ಕೆ.ಆರ್.ನಗರದಿಂದ ಮೈಸೂರಿಗೆ ಪ್ರತಿ ಅರ್ಧ ಗಂಟೆಗೊಂದು ಬಸ್
ಮೈಸೂರು, ಫೆಬ್ರವರಿ 06: ಪ್ರಯಾಣಿಕರ ಅನುಕೂಲಕ್ಕಾಗಿ ಕೆ.ಆರ್.ನಗರ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತಿ 30 ನಿಮಿಷಗಳಿಗೊಮ್ಮೆ ಬಸ್ ಸಂಚಾರ ಮಾಡಲಿದ್ದು, ಎಲ್ಲರೂ ಅದರ ಪ್ರಯೋಜನ ಪಡೆಯಬೇಕು ಎಂದು ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಹೊಸದಾಗಿ ಸೇವೆ ಆರಂಭಿಸಿದ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿತ್ಯ ಬೆಳಗ್ಗೆ 6 ರಿಂದ 11 ಗಂಟೆಯವರೆಗೆ ಮೈಸೂರಿಗೆ ತೆರಳುವ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುವುದನ್ನು ಮನಗಂಡು ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
6 ಸಾರಿಗೆ ಬಸ್‌ಗಳು ಬೆಳಿಗ್ಗೆ 6 ಗಂಟೆಯಿಂದ ಆರಂಭಿಸಿ, ರಾತ್ರಿ 9.15 ರವರೆಗೆ ಪ್ರತೀ 30 ನಿಮಿಷಕ್ಕೆ ಒಂದರಂತೆ ಸಂಚಾರ ಮಾಡಲಿದ್ದು ಇದರಿಂದ ಪ್ರಯಾಣದ ಒತ್ತಡ ಕಡಿಮೆಯಾಗಲಿದೆ ಎಂದ ಶಾಸಕರು ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಮತ್ತಷ್ಟು ಬಸ್ ಸಂಚಾರ ಆರಂಭಿಸುವುದಾಗಿ ತಿಳಿಸಿದರು.

ನಾನು ಶಾಸಕನಾಗಿ ಚುನಾಯಿತನಾದ ನಂತರ ರಸ್ತೆ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಇತರ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ. ಮುಂದೆಯೂ ಜನರಿಗೆ ಅಗತ್ಯ ಅನುಕೂಲ ಕಲ್ಪಿಸಲು ಕೆಲಸ ಮಾಡುತ್ತೇನೆ. ಸಾಲಿಗ್ರಾಮ ತಾಲೂಕು ಕೇಂದ್ರವಾದ ನಂತರ ಪ್ರತೀ ಸೋಮವಾರ ಅಲ್ಲಿಯೂ ಸಾರ್ವಜನಿಕರ ಸಮಸ್ಯೆ ಆಲಿಸುತ್ತಿದ್ದೇನೆ ಎಂದರು.












Click it and Unblock the Notifications