ನೋವಿನ ನಡುವೆಯೂ ಯುವಕನ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು
ಮೈಸೂರು, ಡಿಸೆಂಬರ್ 17: ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕನ ಮೆದುಳು ನಿಷ್ಕ್ರಿಯಗೊಂಡ ಕಾರಣ ಆತನ ದೇಹದ ವಿವಿಧ ಅಂಗಾಂಗಗಳನ್ನು ಅವರ ಕುಟುಂಬಸ್ಥರು ದಾನ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಡಿ.14ರಂದು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮೈಸೂರು ನಿವೇದಿತಾ ನಗರದ 27 ವರ್ಷದ ಚಂದ್ರಶೇಖರ್ ಎಂಬ ಯುವಕನನ್ನು ಅಪೋಲೋ ಬಿಜಿಎಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
24 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಅಂಗಾಂಗ ದಾನ ಪ್ರಕ್ರಿಯೆಯನ್ವಯ ಅವರ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದರು.

ಇಂದು ಬೆಳಿಗ್ಗೆ ಅವರ ಹೃದಯವನ್ನು ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ, ಲಿವರ್ ಅನ್ನು ಅಪೋಲೋ ಬಿಜಿಎಸ್ ಆಸ್ಪತ್ರೆಗೆ, ಒಂದು ಕಿಡ್ನಿಯನ್ನು ಬೆಂಗಳೂರಿನ ಎನ್ ಯು ಆಸ್ಪತ್ರೆಗೆ ಮತ್ತೊಂದು ಕಿಡ್ನಿಯನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ನೀಡಲಾಗಿದೆ. ಬೆಂಗಳೂರಿಗೆ ಅಂಗಾಂಗಗಳನ್ನು ಕೊಂಡೊಯ್ಯುವಾಗ ಗ್ರೀನ್ ಕಾರಿಡಾರ್ ನಲ್ಲಿ ಕೊಂಡೊಯ್ಯಲಾಗಿದೆ.












Click it and Unblock the Notifications