Krishnaraja: ಮೋದಿಯಿಂದ ಬೆನ್ನು ತಟ್ಟಿಸಿಕೊಂಡರೂ ರಾಮದಾಸ್‌ಗೆ ಸಿಗದ ಬಿಜೆಪಿ ಟಿಕೆಟ್
ಮೈಸೂರು, ಏಪ್ರಿಲ್ 17: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, ಈ ಬಾರಿ ಹತ್ತು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಬಿಜೆಪಿ ಹೈಮಾಂಡ್ ಅಂತಿಮ ಮಾಡಿದೆ. ಮೂರನೇ ಪಟ್ಟಿ ಬಿಡುಗಡೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಿದ್ದು, ಕೆ.ಆರ್ ಕ್ಷೇತ್ರದ ಶಾಸಕ ರಾಮದಾಸ್ ಈ ಬಾರಿ ಬಿಜೆಪಿ ಟಿಕೆಟ್ ವಂಚಿತರಾಗಿದ್ದಾರೆ.
ರಾಮದಾಸ್ ಅವರ ಕಾರ್ಯವೈಖರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದರೂ ಕೂಡ ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಹೈಮಾಂಡ್ ಅವಕಾಶ ನೀಡಿಲ್ಲ ಬದಲಿಗೆ, ಆರ್‌ಎಸ್‌ಎಸ್ ಮುಖಂಡ ಬಿ.ಎಲ್. ಸಂತೋಷ್ ಆಪ್ತ ಮೈಸೂರು ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ್ ಅವರಿಗೆ ಬಿಜೆಪಿ ಮಣೆ ಹಾಕಿದೆ.

ಪ್ರಬಲ ವಿಪ್ರ ಸಮುದಾಯ ರಾಮದಾಸ್ ವಿರುದ್ಧ ತಿರುಗಿ ಬಿದ್ದಿತ್ತು ಮಾಜಿ ಸಿಎಂ ಯಡಿಯೂರಪ್ಪ ಅವರಿಗೂ ಸಮುದಾಯದ ಮುಖಂಡರು ದೂರು ನೀಡಿದ್ದರು 'ರಾಮದಾಸ್ ಅವರಿಗೆ ಸಮುದಾಯದ ಬಗ್ಗೆ ಕಾಳಜಿ ಇಲ್ಲ. ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಹಾಗಾಗಿ ಈ ಬಾರಿ ಟಿಕೆಟ್ ನೀಡಬೇಡಿ' ಎಂಬ ಮನವಿಯನ್ನು ವಿಪ್ರ ಸಮುದಾಯ ಮುಖಂಡರು ದೆಹಲಿಯ ನಾಯಕರಲ್ಲಿ ಸಲ್ಲಿಸಿದ್ದರು. ಆದರೂ ಟಿಕೆಟ್ ನಿರೀಕ್ಷೆಯಲ್ಲಿದ್ದ ರಾಮದಾಸ್ ಕ್ಷೇತ್ರದ ಮನೆ ಮನೆಗೆ ತೆರಳಿ ಭರ್ಜರಿ ಪ್ರಚಾರ ನಡೆಸಿದ್ದರು.
ಕೆಆರ್ ಕ್ಷೇತ್ರ ಕಳೆದ 30 ವರ್ಷದಿಂದ ಬಿಜೆಪಿ ಭದ್ರಕೋಟೆ. ಬಹುಪಾಲು ಇಲ್ಲಿನ ಜನ ಬಿಜೆಪಿಗೆ ಜೈ ಅಂದಿದ್ದಾರೆ . ಆದರೆ, ಹಾಲಿ ಶಾಸಕ ರಾಮದಾಸ್ ಅವರಿಗೆ ಟಿಕೆಟ್ ನೀಡದಂತೆ ಬ್ರಾಹ್ಮಣ ಹಾಗೂ ಲಿಂಗಾಯತ ಸಮುದಾಯದ ಮುಖಂಡರು ಹೈ ಕಮಾಂಡ್ ಗೆ ಮನವಿ ಮಾಡಿದ್ದರು. ಈ ಕಾರಣದಿಂದಲೇ ಸಾಕಷ್ಟು ಅಳೆದು ತೂಗಿ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಈಗಾಗಲೇ ಶಾಸಕ ರಾಮದಾಸ್ ವಿರುದ್ಧ ಸಾಕಷ್ಟು ದೂರುಗಳು ಕೇಳಿಬಂದಿದೆ ಎನ್ನಲಾಗಿದೆ.
ಇನ್ನು ಬಿಜೆಪಿ ಅಭ್ಯರ್ಥಿಗಳ ಎರಡೂ ಪಟ್ಟಿಯಲ್ಲಿ ರಾಮದಾಸ್ ಹೆಸರು ಅಂತಿಮವಾಗದ ಹಿನ್ನೆಲೆಯಲ್ಲಿ ಈ ಹಿಂದೆ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಬೆಂಬಲಿಗರು ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಕ್ಷೇತ್ರದಲ್ಲಿ ಒಂದು ಬಣ ರಾಮದಾಸ್‌ಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದರೆ, ಇನ್ನೊಂದು ಬಣ ರಾಮದಾಸ್‌ಗೆ ವಿರುದ್ಧವಾಗಿತ್ತು. ಸದ್ಯ ಕೆ.ಆರ್. ಕ್ಷೇತ್ರದ ಟಿಕೆಟ್ ಯಾರಿಗೆ ಎಂಬ ಗೊಂದಲಕ್ಕೆ ತೆರೆ ಬಿದ್ದಿದ್ದು, ಶ್ರೀವತ್ಸ್‌ಗೆ ಬಿಜೆಪಿ ಸ್ಪರ್ಧಿಸಲು ಅವಕಾಶ ನೀಡಿದೆ.
ರಾಮದಾಸ್ ಮುಂದಿನ ನಡೆ ಏನು?
ಬಿಜೆಪಿ ಟಿಕೆಟ್ ತಪ್ಪಿರುವ ಹಿನ್ನೆಲೆಯಲ್ಲಿ ಎಸ್.ಎ.ರಾಮದಾಸ್ ಮುಂದಿನ ನಡೆ ಕುತೂಹಲ ಮೂಡಿಸಿದೆ. ರಾಮದಾಸ್ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ರಾಮದಾಸ್ ಬೆಂಬಲಿಗರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಆದರೆ ಟಿಕೆಟ್ ವಂಚಿತರಾಗಿರುವ ರಾಮದಾಸ್ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ರಾಮದಾಸ್ ಪಕ್ಷೇತರರಾಗಿ ಸ್ಪರ್ಧಿಸುತ್ತಾರೋ ಅಥವಾ ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎನ್ನುವ ತಮ್ಮ ಮಾತಿನ ಮೇಲೆ ನಿಲ್ಲುತ್ತಾರೋ, ಅಥವಾ ಪಕ್ಷದ ತೀರ್ಮಾಕ್ಕೆ ಬದ್ಧರಾಗಿರುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications