ಹಲಸಿನ ಹಣ್ಣಿನ ಚಾಕೋಲೇಟ್: ಕೊಕೊ ನಂತರ ಕ್ಯಾಂಪ್ಕೋ ಹೊಸ ಸಾಹಸ
ಮೈಸೂರು, ಆಗಸ್ಟ್ 6 : ಕ್ಯಾಂಪ್ಕೋ ಚಾಕೋಲೇಟ್, ಬಿಸ್ಕತ್ ಎಂದರೇ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇಂತಹ ಪ್ರತಿಷ್ಠಿತ ಕ್ಯಾಂಪ್ಕೋ ಈಗ ಹಲಸಿನ ಹಣ್ಣಿನಿಂದಲೇ ಚಾಕೋಲೇಟ್ ತಯಾರಿಸುವ ಹೊಸ ಪ್ರಯತ್ನಕ್ಕೆ ಮುಂದಾಗಿದೆ.
ಹೌದು, ಹಲಸಿನ ಮೌಲ್ಯವರ್ಧನೆ ಹೆಚ್ಚಿಸಲು ಮುಂದಾದ ಕ್ಯಾಂಪ್ಕೋ, ತನ್ನ ಬ್ರಾಂಡ್ ಅಡಿಯಲ್ಲಿ ಚಾಕೊಲೆಟ್, ಬಿಸ್ಕೆಟ್ ತಯಾರಿಸಲು ಸಿದ್ಧತೆ ನಡೆಸಿದೆ. ಕೆಲವೇ ದಿನಗಳಲ್ಲಿ ಇದು ಮಾರಕಟ್ಟೆಗೂ ಬರಲಿದೆ.
ದೇಶದಲ್ಲಿ ಸಾವಿರಕ್ಕೂ ಹೆಚ್ಚು ಹಲಸಿನ ತಳಿಯಿದೆ. ರಾಜ್ಯದಲ್ಲಿ 150 ತಳಿಗಳಿವೆ. ಪಶ್ಚಿಮಘಟ್ಟದಲ್ಲಿ ಜನ್ಮತಳೆದ ಹಲಸು, ದೇಶ-ವಿದೇಶಗಳಲ್ಲೂ ಖ್ಯಾತಿಯಾಗಿದೆ. ಈಗಾಗಲೇ ಹಲಸಿನ 170 ತಳಿಗಳನ್ನು ಸಂರಕ್ಷಿಸಿ ಇಡುವ ಪ್ರಯತ್ನ ಸಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಪ್ರಕ್ರಿಯೆ ಆರಂಭಿಸಿದೆ. ಹಲಸು ಬೆಳೆಗಾರರಿಗೆ ಚೈತನ್ಯ ತುಂಬಲು, ಮೌಲ್ಯವರ್ಧಿತ ಬೆಳೆಯನ್ನಾಗಿ ಪರಿವರ್ತಿಸಲು ಹಾಗೂ ಉದ್ಯಮ ಕ್ಷೇತ್ರದಲ್ಲಿ ಹಲಸನ್ನು ಬಲಪಡಿಸಲು ಈ ಸಂಸ್ಥೆ ಮುಂದಾಗಿದೆ. ಹಾಗಾಗಿ ರೈತರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಚಾಕೋಲೇಟ್ ತಯಾರಿಸಲು ಸಿದ್ದತೆ ಸದ್ದಿಲ್ಲದೆ ನಡೆದಿದೆ ಎನ್ನುತ್ತಾರೆ ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎಂ.ಆರ್.ದಿನೇಶ್.

"ಕೊಕೊ ಹಣ್ಣಿನಿಂದ ತಯಾರಿಸಲಾದ ಚಾಕಲೇಟ್‌ಗಳನ್ನು ಮಾರುಕಟ್ಟೆಗೆ ಪೂರೈಕೆ ಮಾಡುವಲ್ಲಿ ಕ್ಯಾಂಪ್ಕೋ ಭಾರಿ ಪೈಪೋಟಿ ನೀಡಿಕೊಂಡು ಬಂದಿದೆ. ಕೆಲವೊಮ್ಮೆ ದ್ವಿತೀಯ, ಇನ್ನು ಕೆಲವೊಮ್ಮೆ ತೃತೀಯ ಸ್ಥಾನದಲ್ಲಿ ಸಂಸ್ಥೆ ಪೈಪೋಟಿ ನೀಡಿದೆ. ಸಹಕಾರಿ ಕ್ಷೇತ್ರದಲ್ಲಿ ಒಂದನೇ ಸ್ಥಾನ ಪಡೆದುಕೊಂಡಿದೆ. ಜಗತ್ತಿನಲ್ಲೇ ಗಾನಾ ಕೊಕೊ ಫ್ಲೇವರ್ ಪ್ರಥಮ ಸ್ಥಾನದಲ್ಲಿದೆ. ಈಗ ಗಾನಾ ಫ್ಲೇವರ್‌ಗೆ ಸಮಾನ ಅಂತರದಲ್ಲಿ ಕ್ಯಾಂಪ್ಕೋ ಫ್ಲೇವರ್ ಕೂಡ ಪೈಪೋಟಿ ನೀಡುತ್ತಿದೆ,'' ಎಂದು ಡಾ. ಎಂ. ಆರ್. ದಿನೇಶ್ ಹೇಳುತ್ತಾರೆ.
ಕೊಕೊ ಫ್ಲೇವರ್ ಚಾಕಲೇಟ್ ಮಾದರಿಯಲ್ಲೇ ಕಡಿಮೆ ದರದಲ್ಲಿ ಹಲಸಿನ ಫ್ಲೇವರ್ ಇರುವ ಚಾಕೋಲೇಟ್ ತಯಾರಿಸಲು ಕ್ಯಾಂಪ್ಕೋ ಚಿಂತನೆ ನಡೆಸಿದೆ. ಇದು ಸಂಸ್ಥೆಗೆ ವಿಶ್ವಮಟ್ಟದಲ್ಲಿ ಜನಪ್ರಿಯತೆಗೆ ಕಾರಣವಾಗಬಹುದು ಎಂಬ ವಿಶ್ವಾಸ ಇದೆ. ಮಲೆನಾಡು ಭಾಗದಲ್ಲಿ ಮರದಲ್ಲಿಯೇ ಕೊಳೆತು ಹೋಗುವ ಹಲಸಿನ ಹಣ್ಣಿನ ಘಮ ಕ್ಯಾಂಪ್ಕೋ ಮೂಲಕ ಜಗತ್ತಿನ ಮಾರುಕಟ್ಟೆ ಪ್ರವೇಶಿಸುವ ಪ್ರಯತ್ನ ಸಹಜವಾಗಿಯೇ ಕುತೂಹಲಕ್ಕೂ ಎಡೆ ಮಾಡಿಕೊಟ್ಟಿದೆ.











Click it and Unblock the Notifications