರು ಸಂತಸ ವ್ಯಕ್ತಪಡಿಸಿದ್ದಾರೆ.