Bajrang Dal Ban: ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅಂದ್ಮೇಲೆ ಬಜರಂಗದಳ ಹೆಂಗ್ ಬ್ಯಾನ್ ಮಾಡ್ತಾರೆ ಎಂದ ಬಿಎಸ್‌ವೈ
ತಾವು ಅಧಿಕಾರಕ್ಕೆ ಬಂದರೆ ಬಜರಂಗದದಳ, ಪಿಎಫ್‌ಐ ಸೇರಿದಂತೆ ಹಲವು ಸಂಘಟನೆಗಳನ್ನು ಬ್ಯಾನ್ ಮಾಡ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಬಜರಂಗದಳದ ಮೇಲೆ ನಿಷೇಧ ಹೇರುವ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ತಿರುಕನ ಕನಸು ಕಾಣುತ್ತಿದೆ ಎಂದು ಹೇಳಿದರು.
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುವ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ಬ್ಯಾನ್ ಮಾಡುವುದಾಗಿ ಹೇಳಿದೆ ಇದಕ್ಕೆ ಏನ್ ಹೇಳ್ತಿರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಬಿಎಸ್‌ವೈ, "ಬಜರಂಗದಳವನ್ನು ನಿಷೇಧಿಸುವುದಕ್ಕೆ ಯಾರಿಗೂ ಆಗಲ್ಲ, ನಾವು ಅದಕ್ಕೆ ಅವಕಾಶ ಕೊಡಲ್ಲ" ಎಂದರು.

ಮಾತು ಮುಂದುವರೆಸಿದ ಅವರು, "ವಿನಾಶಕಾಲೇ ವಿಪರೀತ ಬುದ್ದಿ ಎನ್ನುವಂತೆ ಕಾಂಗ್ರೆಸ್ ವರ್ತಿಸುತ್ತಿದೆ. ಅವರ ಮಾತು ಅವರಿಗೆ ಹಿನ್ನಡೆಯಾಗುತ್ತದೆ, ಅದಕ್ಕೆ ನಾವು ಅವಕಾಶ ಕೊಡಲ್ಲ, ಕಾಂಗ್ರೆಸ್‌ನವರು ಅಧಿಕಾರಕ್ಕೆ ಬರಲ್ಲ ಅಂದಮೇಲೆ ನಿಷೇಧ ಹೇರುವುದಕ್ಕೆ ಹೇಗೆ ಸಾಧ್ಯ, ಅಧಿಕಾರಕ್ಕೆ ಬರದವರು ಏನು ಬೇಕಾದರೂ ಭರವಸೆ ಕೊಡಬಹುದು, ಕಾಂಗ್ರೆಸ್‌ನವರು ತಿರುಕನ ಕನಸು ಕಾಣ್ತಿದ್ದಾರೆ" ಎಂದು ಹೇಳಿದರು.
ಸಿದ್ದರಾಮಯ್ಯ ಸೋಲುವುದು ಖಚಿತ
ಇನ್ನು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸೋಲು ಖಚಿತ ಎಂದು ಬಿಎಸ್‌ವೈ ಹೇಳಿದ್ದಾರೆ. ವಿ ಸೋಮಣ್ಣ ವರುಣಾದಲ್ಲಿ ಗೆದ್ದು ವಿಧಾನಸೌಧಕ್ಕೆ ಹೋಗ್ತಾರೆ ಸಿದ್ದರಾಮಯ್ಯ ಮನೆಗೆ ಹೋಗ್ತಾರೆ ಎಂದು ಅವರು ಭವಿಷ್ಯ ನುಡಿದರು. ವರುಣಾದಲ್ಲಿ ಮಾತ್ರವಲ್ಲದೆ ಚಾಮರಾಜನಗರದಲ್ಲಿ ಕೂಡ ವಿ ಸೋಮಣ್ಣ ಗೆಲ್ತಾರೆ ಎಂದು ಬಿಎಸ್‌ವೈ ಹೇಳಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ನಾವು 130 ರಿಂದ 135 ಸ್ಥಾನಗಳನ್ನು ಗೆಲ್ಲುತ್ತೇವೆ. ಸ್ಪಷ್ಟ ಬಹುಮತ ಪಡೆಯುವ ಮೂಲಕ ಸರ್ಕಾರ ರಸನೆ ಮಾಡ್ತೀವಿ. ಸಮ್ಮಿಶ್ರ ಸರ್ಕಾರದ ಕಷ್ಟವನ್ನು ನಾವೀಗಾಗಲೇ ಅನುಭವಿಸಿದ್ದೇವೆ, ರಾಜ್ಯದ ಜನತೆ ಕೂಡ ಅದನ್ನು ನೋಡಿದ್ದಾರೆ. ಮತ್ತೆ ಅಂತಹ ಸನ್ನಿವೇಶ ರಾಜ್ಯದಲ್ಲಿ ಬರುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು.
ಸೋಮವಾರ ವರುಣಾ ಕ್ಷೇತ್ರದಲ್ಲಿ ಅಮಿತ್ ಶಾ ಕೂಡ ಭರ್ಜರಿ ಪ್ರಚಾರ ಮಾಡಿದರು. ಬಿಎಸ್‌ವೈ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ಭಾರಿ ಕಸರತ್ತು ನಡೆಸುತ್ತಿದೆ. ಕಾಂಗ್ರೆಸ್ ಕೂಡ ಇಲ್ಲಿ ಬಿಜೆಪಿಗೆ ತಿರುಗೇಟು ಕೊಡಲು ಸಜ್ಜಾಗಿದೆ. ಮೇ 4ರಂದು ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದಾರೆ.












Click it and Unblock the Notifications