ಹೊಸ ವರ್ಷಾಚರಣೆಯ ವೇಳೆ ಮೈಸೂರಿನಲ್ಲಿ ಮಹಿಳೆಯರ ಕಾವಲಿಗೆ ‘ಚಾಮುಂಡಿ ಪಡೆ’ ಸನ್ನದ್ಧ
ಮೈಸೂರು, ಡಿಸೆಂಬರ್ 30: ಹೊಸ ವರ್ಷಾಚರಣೆಯ ನೆಪದಲ್ಲಿ ಡಿಸೆಂಬರ್ 31ರ ರಾತ್ರಿ ಅಸಭ್ಯವಾಗಿ ವರ್ತಿಸುವುದು, ಕುಡಿದು ಹುಚ್ಚಾಟವಾಡುವುದು ಸೇರಿದಂತೆ ಕಾನೂನು ಉಲ್ಲಂಘನೆಯ ಚಟುವಟಿಕೆ ನಡೆಸುವವರನ್ನು ಹೆಡೆಮುರಿ ಕಟ್ಟಲು ಮೈಸೂರಿನಲ್ಲಿ ಚಾಮುಂಡಿ ಪಡೆ (ಸುರಕ್ಷತಾ ಪಿಂಕ್ ಗರುಡಾ) ತಯಾರಾಗಿದೆ.
ಹೊಸ ವರ್ಷಾಚರಣೆ ಸಲುವಾಗಿ ಜನ ಮನೆಯಿಂದ ಹೊರಬಂದು ತಮಗೆ ಇಷ್ಟವಾದ ಸ್ಥಳಗಳಲ್ಲಿ ಪಾರ್ಟಿಗಳನ್ನು ಮಾಡುವುದರಿಂದ ನಗರದಾದ್ಯಂತ ಜನ ಸಂದಣಿಯಿರುತ್ತದೆ. ಹೋಟೆಲ್, ರೆಸಾರ್ಟ್‌ಗಳಲ್ಲಿ ವರ್ಷಾಚರಣೆಯ ಕಾರ್ಯಕ್ರಮಗಳು ಜೋರಾಗಿಯೇ ನಡೆಯುತ್ತದೆ. ರಾತ್ರಿಯಿಡೀ ಕೆಲವರು ನಗರದಲ್ಲಿ ಅಡ್ಡಾಡುವ ಮೂಲಕ ಹೊಸ ವರ್ಷದ ಶುಭಾಶಯ ವಿನಿಮಯ ಮಾಡುವುದು ನಡೆಯುತ್ತದೆ.

ಇಷ್ಟೇ ಆಗಿದ್ದರೆ ಯಾವುದೇ ಸಮಸ್ಯೆಯಿರುತ್ತಿರಲಿಲ್ಲ ಆದರೆ ವರ್ಷಾಚರಣೆಯ ಗುಂಗಿನಲ್ಲಿ ಅಸಭ್ಯವಾಗಿ ವರ್ತಿಸುವ ಪುಂಡರು ಮಹಿಳೆ ಮಕ್ಕಳಿಗೆ ಹಿಂಸೆ ನೀಡುವುದು, ಅಸಭ್ಯವಾಗಿ ವರ್ತಿಸುವುದು ಸೇರಿದಂತೆ ಹಲವು ರೀತಿಯ ಹುಚ್ಚಾಟಗಳನ್ನು ನಡೆಸುವುದರಿಂದ ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಕಾನೂನು ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ.
36 ವಿಶೇಷ ಕಾರ್ಯಪಡೆ ರಚನೆ
ಹೊಸ ವರ್ಷಾಚರಣೆ ಸಂದರ್ಭ ಏನೆಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದರ ಬಗ್ಗೆ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್.ಬಿ ಅವರು ಮಾಹಿತಿ ನೀಡಿದ್ದು, ವರ್ಷಾಚರಣೆಯ ಗುಂಗಿನಲ್ಲಿ ಅಸಭ್ಯವಾಗಿ ವರ್ತಿಸುವವರಿಗೆ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಮೈಸೂರು ನಗರದಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ಎಂಟು ಚಾಮುಂಡಿ ಪಡೆ (ಸುರಕ್ಷತಾ ಪಿಂಕ್ ಗರುಡಾ) ರಚಿಸಲಾಗಿದೆ.

ಇನ್ನು ಹೊಸ ವರ್ಷಾಚರಣೆ ನೆಪದಲ್ಲಿ ಅಸಭ್ಯ ವರ್ತನೆಯನ್ನು ಯಾರೂ ಮಾಡಬಾರದು. ಈ ಸಂಬಂಧ 36 ವಿಶೇಷ ಕಾರ್ಯಪಡೆ ತಂಡ ರಚನೆ ಮಾಡಲಾಗಿದೆ. ಮಹಿಳೆಯರ ರಕ್ಷಣೆಗಾಗಿ 8 ಸುರಕ್ಷತಾ ಪಿಂಕ್ ಗರುಡ (ಚಾಮುಂಡಿ ಪಡೆ) ರಚನೆ ಮಾಡಿದ್ದೇವೆ. ನಗರದ ಪ್ರಮುಖ ಸ್ಥಳಗಳಲ್ಲಿ ಶ್ವಾನದಳ ಮತ್ತು ವಿಧ್ವಂಸಕ ಕೃತ್ಯ ತಡೆಗಾಗಿ 4 ತಂಡ ರಚನೆ ಮಾಡಲಾಗಿದೆ. ನಗರದಲ್ಲಿರುವ 59 ಸಿಸಿ ಕ್ಯಾಮರಾಗಳ ಜತೆಗೆ ಹೆಚ್ಚುವರಿ 275 ಸಿಸಿ ಕ್ಯಾಮರಾಗಳನ್ನು ಅಳವಡಿಸಿರುವುದಾಗಿ ಹೇಳಿದ್ದಾರೆ.
ಹುಚ್ಚಾಟ ನಡೆಸುವವರ ಮೇಲೆ ನಿಗಾ
ರಸ್ತೆಗಳಲ್ಲಿ ವೀಲ್ಹಿಂಗ್, ಓವರ್ ಸ್ಪೀಡ್, ಕರ್ಕಶ ಶಬ್ದ, ಕುಡಿದು ವಾಹನ ಚಾಲನೆ ತಡೆಗಾಗಿ ಸಂಚಾರ ಪೊಲೀಸರು, ತಜ್ಞರನ್ನೊಳಗೊಂಡ ಕ್ಷಿಪ್ರ ಪಡೆ ರಚನೆ ಮಾಡಲಾಗಿದೆ. ರಿಂಗ್ ರಸ್ತೆಯಲ್ಲಿ 8 ಹೈವೇ ಪೆಟ್ರೋಲಿಂಗ್ ವಾಹನಗಳು ನಿಯೋಜನೆ ಮಾಡಲಾಗುತ್ತದೆ. ಒಟ್ಟು 18 ಗರುಡ ವಾಹನಗಳು ಗಸ್ತು ತಿರುಗಲಿವೆ. ನಗರದ ಹೊರವಲಯದಲ್ಲಿ 12 ಕಡೆ ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗುತ್ತದೆ. ನಗರದ ಒಳ ಭಾಗದಲ್ಲಿ 18 ಕಡೆ ಚೆಕ್ ಪೋಸ್ಟ್ ನಿರ್ಮಿಸಿ ಕಿಡಿಗೇಡಿಗಳ ಮೇಲೆ ತೀವ್ರ ನಿಗಾ ವಹಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 31ರ ರಾತ್ರಿ ಹೊಸ ವರ್ಷ ಆಚರಣೆ ನೆಪದಲ್ಲಿ ವಿದ್ಯಾರ್ಥಿಗಳು, ಯುವಕರು ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸಬಾರದು. ವರ್ತಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ನೆಪದಲ್ಲಿ ಅಶ್ಲೀಲ, ಅರೆಬೆತ್ತಲೆ ಮತ್ತು ಮಾದಕ ವಸ್ತುಗಳ ಸೇವನೆ ಮತ್ತು ಜೂಟಾಟ ನಡೆಸುವುದನ್ನು ನಿಷೇಧಿಸಲಾಗಿದೆ.

ಮಹಿಳೆಯರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಅವರ ಸುರಕ್ಷತೆ ದೃಷ್ಟಿಯಿಂದ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ಎಂಟು ಚಾಮುಂಡಿ ಪಡೆ ರಚಿಸಲಾಗಿದ್ದು, ಅಂದು ರಾತ್ರಿ ನಗರದಲ್ಲಿ ಓಡಾಟ ನಡೆಸಲಿದೆ. ಒಂದು ವೇಳೆ ಯುವತಿಯರಿಗೆ ಕೀಟಲೆ ಮಾಡುವುದು ಕಂಡುಬಂದರೆ ಅಂತಹವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪಾರ್ಟಿ ನಡೆಸಲು ಅನುಮತಿ ಕಡ್ಡಾಯ
ಮಹಿಳೆಯರು ಹೆಚ್ಚಾಗಿ ಸೇರುವ ಅರಮನೆ ಸೇರಿದಂತೆ ಕೆಲವೆಡೆ ಈ ಚಾಮುಂಡಿ ಪಡೆ ವಾಹನ ಸಂಚರಿಸಿ ಪುಂಡರ ಮೇಲೆ ನಿಗಾವಹಿಸಲಿದೆ. ಅರಮನೆ ಆವರಣದಲ್ಲಿ ವಿಶೇಷವಾಗಿ ಹೊಸ ವರ್ಷ ಆಚರಣೆ ಕಾರ್ಯಕ್ರಮ ಇರುವುದರಿಂದ 10 ಸಾವಿರಕ್ಕೂ ಹೆಚ್ಚು ಮಂದಿ ಸೇರಲಿದ್ದಾರೆ. ಈ ಹಿನ್ನಲೆಯಲ್ಲಿ ಅರಮನೆ ಸುತ್ತ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗುತ್ತದೆ.
ಸಂತೋಷ ಕೂಟ ನಡೆಸುವ ನಗರದ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್, ಹೋಂ ಸ್ಟೇ, ಸರ್ವೀಸ್ ಅಪಾರ್ಟ್ ಮೆಂಟ್, ಅಪಾರ್ಟ್ ಅಸೋಸಿಯೇಷನ್, ಮಾಲ್ಸ್ ಮತ್ತು ಸಂಘ ಸಂಸ್ಥೆಗಳು ಡಿ.30ರೊಳಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಲು ಸೂಚಿಸಿರುವುದಲ್ಲದೆ, ಹೊಸ ವರ್ಷಾಚರಣೆಗೆ ರಾತ್ರಿ 1 ಗಂಟೆಯವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿರುವುದಾಗಿ ಹೇಳಿದ್ದಾರೆ.
ಒಟ್ಟಾರೆ ಮೈಸೂರಿನಲ್ಲಿ ಹೊಸವರ್ಷಾಚರಣೆಯು ಸಡಗರ ಸಂಭ್ರಮದಿಂದ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ನಡಯಲು ಪೊಲೀಸ್ ಇಲಾಖೆ ಸರ್ವ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪುಂಡರ ಹುಚ್ಚಾಟಗಳಿಗೆ ಬ್ರೇಕ್ ಹಾಕಲು ಚಾಮುಂಡಿ ಪಡೆ ಸರ್ವ ಸನ್ನದ್ಧವಾಗಿದೆ.












Click it and Unblock the Notifications