ವರ್ಗಾವಣೆ ದಂಧೆ ಆರೋಪಕ್ಕೆ ವಿಧಾನಸಭೆಯಲ್ಲೇ ತಕ್ಕ ಉತ್ತರ ಕೊಡುತ್ತೇನೆ-ಸಿಎಂ ಸಿದ್ದರಾಮಯ್ಯ
ಮೈಸೂರು, ನವೆಂಬರ್ 19: ಎಚ್.ಡಿ.ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪಕ್ಕೆ ವಿಧಾನಸಭೆಯಲ್ಲಿ ತಕ್ಕ ಉತ್ತರ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ವಿಡಿಯೋದಲ್ಲಿ ಚರ್ಚೆಯಾಗಿರುವುದಕ್ಕೂ, ನೆನ್ನೆ ಇನ್ಸ್‌ಪೆಕ್ಟರ್ ವರ್ಗಾವಣೆಯಾಗಿರುವ ಪ್ರಕ್ರಿಯೆಗೂ ಯಾವುದೇ ಸಂಬಂಧವಿಲ್ಲ. ವಿಡಿಯೋದಲ್ಲಿ ಮೈಸೂರು ತಾಲೂಕು ಬಿಇಒ ವಿವೇಕಾನಂದ ಅವರ ಜೊತೆಯಲ್ಲಿ ಮಾತನಾಡಲಾಗಿದೆ. ನಿನ್ನೆ ಚಾಮರಾಜ ಕ್ಷೇತ್ರದ ಠಾಣೆಗೆ ವರ್ಗಾವಣೆಗೊಂಡಿರುವುದು ಇನ್ಸ್‌ಪೆಕ್ಟರ್ ವಿವೇಕಾನಂದ ಆಗಿದ್ದಾರೆ. ಈ ವರ್ಗಾವಣೆಗೂ ಬಿಇಒ ಅವರೊಂದಿಗಿನ ಮಾತುಕತೆ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಕೌರವ ಸಂಸ್ಕೃತಿ ರಾಜಕಾರಣ ಬೇಡ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿದ್ದಕ್ಕೆ ಉತ್ತರ ಕೊಡಬೇಕಿಲ್ಲ. ಪೆನ್‌ಡ್ರೈವ್‌ನಲ್ಲಿ ದಾಖಲೆಗಳಿವೆ ಎನ್ನುವ ಅವರು ತೆಗೆದು ತೋರಿಸಲು ಹೇಳಿ. ವಿಧಾನಸಭೆಯಲ್ಲಿ ಏಕೆ ಅದನ್ನು ಬಹಿರಂಗಪಡಿಸಲಿಲ್ಲ. ಬೇಡ ಅಣ್ಣಾ ಎಂದು ಬಿಟ್ರಾ? ಅದಕ್ಕೆ ತೋರಿಸಲಿಲ್ವಾ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಅವರು ಅಧಿಕಾರ ಹಿಡಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹತಾಶರಾಗಿ ವರ್ಗಾವಣೆ ದಂಧೆ ಹೇಳಿಕೆ ನೀಡುತ್ತಿದ್ದಾರೆ. ಅವರ ಹೊಟ್ಟೆ ಉರಿ, ಹೊಟ್ಟೆ ಕಿಚ್ಚು, ಅಸೂಯೆ, ದ್ವೇಷ ಮನೋಭಾವವೇ ಇದಕ್ಕೆ ಕಾರಣ. ಹಿಂದೆ 37 ಸ್ಥಾನದಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್ ಈ ಬಾರಿ 19ಕ್ಕೆ ಕುಸಿದಿದ್ದೇಕೆ. ಅವರ ಪಂಚರತ್ನ ಯಾತ್ರೆಗೆ ಜನ ಏಕೆ ಬೆಲೆ ಕೊಟ್ಟಿಲ್ಲ. ಅವರು ಹತಾಶೆಗೆ ಒಳಗಾಗಲು ಈ ಅಂಶಗಳೇ ಕಾರಣವಾಗಿವೆ ಎಂದು ಆರೋಪಿಸಿದರು.
ಈಗ ಚುನಾವಣೆ ನಡೆದರೂ ಬಿಜೆಪಿ ಗೆಲ್ಲುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಆದರೆ ಸೋಲು ಗೆಲುವಿನ ಬಗ್ಗೆ ಜನರು ತೀರ್ಮಾನ ನೀಡುತ್ತಾರೆ. ಬಿಜೆಪಿಯವರು ಕನಸು ಕಾಣುತ್ತಿದ್ದಾರೆ. ಅವರ ವಿಶ್ವಾಸವೇ ನಿಜವಾಗಿದ್ದರೆ ರಮೇಶ್, ಯತ್ನಾಳ್, ಬೆಲ್ಲದ್ ಏಕೆ ಎದ್ದು ಹೋದರು..? ಈಗ ಮಗನನ್ನೇ ರಾಜ್ಯಾಧ್ಯಕ್ಷ ಮಾಡಿದ್ದಾರೆ. ಆರ್.ಅಶೋಕ್ ಅವರನ್ನು ವಿಪಕ್ಷ ನಾಯಕನನ್ನಾಗಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಅಸಮಾಧಾನ ಉಂಟಾಗಲಿದೆ. ಬಿಜೆಪಿಯ ಪರಿಸ್ಥಿತಿ ಏನಾಗಲಿದೆ ಎಂಬುದನ್ನು ನೀವೇ ಕಾದುನೋಡಿ ಎಂದರು.












Click it and Unblock the Notifications