ಮೈಸೂರು ಜನರ ನಿದ್ದೆಗೆಡಿಸಿದ ಅಕಾಲಿಕ ಮಳೆ
ಮೈಸೂರು, ನವೆಂಬರ್ 18: ಅಕಾಲಿಕ ಮಳೆ ಅರಮನೆ ನಗರಿ ಮೈಸೂರನ್ನು ಇನ್ನಿಲ್ಲದೆ ಕಾಡಲು ಆರಂಭಿಸಿದೆ. ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಒಂದೆಡೆ ಚಾಮುಂಡಿ ಬೆಟ್ಟದಲ್ಲಿ ಭೂಕುಸಿತ ಮುಂದುವರೆದಿದ್ದು, ಮತ್ತೊಂದು ಕಡೆ ನಗರದಲ್ಲಿ ಅಲ್ಲಲ್ಲಿ ಹಳೆಯ ಕಾಲದ ಕಟ್ಟಡ, ಮನೆಗಳು ಕುಸಿತವಾಗುತ್ತಿರುವುದು ಜನರನ್ನು ಆತಂಕಕ್ಕೆ ತಳ್ಳಿದೆ.
ಅರಮನೆ ನಗರಿಯನ್ನು ಪಾರಂಪರಿಕ ನಗರಿ, ಸಾಂಸ್ಕೃತಿಕ ನಗರಿ ಎಂದು ಕೂಡ ಕರೆಯಲಾಗುತ್ತಿದೆ. ನಗರದಲ್ಲಿ ಅಡ್ಡಾಡಿದರೆ ಇಂದಿಗೂ ಹಳೆಯ ಕಾಲದ ಮಣ್ಣಿನ ಗೋಡೆ ಮತ್ತು ಹೆಂಚಿನ ಮನೆಗಳಲ್ಲದೆ, ಮದ್ರಾಸ್ ತಾರಸಿಯ ಹಳೆಯ ಮನೆಗಳಿವೆ. ಇದುವರೆಗೆ ಮಳೆ ಧಾರಾಕಾರವಾಗಿ ಸುರಿಯದ ಕಾರಣದಿಂದ ಜನ ಈ ಮನೆಗಳಲ್ಲಿ ಯಾವುದೇ ಭಯವಿಲ್ಲದೆ ಜೀವನ ಸಾಗಿಸುತ್ತಿದ್ದರು. ಆದರೆ ಪ್ರಸಕ್ತ ವರ್ಷ ಮಳೆಯ ಅಬ್ಬರ ಜಾಸ್ತಿಯಾಗಿ ಮೇಲಿಂದ ಮೇಲೆ ಕಟ್ಟಡಗಳು ಕುಸಿಯುತ್ತಿರುವುದಿಂದ ಭಯದ ವಾತಾವರಣ ನಿರ್ಮಾಣವಾಗಿದೆ.

ಹಳೆಯ ಮನೆ ವಾಸಿಗಳ ನಿದ್ದೆಗೆಡಿಸಿದ ವರುಣ
ಹಳೆಯ ಮನೆಗಳಲ್ಲಿ ವಾಸಿಸುವವರ ಪೈಕಿ ಬಹಳಷ್ಟು ಮಂದಿ ಬಡವರಾಗಿದ್ದು, ಹಳೆಯ ಕಾಲದ ಹೆಂಚಿನ ಮನೆಯನ್ನು ತೆರವುಗೊಳಿಸಿ ಹೊಸ ಮನೆಯನ್ನು ಕಟ್ಟಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಹೀಗಾಗಿ ಅದರಲ್ಲೇ ವಾಸ ಮಾಡುತ್ತಿದ್ದಾರೆ. ಇನ್ನು ಮದ್ರಾಸ್ ತಾರಸಿಯ ಹಳೆಯ ಮನೆಗಳು ಈಗಿನ ಮಳೆಯನ್ನು ತಡೆಯುವ ಪರಿಸ್ಥಿತಿಯಲ್ಲಿಲ್ಲ. ಬಹಳಷ್ಟು ಮನೆಗಳು ಸುಮಾರು 50 ವರ್ಷಕ್ಕಿಂತಲೂ ಹಳೆಯದ್ದಾಗಿವೆ. ಹೀಗಾಗಿ ನಗರದಲ್ಲಿ ಹಳೆಯ ಕಟ್ಟಡಗಳು ಕುಸಿಯುತ್ತಿರುವ ಸುದ್ದಿಗಳು ಕೇಳಿ ಬರುತ್ತಿರುವ ಸಂದರ್ಭ ಹಳೆಯ ಮನೆಯಲ್ಲಿ ವಾಸವಿರುವವರಿಗೆ ಆತಂಕ ಶುರುವಾಗಿದೆ.
ದಶಕಗಳ ಹಿಂದೆಯೇ ಮೈಸೂರು ನಗರದ ಹೃದಯ ಭಾಗದಲ್ಲಿದ್ದ ಮಹಾರಾಜರ ಕಾಲದ ಬೃಹತ್ ಕಟ್ಟಡವಾಗಿದ್ದ ಲ್ಯಾನ್ಸ್‍ಡೌನ್ ಕಟ್ಟಡ ಕುಸಿದು ಬಿದ್ದು ದಶಕವೇ ಕಳೆದಿದ್ದು, ಅದರತ್ತ ಸುಳಿಯದಂತೆ ನಿರ್ಬಂಧ ವಹಿಸಲಾಗಿದೆ. ಇಂತಹ ರಾಜ ಮಹಾರಾಜರ ಕಾಲದ ಹಲವು ಕಟ್ಟಡ ಮನೆಗಳು ಮೈಸೂರು ನಗರದಲ್ಲಿವೆ. ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳಲು ಸರ್ಕಾರ ಹೇಳುತ್ತಿದೆಯಾದರೂ ಪಾರಂಪರಿಕ ಕಟ್ಟಡಗಳು ಈಗಲೂ ಸುಸ್ಥಿತಿಯಲ್ಲಿವೆಯಾ ಎಂಬುದನ್ನು ಪರಿಶೀಲಿಸಿ ಅವುಗಳನ್ನು ಈಗಿನ ಕಾಲಕ್ಕೆ ತಕ್ಕಂತೆ ದುರಸ್ತಿಗೊಳಿಸದ ಕಾರಣದಿಂದ ಸಮಸ್ಯೆ ಎದುರಿಸುವಂತಾಗಿದೆ.

ಕುಸಿದ ಮನೆ- ಕಟ್ಟಡ: ತಪ್ಪಿದ ಪ್ರಾಣಾಪಾಯ
ಈಗ ಸುರಿಯಯುತ್ತಿರುವ ಮಳೆ ಆತಂಕಕಾರಿಯಾಗಿದ್ದು, ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಕೆಲವೆಡೆ ಮರ ಮುರಿದುಬಿದ್ದಿದ್ದರೆ, ಕಟ್ಟಡ ಮತ್ತು ಮನೆ ಕುಸಿದಿದೆ. ಆದರೆ ರಾತ್ರಿ ವೇಳೆಯಾದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಗರದ ಹೃದಯ ಭಾಗದ ಅಶೋಕ ರಸ್ತೆಯಲ್ಲಿ ಹಳೆಯ ಕಟ್ಟಡ ಕುಸಿದು ಬಿದ್ದಿದೆ. ಇಲ್ಲಿ ವಾಣಿಜ್ಯ ಮಳಿಗೆಯಿದ್ದು, ಟೀ ಅಂಗಡಿ ಪಾನ್ ಅಂಗಡಿಗೆ ಹಾನಿಯಾಗಿದೆ.
ಇನ್ನು ಅಗ್ರಹಾರದಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು, ಮನೆಯೊಳಗಿದ್ದ ವೃದ್ಧನನ್ನು ರಕ್ಷಿಸಲಾಗಿದೆ. ಈ ಹಿಂದೆ ಲಕ್ಷ್ಮಿಪುರಂ ಠಾಣೆಯ ಎದುರು ಆಲದ ಮರವೊಂದು ಬುಡ ಕಿತ್ತು ಮನೆಗೆ ತಾಗಿ ನಿಂತಿತ್ತು. ಪರಿಣಾಮ ಮನೆಯ ಮುಂಭಾಗ ಜಖಂಗೊಂಡಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿಗಳು, ಮಹಾನಗರ ಪಾಲಿಕೆಯ ಅಭಯ ತಂಡ ಮರ ತೆರವುಗೊಳಿಸಿದೆ. ಆದರೆ ಈಗ ಹಳೆಯ ಕಟ್ಟಡಗಳು ಕುಸಿಯುವ ಭಯ ಒಂದೆಡೆಯಾದರೆ ಹಳೆಯ ಮರಗಳು ಯಾವಾಗ ನೆಲಕ್ಕುರುಳುತ್ತವೆಯೋ ಎಂಬ ಆತಂಕವೂ ಕಾಡತೊಡಗಿದೆ. ಈಗಾಗಲೇ ಬಹಳಷ್ಟು ಮರಗಳ ಕೊಂಬೆ ಮತ್ತು ಮರಗಳು ನೆಲಕ್ಕುರುಳಿವೆ. ಹಲವೆಡೆ ಶಿಥಿಲಗೊಂಡ ಕೊಂಬೆ ಹಾಗೂ ಒಣಗಿದ ಮರಗಳನ್ನು ತೆರವು ಗೊಳಿಸಲಾಗಿದೆ. ಆದರೂ ಮರಗಳು ಯಾವಾಗ ಬಿದ್ದು ಬೀಳುತ್ತವೆ ಎಂಬುದನ್ನು ಹೇಳಲಾಗದ ಸ್ಥಿತಿ ಉದ್ಭವವಾಗಿದೆ.

ಮಳೆಯಿಂದ ರೈತರಿಗೆ ಸಂಕಷ್ಟ
ಭಾರಿ ಮಳೆ ಸುರಿದ ಪರಿಣಾಮ ಮಳೆಯ ನೀರು ಚರಂಡಿಯನ್ನು ತುಂಬಿ ಹರಿದಿದ್ದು, ತಗ್ಗು ಪ್ರದೇಶದ ಜನ ಜೀವ ಕೈಯ್ಯಲ್ಲಿಡಿದು ಬದುಕುವಂತಾಗಿದೆ. ನೀರು ಉಕ್ಕಿದ ರಭಸಕ್ಕೆ ಕೆಲವೆಡೆ ಮ್ಯಾನ್‌ಹೋಲ್‌ಗಳು ತೆರೆದುಕೊಂಡಿವೆ. ಕೊಳಚೆ ನೀರು ಹರಿಯುತ್ತಿದ್ದ ಕಾಲುವೆಗಳಲ್ಲಿ ನದಿಯಂತೆ ನೀರು ಹರಿಯುತ್ತಿದೆ. ಎಲ್ಲೆಡೆ ಕೆಸರು ಆವರಿಸಿಕೊಂಡಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಸಂಪೂರ್ಣ ಮೋಡ ಮುಸುಕಿದ್ದು, ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಥೇಟ್ ಮುಂಗಾರು ಆರಂಭದ ವಾತಾವರಣ ಸೃಷ್ಟಿಯಾಗಿದೆ.

ರೈತರು ಮಳೆ ಬಾರದಿದ್ದರೆ ಸಾಕೆಂದು ದೇವರಲ್ಲಿ ಪ್ರಾರ್ಥನೆ
ಪಟ್ಟಣ ಪ್ರದೇಶದ ಸ್ಥಿತಿ ಹೀಗಾದರೆ ಗ್ರಾಮೀಣ ಪ್ರದೇಶದಲ್ಲಿ ರೈತರು ಮಳೆ ಬಾರದಿದ್ದರೆ ಸಾಕೆಂದು ದೇವರಲ್ಲಿ ಪ್ರಾರ್ಥಿಸುವಂತಾಗಿದೆ. ಈಗಾಗಲೇ ಭತ್ತ ಕೊಯ್ಲುಗೆ ಬಂದಿದ್ದು, ಇದೇ ರೀತಿ ಮಳೆ ಸುರಿದರೆ ಅದು ನೆಲಕಚ್ಚಲಿದೆ. ಜತೆಗೆ ಇತರೆ ಬೆಳೆಗಳನ್ನು ಬೆಳೆಯುವುದು ಕೂಡ ರೈತರಿಗೆ ಕಷ್ಟವಾಗಲಿದೆ. ಒಟ್ಟಾರೆ ಅಕಾಲಿಕ ಮಳೆ ತಂದೊಡ್ಡಿರುವ ಸಮಸ್ಯೆಗಳು ಒಂದೆರಡಲ್ಲ. ಮೇಲಿಂದ ಮೇಲೆ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿದ್ದರೆ ಜನ ಬದುಕುವುದಾದರೂ ಹೇಗೆಂಬ ಪ್ರಶ್ನೆಗಳು ಕಾಡಲಾರಂಭಿಸಿವೆ.