Siddaramaiah: ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ ನೀಡುವ ಸೂಚನೆ ಕೊಟ್ರಾ ಸಿಎಂ ಸಿದ್ದರಾಮಯ್ಯ?
ವಾಲ್ಮೀಕಿ ನಿಗಮ ಹಗರಣದಲ್ಲಿ ಬಂಧನವಾಗಿದ್ದ ನಾಗೇಂದ್ರಾಗೆ ಮತ್ತೆ ಸಚಿವ ಸ್ಥಾನ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಸುಳಿವು ಕೊಟ್ಟರಾ ಎನ್ನುವ ಅನುಮಾನ ಶುರುವಾಗಿದೆ. ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯಲ್ಲಿ ವಾಲ್ಮೀಕಿ ಜಯಂತಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡುವ ಸಂದರ್ಭದಲ್ಲಿ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡುವ ವಿಚಾರ ಪ್ರಸ್ತಾಪ ಮಾಡಲಾಗಿದೆ.
ಎಚ್.ಡಿ.ಕೋಟೆ ಕಾರ್ಯಕ್ರಮದಲ್ಲಿ ಎರಡು ಬಾರಿ ಶಾಸಕರಾಗಿರುವ ಶಾಸಕ ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ನೀಡಿ ಎಂದು ಬೆಂಬಲಿಗರು ಬೇಡಿಕೆ ಇಟ್ಟರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಇದೀಗ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ. ಎಲ್ಲಿ ಖಾಲಿ ಇದೆ ಹೇಳಿ? ಹಾಗಂತ ಸುಳ್ಳು ಹೇಳಲು ಆಗುವುದಿಲ್ಲ. ಈಗ ಸಚಿವ ಸ್ಥಾನ ಕೊಡುತ್ತೇನೆ ಎಂದು ಬಳಿಕ ಮಾತಿಗೆ ತಪ್ಪಿದರೆ ಆಗುತ್ತದಾ ಎಂದು ಹೇಳಿದ ಅವರು, ನಾಗೇಂದ್ರ ಅವರಿಗೆ ಸಚಿವ ಸ್ಥಾನ ಕೊಡಬೇಕು, ಕೊಡುತ್ತೇನೆ ಎಂದರು.

ಅಭಿವೃದ್ದಿ ಕೆಲಸ ನಿಂತಿಲ್ಲ
ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿ ಮಾಡಿದ ಬಳಿಕ ಸರ್ಕಾರ ಬಳಿ ದುಡ್ಡಿಲ್ಲ, ದಿವಾಳಿಯಾಗಿದೆ ಎಂದೆಲ್ಲಾ ವಿಪಕ್ಷಗಳು ಹೇಳುತ್ತವೆ. ಆದರೆ ಇಂದು 443 ಕೋಟಿ ರೂಪಾಯಿ ಅಭಿವೃದ್ದಿ ಕೆಲಸಕ್ಕೆ ಚಾಲನೆ ಕೊಟ್ಟಿದ್ದೇನೆ. ಇದು ದುಡ್ಡಲ್ಲವಾ? ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ನಿಂತಿಲ್ಲ, ಸಂಬಳ ಕೊಡೋಕೆ ದುಡ್ಡಿಲ್ಲ ಅಂತಾರೆ, ಆದರೆ ಯಾರಿಗಾದ್ರೂ ಸಂಬಳ ಕಟ್ ಮಾಡಿದ್ದೇವಾ? ನಿಲ್ಲಿಸಿದ್ದೇವಾ? ಎಂದು ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ ಎಂದರೆ ಬಿಜೆಪಿ ನಾಯಕರಿಗೆ ಭಯ, ಬಡವರ ಪರ ಕೆಲಸ ಮಾಡುತ್ತಿರುವುದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ ಅದಕ್ಕಾಗಿ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು. ಬಿಜೆಪಿ ಅವರು ನಿಮಗೆ ಅಕ್ಕಿ ಕೊಡಲಿಲ್ಲ. ದುಡ್ಡು ಕೊಡ್ತೀವಿ ಕೊಡ್ರಿ ಅಂತಾ ಕೇಂದ್ರ ಸರ್ಕಾರನ ಕೇಳಿದರೂ ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬುಡಕಟ್ಟು ಜನರ ಜೊತೆ ಹೆಜ್ಜೆ ಹಾಕಿದ ಸಿಎಂ
ಎಚ್ ಡಿ ಕೋಟೆಯ ಕೆರೆಹಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾಡಿಯ ನಿವಾಸಿಗಳ ಜೊತೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು. ಈ ದೇಶದ ಆದಿವಾಸಿ ಸಮುದಾಯಗಳ ಬದುಕು, ಕಲೆ, ಆಚರಣೆಗಳು ತಮ್ಮ ಸುತ್ತಲಿನ ಪರಿಸರದೊಂದಿಗೆ ಮಿಳಿತಗೊಂಡಿವೆ. ಸುತ್ತಲಿನ ಪ್ರಕೃತಿ, ಪರಿಸರದ ದನಿ ಎಂಬಂತೆ ಅವರ ಹಾಡುಗಳಿವೆ, ಒಮ್ಮೆ ಕೇಳಿದರೆ ಗುನುಗುನಿಸುತ್ತಲೇ ಇರಬೇಕೆನ್ನುವ ಸಹಜ ಸಂಗೀತ-ಲಾಲಿತ್ಯವಿದೆ ಎಂದು ತಾವು ಹೆಜ್ಜೆ ಹಾಕಿರುವ ವಿಡಿಯೋವನ್ನು ಸಿದ್ದರಾಮಯ್ಯ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.












Click it and Unblock the Notifications