• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಾಮುಂಡಿ ಬೆಟ್ಟದ ಮುಂಜಾನೆ ಮಂಜಿನಾಟ ಎಂದಾದರೂ ನೋಡಿದ್ದೀರಾ?

|

ಎಲ್ಲೆಂದರಲ್ಲಿ ಆವರಿಸಿ ಲಾಗ ಹೊಡೆಯುವ, ಒಬ್ಬರಿಗೆ ಮತ್ತೊಬ್ಬರು ಕಾಣದಂತೆ ತೆರೆ ಎಳೆದು ತನಗೇನೂ ಗೊತ್ತೇ ಇಲ್ಲದಂತೆ ಭರಭರನೆ ಸಾಗುವ ಮಂಜಿನ ಲಾಸ್ಯದ ಚಿತ್ರಣ ಇದೀಗ ಮುಂಜಾನೆಯ ಚುಮುಚುಮು ಚಳಿಯಲ್ಲಿ ಚಾಮುಂಡಿ ಬೆಟ್ಟದತ್ತ ಸಾಗುವ ವಾಯುವಿಹಾರಿಗಳ ಕಣ್ಣಿಗೆ ಕಟ್ಟುತ್ತಿದೆ.

ಪ್ರತಿದಿನವೂ ಮುಂಜಾನೆ ಚಾಮುಂಡಿ ಬೆಟ್ಟದ ಪಾದದಿಂದ ಮೆಟ್ಟಿಲನ್ನೇರಿ ಏದುರುಸಿರು ಬಿಡುತ್ತಾ ಬೆಟ್ಟದ ಮೇಲೆ ಸಾಗಿ ಚಾಮುಂಡೇಶ್ವರಿ ದೇವಾಲಯದ ಆವರಣ ತಲುಪುವ ಮಂದಿಗೆ ತಂಗಾಳಿ ಮುದ ನೀಡುತ್ತದೆ. ಈಗ ಚಳಿಗಾಲ. ಹೀಗಾಗಿ ಮುಂಜಾನೆಯ ನಸು ಬೆಳಕಿನಲ್ಲಿ ಚಾಮುಂಡಿ ಬೆಟ್ಟದಲ್ಲಿ ಅಡ್ಡಾಡುವವರಿಗೆ ಸ್ವರ್ಗಾನುಭವ ಆಗದೇ ಇರದು. ಬೀಸಿ ಬರುವ ತಂಗಾಳಿಗೆ ಮೈಕೊಟ್ಟು ನಡೆಯುವುದೇ ಸುಂದರ. ಇಡೀ ಬೆಟ್ಟ ಸಹಿತ ದೇಗುಲವನ್ನಾವರಿಸುವ ಮಂಜಂತೂ ಕಣ್ಣಿಗೆ ಹಬ್ಬ.

ಪ್ರವಾಸಿಗರ ಸೆಳೆಯುವ ಮೈಸೂರಿನ ಪ್ರವಾಸಿತಾಣಗಳು

ಮುಂಜಾನೆಯ ಕುಳಿರ್ ಗಾಳಿ, ದೇಗುಲದಿಂದ ಕೇಳಿ ಬರುವ ಗಂಟೆಯ ನಿನಾದ, ಮೈಕೊರೆವ ಚಳಿಯ ನಡುವೆ ಹೆಜ್ಜೆ ಹಾಕುತ್ತಾ ಬರುವ ಭಕ್ತರು... ಅದರಾಚೆಗೆ ಮುಂಜಾನೆಯಲ್ಲಿ ಮೈಸೂರು ನಗರದಿಂದ 1100 ಮೆಟ್ಟಿಲೇರಿ ಬರುವ ವಾಯುವಿಹಾರಿಗಳು... ಎಲ್ಲ ನೋಟಗಳು ಹೊಸದೊಂದು ಅನುಭವ ನೀಡುತ್ತದೆ.

 ಬೆಟ್ಟಕ್ಕೆ ಎಳೆದ ಮಂಜಿನ ತೆರೆ

ಬೆಟ್ಟಕ್ಕೆ ಎಳೆದ ಮಂಜಿನ ತೆರೆ

ಒಂದೊಂದು ಕಾಲಕ್ಕೂ ಚಾಮುಂಡಿ ಬೆಟ್ಟದಲ್ಲಿ ಸಿಗುವ ನೋಟ ಮತ್ತು ವಾತಾವರಣ ವಿಭಿನ್ನವಾಗಿರುತ್ತದೆ. ಒಂದು ದಿನ ಇಡೀ ಬೆಟ್ಟಕ್ಕೇ ಮಂಜಿನ ತೆರೆ ಎಳೆದಿದ್ದರೆ, ಮತ್ತೊಂದು ದಿನ ಎಲ್ಲವೂ ತಿಳಿಗೊಂಡು ಶುಭ್ರ ವಾತಾವರಣ ಸೃಷ್ಟಿಯಾಗಿರುತ್ತದೆ. ಅದರಲ್ಲೂ ಮುಂಜಾನೆಯಲ್ಲಿ ಜಿಟಿ ಜಿಟಿ ಮಳೆಯಲ್ಲಿ ಹೆಜ್ಜೆ ಹಾಕುವಾಗ ಸಿಗುವ ಆನಂದವನ್ನು ವರ್ಣಿಸಲೇ ಆಗದು.

ಮೊನ್ನೆಯವರೆಗೂ ಮಳೆ ಸುರಿಯುತ್ತಿದ್ದ ಕಾರಣದಿಂದಾಗಿ ಇಡೀ ಬೆಟ್ಟ ಕಡು ಹಸಿರಿನ ಹಚ್ಚಡವನ್ನೊದ್ದು ನಳನಳಿಸುತ್ತಿದ್ದರೆ, ಮಂಜಿನ ಪರದೆಯಲ್ಲಿ ಅಡಗಿದ ಮರಗಳು ಆಗೊಮ್ಮೆ ಈಗೊಮ್ಮೆ ಪರದೆ ಸರಿಸಿ ಇಣುಕಿ ತುಂಟ ನೋಟ ಬೀರುತ್ತವೆ.

 ನಗರಕ್ಕೂ ಬೆಟ್ಟಕ್ಕೂ ನಿರ್ಮಾಣವಾಗುವ ಮಂಜಿನ ಬೇಲಿ

ನಗರಕ್ಕೂ ಬೆಟ್ಟಕ್ಕೂ ನಿರ್ಮಾಣವಾಗುವ ಮಂಜಿನ ಬೇಲಿ

ಗಿಡ ಮರಗಳ ಮೇಲೆಲ್ಲಾ ಹರಡಿ ನಿಂತ ಮಂಜು ಹನಿಗಳು ಪಟಪಟನೆ ತೊಟ್ಟಿಕ್ಕುತ್ತಿದ್ದರೆ ಮಜವೋ ಮಜಾ. ಒಮ್ಮೊಮ್ಮೆ ದಟ್ಟಮಂಜು ಇಡೀ ಮೈಸೂರು ನಗರ ಮತ್ತು ಬೆಟ್ಟದ ಮಧ್ಯೆ ಮಂಜಿನ ಬೇಲಿ ನಿರ್ಮಿಸಿ ಅದರಾಚೆಗೆ ಮಂಜಿನ ಸಾಗರ ನಿರ್ಮಿಸಿ ನಮ್ಮನ್ನು ತಬ್ಬಿಬ್ಬು ಮಾಡಿ ಬಿಡುತ್ತದೆ. ಒಮ್ಮೊಮ್ಮೆ ರವಿಯ ನೋಟಕ್ಕೆ ಹೆದರಿ ಕರಗಿ ನೀರಾಗಿ ಬಿಡುತ್ತದೆ. ಆಗೆಲ್ಲ ಬೆಟ್ಟದ ಮೇಲಿಂದ ನಿಂತು ನೋಡಿದರೆ ಇಡೀ ಮೈಸೂರು ನಗರ ಆಗಷ್ಟೆ ಮಿಂದೆದ್ದಂತೆ ಭಾಸವಾಗುತ್ತದೆ.

ಮುಂಜಾನೆಯಲ್ಲಿ ಚಾಮುಂಡಿಬೆಟ್ಟದ ಪಾದದಿಂದ ಒಂದೊಂದೇ ಮೆಟ್ಟಿಲೇರುತ್ತಾ ಸಾಗುತ್ತಾ ಸುಮಾರು ಏಳುನೂರು ಮೆಟ್ಟಿಲು ದೂರದ ನಂದಿಯನ್ನು ತಲುಪುತ್ತಿದ್ದಂತೆಯೇ ಅದೊಂದು ರೀತಿಯ ಸುಖಾನುಭವ. ಅಲ್ಲಿ ತನಕದ ಆಯಾಸವನ್ನೆಲ್ಲ ತಂಗಾಳಿ ಹೊಡೆದೋಡಿಸಿಬಿಡುತ್ತದೆ.

ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟ ಪ್ರವೇಶ ಶುಲ್ಕದಿಂದ ಬಂತು 1.50 ಕೋಟಿ

 ಮನಸ್ಸಿಗೆ ಮುದ ನೀಡುವ ನೋಟ

ಮನಸ್ಸಿಗೆ ಮುದ ನೀಡುವ ನೋಟ

ಮಂಜು ಆವರಿಸಿದ ದಿನಗಳಲ್ಲಿ ನಗರದ ಬೀದಿ ದೀಪಗಳೆಲ್ಲವೂ ಮಬ್ಬಾಗಿ ಕಂಡರೆ, ಉಳಿದ ದಿನಗಳಲ್ಲಿ ಪಿಳಿಪಿಳಿ ಹೊಳೆಯುತ್ತವೆ. ಮೈಸೂರು ನಂಜನಗೂಡು ರಸ್ತೆ ಸೇರಿದಂತೆ ನಗರದ ಹಲವೆಡೆಯ ರಸ್ತೆಗಳಲ್ಲಿ ಮಂದ ದೀಪದೊಂದಿಗೆ ಮಂಜನ್ನು ಸೀಳಿ ಬರುವ ವಾಹನಗಳ ನೋಟ ಸೊಗಸಾಗಿರುತ್ತದೆ. ಹಾಗೆಯೇ ಸೂರ್ಯೋದಯದ ಹೊತ್ತಿಗೆ ತನ್ನ ಮೇಲೆ ಬೀಳುವ ಸೂರ್ಯರಶ್ಮಿಯಲ್ಲಿ ಬಗೆಬಗೆಯ ಚೆಲುವು ಪ್ರದರ್ಶಿಸುತ್ತಾ ಪ್ರಖರತೆ ಹೆಚ್ಚಾಗುತ್ತಿದ್ದಂತೆಯೇ ಪರದೆ ಕಳಚಿ ಮಾಯವಾಗಿ ಬಿಡುವ ಮಂಜಿನ ಆಟ ಮನಸ್ಸಿಗೆ ಮುದ ನೀಡುತ್ತದೆ.

 ನಿದ್ದೆ ಬದಿಗೊತ್ತಿ ಬಂದ್ರೆ ಮಂಜಿನಾಟ

ನಿದ್ದೆ ಬದಿಗೊತ್ತಿ ಬಂದ್ರೆ ಮಂಜಿನಾಟ

ಇಷ್ಟಕ್ಕೂ ಚಾಮುಂಡಿಬೆಟ್ಟದಲ್ಲಿ ಮಂಜಿನಾಟವನ್ನು ನೋಡಬೇಕಾದರೆ ಮುಂಜಾನೆಯ ಮಬ್ಬು ಬೆಳಕಿನಲ್ಲಿ ತೆರಳಬೇಕು. ಅದು ಎಲ್ಲರಿಗೂ ಸಾಧ್ಯವಿಲ್ಲ. ಏಕೆಂದರೆ ಬೆಳಗ್ಗಿನ ಚಳಿ ಹಾಸಿಗೆಯಿಂದ ಮೇಲೇಳಲು ಬಿಡದೆ ಕಂಬಳಿ ಹೊದ್ದು ಮಲಗುವಂತೆ ಪ್ರೇರೇಪಿಸುತ್ತದೆ. ಹೀಗಾಗಿ ಹೆಚ್ಚಿನವರು ಚಾಮುಂಡಿ ಬೆಟ್ಟದ ಮುಂಜಾನೆಯ ಸುಂದರ ನೋಟ ಮತ್ತು ಆಹ್ಲಾದಕರ ವಾತಾವರಣದಿಂದ ವಂಚಿತರಾಗುತ್ತಾರೆ. ಆದರೆ ಸವಿನಿದ್ದೆಯನ್ನು ಬದಿಗೊತ್ತಿ 1100 ಮೆಟ್ಟಿಲೇರಿ ಬರುವ ವಾಯುವಿಹಾರಿಗಳಿಗೆ ಮಾತ್ರ ಪ್ರತಿದಿನವೂ ಇಲ್ಲಿ ಹೊಸ ಹೊಸ ಅನುಭವ ಸಿಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

English summary
It's winter now. Therefore, those who walk in Chamundi Hills in a fogfilled early morning, will get a great experience
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X