ರಸ್ತೆ ಅಪಘಾತ; ಮೈಸೂರು ಮೂಲದ ಯೋಧ ಹುತಾತ್ಮ
ಮೈಸೂರು, ಮಾರ್ಚ್ 01: ಅಸ್ಸಾಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೈಸೂರು ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಶಾಸಕ ಅಶ್ವಿನ್ ಕುಮಾರ್ ಮತ್ತು ತಹಶೀಲ್ದಾರ್ ನಾಗೇಶ್ ಮೃತ ಯೋಧನ ಮನೆಗೆ ಭೇಟಿ ನೀಡಿದ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಬಿಎಸ್‌ಎಫ್ ಬೆಟಾಲಿಯನ್‌ನಲ್ಲಿ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತಿದ್ದ ಮೋಹನ್ (34) ಅಪಘಾತದಲ್ಲಿ ಮೃತಪಟ್ಟವರು. ತಿ.ನರಸೀಪುರ ತಾಲೂಕಿನ ಮುಡುಕುತೊರೆ ಸಮೀಪದ ಬೆಟ್ಟಹಳ್ಳಿ ಗ್ರಾಮದ ನಿವಾಸಿಯಾದ ಮೋಹನ್ 10 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಅಸ್ಸಾಂನಲ್ಲಿ ಹೆದ್ದಾರಿ ಪಹರೆ ಕಾಯುತ್ತಾ ಮೋಹನ್ ಕರ್ತವ್ಯ ನಿರತರಾಗಿದ್ದರು. ರಸ್ತೆ ದಾಟುವಾಗ ಅತಿ ವೇಗದಿಂದ ಬಂದ ಬೈಕ್ ಅವರಿಗೆ ಡಿಕ್ಕಿ ಹೊಡೆದಿದೆ, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸೋಮವಾರ ಯೋಧ ಮೋಹನ್ ಮನೆಗೆ ಶಾಸಕ ಅಶ್ವಿನ್ ಕುಮಾರ್ ಮತ್ತು ತಹಶೀಲ್ದಾರ್ ನಾಗೇಶ್ ಭೇಟಿ ನೀಡಿದರು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಮೋಹನ್ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.
ಸರ್ಕಾರದಿಂದ ಬರುವ ಪರಿಹಾರವನ್ನು ಕೊಡಿಸುವುದಾಗಿ ಶಾಸಕ ಅಶ್ವಿನ್ ಕುಮಾರ್ ಭರವಸೆ ನೀಡಿದರು. ಮೃತದೇಹ ಸೋಮವಾರ ರಾತ್ರಿಯ ವೇಳೆಗೆ ಗ್ರಾಮಕ್ಕೆ ಆಗಮಿಸುವ ನಿರೀಕ್ಷೆ ಇದೆ. ಮಂಗಳವಾರ ಅಂತ್ಯ ಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ.
ಶಾಸಕ ಅಶ್ವಿನ್ ಕುಮಾರ್ ಮಾತನಾಡಿ, "ನಮ್ಮ ತಾಲೂಕಿನ ಯೋಧನೋರ್ವ ಅಪಘಾತದಲ್ಲಿ ಮರಣ ಹೊಂದಿರುವ ವಿಷಯ ಬಹಳ ಬೇಸರತಂದಿದೆ. ಯೋಧ ಮೋಹನ್ ಕುಟುಂಬಕ್ಕೆ ಸರ್ಕಾರದಿಂದ ಸಿಗುವಂತ ಸೌಲಭ್ಯಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದರು.

"ದೇಶ ಕಾಯುವ ಯೋಧನಿಗೆ ಸಿಗಬೇಕಾದ ಎಲ್ಲಾ ಸರ್ಕಾರಿ ಗೌರವಗಳು ಸಿಗುತ್ತದೆ. ಕುಟುಂಬವರಿಗೆ ಸಾಂತ್ವನ ಹೇಳುವ ಕೆಲಸ ಮಾಡಿದ್ದೇನೆ. ಮೋಹನ್ ಕುಟುಂಬಕ್ಕೆ ಸದಾ ನನ್ನ ಸಹಕಾರ ನೀಡುತ್ತೇನೆ" ಎಂದು ಶಾಸಕರು ಭರವಸೆ ನೀಡಿದರು.












Click it and Unblock the Notifications