2 ಬಾರಿ ಸಿಎಂ ಆದ್ರೂ, 3 ವರ್ಷದಿಂದ ಮನೆ ಕಟ್ಟಿಸಲು ಆಗಲಿಲ್ಲ: ಸಿದ್ದರಾಮಯ್ಯ
ನಾನು ಎರಡು ಬಾರಿ ಸಿಎಂ ಆದರೂ ಮೈಸೂರಲ್ಲಿ ಒಂದೂ ಮನೆ ಇಲ್ಲ. ಇನ್ನೂ ಮರಿಸ್ವಾಮಿ ಮನೇಲಿ ಇದೀನಿ. ಕುವೆಂಪು ರಸ್ತೇಲಿ 3 ವರ್ಷಗಳಿಂದ ಮನೆ ಕಟ್ಟುತ್ತಲೇ ಇದ್ದೀನಿ. ಇದುವರೆಗೂ ಪೂರ್ತಿ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವರುಣಾ ಜನತೆಗೆ ಮುಂದೆ ಹೇಳಿಕೊಂಡಿದ್ದಾರೆ.
ಇಂದು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ 501.81 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಹಲವಾರು ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಸಿದ್ದರಾಮಯ್ಯ ಅಬ್ಬರದ ಭಾಷಣ ಮಾಡಿದರು.

ನನಗೆ ವರ್ಚಸ್ಸು ಕೊಡುವವರು ನೀವು. ನಿಮ್ಮ ಎದುರಿಗೆ ಪ್ರಾಮಾಣಿಕವಾಗಿ ಇದ್ದೇನೆ ಎಂದು ಸಿದ್ದರಾಮಯ್ಯ ಕ್ಷೇತ್ರದ ಜನತೆಗೆ ಹೇಳಿದರು. ನಾನು ಮಂತ್ರಿಯಾಗಿ 45 ವರ್ಷ ಆಯ್ತು. ನನ್ನ ಮೇಲೆ ಸಣ್ಣ ಕಪ್ಪುಚುಕ್ಕೆ ಇಲ್ಲ. ಹಿಂದುಳಿದ ವರ್ಗದ ನಾನು ಎರಡು ಬಾರಿ ಸಿಎಂ ಆದೆ ಅಂತ ಬಿಜೆಪಿಗೆ ಹೊಟ್ಟೆಕಿಚ್ಚು. ಇದನ್ನು ನೀವು ಸಹಿಸ್ತೀರಾ? ಎಂದು ಪ್ರಶ್ನಿಸಿದರು.
ನೀವೇ ನನ್ನ ಮಾಲೀಕರು. ನೀವೇ ನನ್ನ ಯಜಮಾನರು. ನಿಮ್ಮ ಆಶೀರ್ವಾದವೇ ನನಗೆ ಶ್ರೀರಕ್ಷೆ. ಬಿಜೆಪಿ-ಜೆಡಿಎಸ್ ನಾಯಕರ ಹೊಟ್ಟೆಕಿಚ್ಚಿನಿಂದ ನನ್ನ ವರ್ಚಸ್ಸು ಕಡಿಮೆ ಆಗಲ್ಲ. ನನ್ನ ವರ್ಚಸ್ಸು ವರುಣಾ ಜನತೆ, ನನ್ನ ವರ್ಚಸ್ಸು ರಾಜ್ಯದ ಜನತೆ ಎಂದು ಸಾರಿ ಹೇಳಿದರು.
ರಾಜ್ಯದ ಜನತೆ ನನ್ನ ಜೊತೆಗೆ ಇರುವವರೆಗೂ ನಾನು ಬಿಜೆಪಿ-ಜೆಡಿಎಸ್ ಷಡ್ಯಂತ್ರಕ್ಕೆ ಹೆದರಲ್ಲ. ಎಲ್ಲ ಷಡ್ಯಂತ್ರವನ್ನು ಸೋಲಿಸುತ್ತೇನೆ. ಅವರ ಆಟಗಳಿಗೆ ಜಗ್ಗಲ್ಲ, ಬಗ್ಗಲ್ಲ. ಸಾಮಾಜಿಕ ನ್ಯಾಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸವಾಲು ಹಾಕಿದರು.

ವರುಣಾ ಜನರ ಆಶೀರ್ವಾದದಿಂದ ಎರಡು ಸಲ ಸಿಎಂ ಆಗಿದ್ದೇನೆ. ವರುಣಾ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗಿಂತ ಹೆಚ್ಚು ಮತ ಕೊಟ್ಟಿದ್ದೀರಿ. ನನಗೆ ವಿಶೇಷವಾಗಿ ಆಶೀರ್ವಾದ ಮಾಡಿದ್ದಕ್ಕಾಗಿ ಕ್ಷೇತ್ರದ ಮತದಾರರಿಗೆ ಅನಂತ ಅನಂತ ಧನ್ಯವಾದಗಳು ಎಂದರು.
ವರುಣಾ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಅನುದಾನ ಕೊಡಲಾಗುತ್ತಿದೆ. ನಾನು ಉಪಕಾರ ಮಾಡುತ್ತಿಲ್ಲ. ಕ್ಷೇತ್ರದ ಪ್ರತಿನಿಧಿಯಾಗಿ ಅಭಿವೃದ್ಧಿ ಮಾಡುವ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ, ಜನರ ಋಣ ತೀರಿಸುತ್ತಿದ್ದೇನೆ ಎಂದು ಭಾವುಕರಾದರು.
ಕೇಂದ್ರದ ವಿರುದ್ಧ ಗುಡುಗು: ಕೇಂದ್ರಕ್ಕೆ ಅತೀ ಹೆಚ್ಚು ತೆರಿಗೆ ಕಟ್ಟುವವರು ನಾವು. ನಾವು ನಮ್ಮ ಪಾಲಿನ ತೆರಿಗೆ ಪಡೆಯಲು ಭಿಕ್ಷೆ ಬೇಡಬೇಕಾ? ಮೊನ್ನೆ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಿಗೆ ಅತಿ ಹೆಚ್ಚು ತೆರಿಗೆ ಪಾಲು ಕೊಟ್ಟಿರುವ ಕೇಂದ್ರ ಸರ್ಕಾರವು ರಾಜ್ಯಕ್ಕೆ ಮಾತ್ರ ಕೇವಲ ಆರು ಸಾವಿರ ಕೋಟಿ ಕೊಟ್ಟು ಭಯಂಕರ ಅನ್ಯಾಯ ಮಾಡಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶಗೊಂಡರು.

ಈ ಅನ್ಯಾಯದ ವಿರುದ್ಧ ದೆಹಲಿಗೇ ಹೋಗಿ ನಾವು ಪ್ರತಿಭಟನೆ ಮಾಡಿದೆವು. ಬಿಜೆಪಿ-ಜೆಡಿಎಸ್‌ನ ಒಬ್ಬ ಲೋಕಸಭಾ ಸದಸ್ಯ ರಾಜ್ಯದ ಪಾಲನ್ನು ಕೇಳುವ ಧೈರ್ಯ ಮಾಡಿಲ್ಲ. ಮಾಡುವುದೂ ಇಲ್ಲ. ಆದ್ದರಿಂದ ಕೇಂದ್ರದ ದ್ರೋಹದ ವಿರುದ್ಧ ರಾಜ್ಯದ ಜನತೆ ಮಾತನಾಡಬೇಕು ಎಂದರು.
ರಾಜ್ಯಕ್ಕೆ 5,495 ಕೋಟಿ ರೂಪಾಯಿ ವಿಶೇಷ ಅನುದಾನದ ಜೊತೆಗೆ ನೀರಾವರಿ ಯೋಜನೆಗೆ ಅನುದಾನ ನೀಡಲು ಹಣಕಾಸು ಆಯೋಗ ಮಾಡಿದ್ದ ಶಿಫಾರಸ್ಸನ್ನು ನಿರ್ಮಲಾ ಸೀತಾರಾಮನ್ ತಿರಸ್ಕರಿಸಿದರು. ರಾಜ್ಯದ ಫೆರಿಫೆರಲ್ ರಸ್ತೆಗೆ, ಕೆರೆಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ಕೊಡ್ತೀವಿ ಎಂದು ಘೋಷಿಸಿದರು. ಆದರೆ ನಯಾಪೈಸೆ ಕೊಡಲಿಲ್ಲ. ಈ ಅನ್ಯಾಯಗಳ ವಿರುದ್ಧ ರಾಜ್ಯದ ಜನತೆ ಮಾತನಾಡಿದರೆ ತಪ್ಪಾ, ನಾವು ಪ್ರತಿಭಟಿಸಿದರೆ ತಪ್ಪಾ? ಎಂದು ಪ್ರಶ್ನಿಸಿದರು.
ಲೋಕಸಭಾ ಚುನಾವಣೆ ಬಳಿಕ ನಮ್ಮ ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತವೆ ಎಂದು ದೆಹಲಿಯ ನರೇಂದ್ರ ಮೋದಿಯಿಂದ, ಇಲ್ಲಿನ ಆರ್.ಅಶೋಕ್ ವರೆಗೂ ಸುಳ್ಳುಗಳ ಮೇಲೆ ಸುಳ್ಳು ಹೇಳಿದರು. ಇದುವರೆಗೂ ಗ್ಯಾರಂಟಿಗಳು ನಿಂತಿಲ್ಲ, ನಿಲ್ಲುವುದೂ ಇಲ್ಲ. ನಮ್ಮ ಸರ್ಕಾರ ಇರುವವರೆಗೂ ಗ್ಯಾರಂಟಿ ನಿಲ್ಲಲ್ಲ ಎಂದರು.












Click it and Unblock the Notifications