ಮೈಸೂರಿನಲ್ಲಿ ಮನುಷ್ಯನ ಮುಖವನ್ನೇ ಹೋಲುವ ಆಡಿನ ಮರಿ
ಮೈಸೂರು, ಮೇ 26 : ನಮ್ಮ ನಡುವೆ ನಿತ್ಯ ಅಚ್ಚರಿಗಳು ನಡೆಯುತ್ತಿರುತ್ತವೆ. ಆ ಪೈಕಿ ಎಷ್ಟು ಸುಳ್ಳೋ, ಎಷ್ಟು ನಿಜವೋ ಎಂಬ ಬಗ್ಗೆ ಸಂಶೋಧನೆ ಸಹ ನಡೆಯುತ್ತವೆ. ಕಣ್ಣಿನಿಂದ ಕಲ್ಲು ಬರುವುದು, ವಿಚಿತ್ರವಾಗಿ ಪ್ರಾಣಿಗಳ ಹಾಗೆ ಮನುಷ್ಯರು ವರ್ತಿಸುವುದು ಇವೆಲ್ಲವನ್ನು ನೋಡಿರುತ್ತೇವೆ. ಅದೇ ರೀತಿಯಾದ ವಿಸ್ಮಯವೊಂದು ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಸರಗೂರು ತಾಲೂಕಿನ ಹುಲಿಕುರೆ ಗ್ರಾಮದಲ್ಲಿ ಮಾನವನ ಮುಖ ಹೋಲುವ ಆಡು ಮರಿ ಜನಿಸಿದ್ದು, ಅಚ್ಚರಿಗೆ ಕಾರಣವಾಗಿದೆ. ಇದೇ ಗ್ರಾಮದ ದಾಸಯ್ಯ ಎಂಬುವವರ ಮನೆಯಲ್ಲಿ ಜನಿಸಿದ ಆಡು ಮರಿ ಮುಖ ಮಾನವ ಮುಖವನ್ನೇ ಥೇಟ್ ಹೋಲುತ್ತಿದೆ. ಶನಿವಾರದಂದು ದಾಸಯ್ಯ ಅವರ ಆಡು ಮರಿ ಹಾಕಿತ್ತು. ನೋಡಿದರೆ ಅದರ ಮುಖ ಮನುಷ್ಯನ ಮುಖ ಹೋಲುವಂತಿತ್ತು. ಇದನ್ನು ನೋಡಿ ಅವರು ಅಚ್ಚರಿ ವ್ಯಕ್ತಪಡಿಸಿದ್ದರು.

ಆಡು ಮರಿ ನೋಡಲು ಜನ ಮುಗ್ಗಿ ಬಿದ್ದರು. ಇದಾದ ಬಳಿಕ ಆ ಆಡು ಮರಿ ಮೃತಪಟ್ಟಿದೆ. ಈ ವಿಶೇಷ ಆಡು ಮರಿ ಕೇವಲ ಒಂದು ದಿನ ಮಾತ್ರ ಬದುಕುಳಿದಿತ್ತು. ಇನ್ನು ಇದು ದೇವರೆಂದು ಕೆಲವರು ಪೂಜೆ ಸಹ ಮಾಡಿದರು. ಮೃತಪಟ್ಟಿದ್ದಕ್ಕೆ ಕಾರಣ ತಿಳಿದಿಲ್ಲ ಎನ್ನುತ್ತಾರೆ ದಾಸಯ್ಯ ಕುಟುಂಬಸ್ಥರು.
ಜೈವಿಕವಾಗಿ ನಡೆಯುವ ಪ್ರಕ್ರಿಯೆಯಲ್ಲಿ ಏನೋ ಹೆಚ್ಚು- ಕಡಿಮೆ ಆಗಿ ಈ ರೀತಿಯ ಬೆಳವಣಿಗೆಗಳನ್ನು ಕಾಣಬಹುದು ವಿನಾ ಇದರಲ್ಲಿ ವಿಸ್ಮಯ ಅಂತೇನೂ ಇಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.












Click it and Unblock the Notifications