ಪ್ರತಾಪ್ ಸಿಂಹ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು
ಮೈಸೂರು, ಮಾರ್ಚ್ 15: ಸಂಸದ ಪ್ರತಾಪ್ ಸಿಂಹ ಅಂಚೆ ಇಲಾಖೆಯನ್ನು ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿಕೊಂಡಿದ್ದು, ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಕೇಂದ್ರ ಸರ್ಕಾರದ ಸಾಧನೆ ಕುರಿತ 50 ಸಾವಿರ ಸಣ್ಣ ಪುಸ್ತಕಗಳನ್ನು ಮನೆ ಮನೆಗೆ ತಲುಪಿಸಲು ಸಂಸದ ಪ್ರತಾಪ ಸಿಂಹ ಅವರು ಯಾವುದೇ ವಿಳಾಸ ನಮೂದಿಸದೇ, ಅಂಚೆ ಮೂಲಕ ಕಳುಹಿಸಿದ್ದಾರೆ. ಆದರೆ, ಇದಕ್ಕೆ ಚುನಾವಣಾ ಆಯೋಗದಿಂದ ಅನುಮತಿ ಪಡೆದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಪ್ರತಾಪ್ ಸಿಂಹ, ತಮ್ಮ ಪಕ್ಷ ಮತ್ತು ಕ್ಷೇತ್ರಕ್ಕೆ ಸಂಬಂಧಿಸಿದ ಪುಸ್ತಕವನ್ನು ಅಂಚೆ ಇಲಾಖೆಯ ಪೋಸ್ಟ್ ಮ್ಯಾನ್ ಬಳಸಿಕೊಂಡು ಮೈಸೂರಿನಲ್ಲಿ ವಿತರಿಸುವ ಮೂಲಕ ಅಧಿಕಾರ ದುರುಪಯೋಗ ಮಾಡಿದ್ದಾರೆ.

ಇದಕ್ಕಾಗಿ ಬಿಜೆಪಿ ಪಕ್ಷ ಅಥವಾ ಸಂಸದ ಪ್ರತಾಪ್ ಸಿಂಹ ಚುನಾವಣಾ ಆಯೋಗದಿಂದ ಯಾವುದೇ ಅನುಮತಿ ಪಡೆದಿಲ್ಲ. ಕೇಂದ್ರ ಅಂಚೆ ಕಚೇರಿ ಮತ್ತು ನೌಕರರನ್ನು ದುರುಪಯೋಗಪಡಿಸಿಕೊಂಡು ಪ್ರಚಾರ ಪಡೆದುಕೊಳ್ಳುತ್ತಿರುವುದು ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಶಿವರಾಮು ಆರೋಪಿಸಿದರು.
ಈ ಮೂಲಕ ಅಂಚೆ ಇಲಾಖೆ ಸಿಬ್ಬಂದಿಯನ್ನು ಒಂದು ಪಕ್ಷದ ಪರವಾಗಿ ಕೆಲಸ ಮಾಡುವಂತೆ ಮಾಡಲಾಗಿದೆ ಎಂದ ಶಿವರಾಮು, ಇದು ನೀತಿ ಸಂಹಿತೆ ಜಾರಿಗೆ ಬಂದ ನಂತರ ಆಗಿರುವಂತದ್ದು. ಒಂದು ಪುಸ್ತಕಕ್ಕೆ 2.50 ರೂ ದರ ರೂ.ನಿಗದಿಪಡಿಸಲಾಗಿದೆ. ಚುನಾವಣಾ ಆಯೋಗದ ಗಮನಕ್ಕೆ ತಂದರೆ ಈ ಹಣ ಅಭ್ಯರ್ಥಿಯ ವೆಚ್ಚಕ್ಕೆ ಸೇರ್ಪಡೆಯಾಗುತ್ತದೆ. ಹಾಗಾಗಿ ಪ್ರತಾಪಸಿಂಹ, ಆಯೋಗದ ಗಮನಕ್ಕೆ ತರದೇ ಕಳ್ಳದಾರಿಯಲ್ಲಿ ಈ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.












Click it and Unblock the Notifications