ಕಾಂತರಾಜೇ ಅರಸ್ ವಿರುದ್ಧ ಭೂ ದಾಖಲೆ ತಿದ್ದುಪಡಿ ಆರೋಪ
ಮೈಸೂರು, ಏ. 3 : ಮೈಸೂರಿನ ರಾಜ ವಂಶಸ್ಥ ಚದುರಂಗ ಕಾಂತರಾಜೇ ಅರಸ್ ವಿರುದ್ಧ ನಿಯಮ ಬಾಹಿರವಾಗಿ ಆಸ್ತಿಯನ್ನು ಮಾರಾಟ ಮಾಡಿದ ಆರೋಪ ಕೇಳಿಬಂದಿದೆ. ಮಾರಾಟ ಮಾಡಿರುವ ಆಸ್ತಿಯನ್ನು ವಾಪಸ್ ಪಡೆಯುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಆದೇಶ ನೀಡಿದ್ದಾರೆ.
ಹುಣಸೂರು ರಸ್ತೆಯಲ್ಲಿ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಎದುರಿನ ಆಸ್ತಿಯನ್ನು ದಾಖಲಾತಿ ತಿದ್ದಿ ಮಾರಾಟ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ಮಾರಾಟ ಮಾಡಿದ್ದ ಸರ್ಕಾರಿ ಜಾಗವನ್ನು ವಾಪಸ್ ಪಡೆಯುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಮೈಸೂರು ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ.

ಪ್ರಕರಣದ ವಿವರ : ಕಾಂತರಾಜೇ ಅರಸ್ ಅವರಿಗೆ ಸರ್ಕಾರ 4,559 ಚದರಡಿ ಜಾಗವನ್ನು ಮಾರಾಟ ಮಾಡಲು ಅನುಮತಿ ನೀಡಿತ್ತು. ಆದರೆ 6,303 ಚದರಡಿ ಜಾಗವನ್ನು ದಾಖಲೆ ತಿದ್ದಿ ಅಕ್ರಮವಾಗಿ ಕಬಳಿಸಿ ಮಾರಾಟ ಮಾಡಿದ್ದಾರೆ ಎಂಬುದು ಆರೋಪ. [ಕರ್ನಾಟಕ : ಅಕ್ರಮ-ಸಕ್ರಮ, ನಿಮಗಿದು ತಿಳಿದಿರಲಿ]
ಅಕ್ರಮಿತ ಜಾಗದಲ್ಲಿ ಬೃಹತ್ ಕಟ್ಟಡವನ್ನು ಕಟ್ಟಲಾಗುತ್ತಿದೆ. ರಸ್ತೆಯನ್ನು ಅಕ್ರಮಿಸಿಕೊಂಡು ಕಟ್ಟಡ ನಿರ್ಮಿಸಲಾಗುತ್ತಿದೆ. ಆದ್ದರಿಂದ, ಮೈಸೂರಿನ ಸೋಮಶೇಖರ್ ಹಾಗೂ ಪುರುಷೋತ್ತಮ್ ಎಂಬುವರು ಮಾಹಿತಿ ಹಕ್ಕು ಕಾಯ್ದೆ ಅನ್ವಯ ಪಾಲಿಕೆಯಲ್ಲಿ ದಾಖಲಾತಿಗಳನ್ನು ಪಡೆದಾಗ ಈ ಕಬಳಿಕೆ ಪ್ರಕರಣ ಬಯಲಾಗಿದೆ. [ಯದುವೀರ್ ಒಡೆಯರ್ ಯದುವಂಶದ 27ನೇ ಅರಸ]
ಸೋಮಶೇಖರ್ ಹಾಗೂ ಪುರುಷೋತ್ತಮ್ ಅವರು ಹೈಕೋರ್ಟ್ ನಲ್ಲಿ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಿತ್ತು.
ದೂರು ಮತ್ತು ದಾಖಲಾತಿಗಳನ್ನು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಅಕ್ರಮವಾಗಿ ಮಾರಾಟವಾಗಿರುವ ಸರ್ಕಾರಿ ಆಸ್ತಿಯನ್ನು ವಶಕ್ಕೆ ಪಡೆಯುವಂತೆ ತಹಶೀಲ್ದಾರರಿಗೆ ಆದೇಶ ನೀಡಿದ್ದಾರೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅಂತ್ಯಕ್ರಿಯೆಯನ್ನು ಚದುರಂಗ ಕಾಂತರಾಜೇ ಅರಸ್ ಅವರು ನೆರವೇರಿಸಿದ್ದರು. ಅವರೇ ಯದುವಂಶದ ಉತ್ತರಾಧಿಕಾರಿ ಆಗಬಹುದು ಎಂಬ ಮಾತುಗಳು ಕೇಳಿಬಂದಿತ್ತು. ಆದರೆ, ರಾಣಿ ಪ್ರಮೋದಾ ದೇವಿ ಅವರು ಯದುವೀರ ಗೋಪಾಲರಾಜೇ ಅರಸ್ ಅವರನ್ನು ದತ್ತು ಪಡೆದಿದ್ದು, ಅವರು ಉತ್ತರಾಧಿಕಾರಿಯಾಗಲಿದ್ದಾರೆ.












Click it and Unblock the Notifications