ಅಭಿಮಾನಿಗೆ ಚಪ್ಪಲಿ ಉಡುಗೊರೆ ಕೊಟ್ಟ ಸಿಎಂ
ಮಂಡ್ಯ, ಸೆಪ್ಟೆಂಬರ್ 10: ಬಿ.ಎಸ್.ಯಡಿಯೂರಪ್ಪ ಸಿಎಂ ಆಗುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದ ಅಭಿಮಾನಿಯೊಬ್ಬರಿಗೆ ಸ್ವತಃ ಮುಖ್ಯಮಂತ್ರಿಗಳೇ ಕರೆದು ಹೊಸ ಚಪ್ಪಲಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಯಡಿಯೂರಪ್ಪ ಸಿಎಂ ಆಗಿದ್ದಕ್ಕೆ ತಲೆಮುಡಿ ಕೊಟ್ಟ ಅಭಿಮಾನಿ!
ಬಿಜೆಪಿ ಕಾರ್ಯಕರ್ತ, ಕೆರಗೋಡು ಶಕ್ತಿ ಕೇಂದ್ರದ ಅಧ್ಯಕ್ಷ ಶಿವಕುಮಾರ್ ಆರಾಧ್ಯ 2018ರ ವಿಧಾನಸಭಾ ಚುನಾವಣೆಗೆ ಮುನ್ನ ನಗರದ ಕಾಳಿಕಾಂಬಾ ದೇವಾಲಯದ ಎದುರು ಯಡಿಯೂರಪ್ಪ ಸಿಎಂ ಆಗುವವರೆಗೂ ಚಪ್ಪಲಿ ಧರಿಸಲ್ಲ ಎಂದು ಶಪಥ ಮಾಡಿದ್ದರು. ಚುನಾವಣೆ ನಂತರ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಸ್ಥಾನ ಅಲುಗಾಡುತ್ತಿದ್ದ ಕಾರಣ ಆಗಲೂ ಶಿವಕುಮಾರ್ ಚಪ್ಪಲಿ ಧರಿಸಲಿಲ್ಲ. ಕಳೆದ 26 ತಿಂಗಳಿನಿಂದ ಅವರು ಬರಿಗಾಲಿನಲ್ಲಿಯೇ ಓಡಾಡುತ್ತಿದ್ದರು.
ಜುಲೈನಲ್ಲಿ ಬಿಎಸ್ವೈ ಹುಟ್ಟೂರು ಬೂಕನಕೆರೆಗೆ ಆಗಮಿಸಿದ ವೇಳೆ ಆ ಅಭಿಮಾನಿ ಶಿವಕುಮಾರ್ ಅವರಿಗೆ ತಾವೇ ಹೊಸ ಚಪ್ಪಲಿ ಕೊಡಿಸುವುದಾಗಿಯೂ ಸಿಎಂ ಹೇಳಿದ್ದರು.
ಇದೀಗ ಯಡಿಯೂರಪ್ಪನವರು ಬೆಂಗಳೂರಿನ ಡಾಲರ್ಸ್ ಕಾಲೊನಿಯ ನಿವಾಸದಲ್ಲಿ ಶಿವಕುಮಾರ್ ಅವರಿಗೆ ಹೊಸ ಚಪ್ಪಲಿ ನೀಡಿದ್ದಾರೆ. ಈ ಕುರಿತು ಮಾತನಾಡಿದ ಶಿವಕುಮಾರ್, "ನನಗೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದು ಖುಷಿಯಾಗಿದೆ. ನನ್ನ ಹರಕೆ ತೀರಿದೆ. ಈಗ ಚಪ್ಪಲಿಯನ್ನು ಉಡುಗೊರೆಯಾಗಿ ಅವರೇ ನೀಡಿದ್ದಾರೆ. ಅದನ್ನು ನಮ್ಮ ಮನೆಯ ಶೋಕೇಸ್‌ನಲ್ಲಿ ಇಡುತ್ತೇನೆ" ಎಂದು ಸಂತಸ ಹಂಚಿಕೊಂಡರು.