ಕಬಿನಿ ಹಿನ್ನೀರಿನಲ್ಲಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ ಹೆಬ್ಬಾತುಗಳ ಸಂಖ್ಯೆ: ಕಾರಣವೇನು?
ಮೈಸೂರು, ಜನವರಿ 30: ನವೆಂಬರ್ ನಂತರದ ದಿನಗಳಲ್ಲಿ ದೂರ ದೇಶದಿಂದ ಕಬಿನಿ ಜಲಾಶಯಕ್ಕೆ ಬಂದು ಬೀಡು ಬಿಟ್ಟು ಸಂತನೋತ್ಪತ್ತಿ ಮಾಡಿಕೊಂಡು ಹಿಂತಿರುಗುವುದರೊಂದಿಗೆ ಅಲ್ಲಿದ್ದಷ್ಟು ದಿನಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಪಟ್ಟೆ ತಲೆ ಹೆಬ್ಬಾತು (ಬಾರ್ ಹೆಡೆಡ್ ಗೂಸ್)ಗಳ ಸಂತತಿ ಈ ಬಾರಿ ಕ್ಷೀಣಿಸಿರುವುದು ಎದ್ದು ಕಾಣಿಸುತ್ತಿದೆ.
ಕಳೆದೊಂದು ದಶಕದಿಂದ ಹೆಬ್ಬಾತುಗಳು ಕಬಿನಿ ಹಿನ್ನೀರಿಗೆ ನವೆಂಬರ್ ತಿಂಗಳಲ್ಲಿ ಆಗಮಿಸಿ ಆ ನಂತರ ಗೂಡು ಕಟ್ಟಿ ಸಂತನೋತ್ಪತ್ತಿ ಮಾಡಿ ಮಾರ್ಚ್ ತಿಂಗಳ ಅಂತ್ಯದ ವೇಳೆಗೆಲ್ಲ ಸ್ವದೇಶಕ್ಕೆ ಮರಳುವುದು ನಡೆಯುತ್ತಾ ಬಂದಿದೆ. ಇದು ಕಬಿನಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರಲು ಕಾರಣವಾಗಿದೆ ಎಂದರೂ ತಪ್ಪಾಗಲಾರದು.

ಪ್ರತಿವರ್ಷವೂ ಇಲ್ಲಿಗೆ ವಲಸೆ ಬರುವ ಹೆಬ್ಬಾತುಗಳು ಕಬಿನಿ ಹಿನ್ನೀರು ಹಾಗೂ ಎಡ ಮತ್ತು ಬಲದಂಡೆ ನಾಲೆಗಳ ಅಚ್ಚುಕಟ್ಟು ಪ್ರದೇಶದ ಹೊಲ ಗದ್ದೆ, ಅಕ್ಕಪಕ್ಕದ ಕೆರೆಕಟ್ಟೆಗಳಲ್ಲಿ ಹಿಂಡು ಹಿಂಡಾಗಿ ನೆಲೆಯೂರುತ್ತಿವೆ. ಅಲ್ಲಿನ ಮರಗಳಲ್ಲಿ ಗೂಡುಕಟ್ಟಿ ಸಂತನೋತ್ಪತ್ತಿ ಮಾಡುವುದರೊಂದಿಗೆ ಹಿನ್ನೀರಿನಲ್ಲಿ ಈಜಾಡುತ್ತಾ.. ಸುತ್ತ ಮುತ್ತ ಹಾರಾಡುತ್ತಾ ಗಮನಸೆಳೆಯುತ್ತಿದ್ದವು. ಆದರೀಗ ವಲಸೆ ಬರುವ ಹೆಬ್ಬಾತುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ ಎನ್ನುವುದು ಪಕ್ಷಿಪ್ರಿಯರ ಆತಂಕವಾಗಿದೆ.
ಪಕ್ಷಿಪ್ರೇಮಿಗಳ ಮನಸೆಳೆಯುವ ಪಕ್ಷಿಗಳು
ಸಾಮಾನ್ಯವಾಗಿ ಈ ಹೆಬ್ಬಾತುಗಳು ದೂರದ ಮಾಂಗೋಲಿಯಾ ದೇಶದಿಂದ ಟಿಬೆಟ್ ಹಿಮಾಲಯ ಪರ್ವತಗಳನ್ನು ದಾಟಿ ಅತಿ ಎತ್ತರದಲ್ಲಿ ಹಾರಿ ಇಲ್ಲಿಗೆ ವಲಸೆ ಬರುವುದರಿಂದ ಇವುಗಳನ್ನು ಪರ್ವತದ ಹಕ್ಕಿಗಳು ಎಂದು ಕೂಡ ಕರೆಯಲಾಗುತ್ತಿದೆ. ನವೆಂಬರ್ ನಂತರದ ದಿನಗಳಲ್ಲಿ ಅಲ್ಲಿನ ಚಳಿಯನ್ನು ಸಹಿಸಲಾಗದೆ ಇತ್ತ ಬರುವ ಹೆಬ್ಬಾತುಗಳು ಸುಮಾರು ಐದು ಕಾಲ ಇಲ್ಲಿ ನೆಲೆಯೂರಿರುತ್ತವೆ. ಈ ವೇಳೆಯಲ್ಲಿ ಅವುಗಳ ಚಲವಲನವನ್ನು ನೋಡುವುದೇ ಒಂಥರಾ ಮಜಾವಿರುತ್ತದೆ.
ಪಟ್ಟೆತಲೆ ಹೆಬ್ಬಾತುಗಳು ಮಧ್ಯೆ ಏಷ್ಯಾದ ಪರ್ವತ ಶ್ರೇಣಿಗಳ ಕೊಳಗಳಲ್ಲಿ ಇವು ಹೆಚ್ಚಿನ ಸಂಖ್ಯೆಯಲ್ಲಿ ವಾಸ್ತವ್ಯ ಹೂಡುತ್ತಿವೆ. ಚಳಿ ಹೆಚ್ಚಾಗುತ್ತಿದ್ದಂತೆಯೇ ಎತ್ತರದ ಹಿಮಾಲಯ ಪರ್ವತಗಳನ್ನು ದಾಟಿ ದಕ್ಷಿಣ ಭಾರತದತ್ತ ಆಗಮಿಸುತ್ತಿದ್ದು, ಇಲ್ಲಿನ ವಾತಾವರಣ ಸಂತನೋತ್ಪತ್ತಿಗೆ ಸೂಕ್ತವಾಗಿದ್ದು, ಅದರಂತೆ ನಡೆಯುತ್ತಾ ಇದೆ. ಇದು ಪಕ್ಷಿಗಳದ್ದು ಸ್ವಾಭಾವಿಕ ಕ್ರಿಯೆಯಾಗಿದ್ದು, ಅದು ಪಕ್ಷಿಪ್ರಿಯರಿಗೆ ಖುಷಿ ತಂದುಕೊಡುತ್ತಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಬಾರದ ಪಕ್ಷಿಗಳು
ಈ ಬಾರಿ ಹೆಬ್ಬಾತುಗಳು ಕಬಿನಿಗೆ ವಲಸೆ ಬಂದಿದ್ದರೂ ಹಿಂದಿನಷ್ಟು ಸಂಖ್ಯೆಯಲ್ಲಿ ಬಾರದಿರುವುದನ್ನು ಗಮನಿಸಿದರೆ ಅವುಗಳ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವುದು ಎದ್ದು ಕಾಣಿಸುತ್ತಿದೆ. ಅಷ್ಟೇ ಅಲ್ಲದೆ ಇಲ್ಲಿಗೆ ಆಗಮಿಸಿದ ಹೆಬ್ಬಾತುಗಳ ಪೈಕಿ ಕೆಲವು ಆಹಾರದ ಕೊರತೆಯಿಂದ ಬೇರೆಡೆಗೆ ತೆರಳಿವೆ ಎಂಬ ಮಾತನ್ನು ಸ್ಥಳೀಯರು ಹೇಳುತ್ತಿದ್ದಾರೆ. ಈ ಬಾರಿ ನೀರಿನ ಕೊರತೆಯಿಂದಾಗಿ ಕಬಿನಿ ವ್ಯಾಪ್ತಿಯಲ್ಲಿ ಭತ್ತದ ಬೆಳೆಯನ್ನು ಬೆಳೆಯಲು ಮುಂದಾಗಿಲ್ಲ.
ಸಾಮಾನ್ಯವಾಗಿ ಈ ಅವಧಿಯಲ್ಲಿ ಜಲಾಶಯದಿಂದ ಗದ್ದೆಗೆ ನೀರನ್ನು ಹರಿಸಲಾಗುತ್ತಿತ್ತು. ನೀರನ್ನು ಬಳಸಿಕೊಂಡು ರೈತರು ಭತ್ತ ಬೆಳೆಯುತ್ತಿದ್ದರು. ಗದ್ದೆಯಲ್ಲಿ ರೈತರು ಉಳುಮೆ ಮಾಡುವ ಆಹಾರಗಳು ದೊರೆಯುತ್ತಿದ್ದವು. ಆದರೆ ಈ ಬಾರಿ ಕೃಷಿ ಮಾಡದ ಕಾರಣದಿಂದ ಇವುಗಳಿಗೆ ಸಮರ್ಪಕ ಆಹಾರ ದೊರೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹೆಬ್ಬಾತುಗಳ ಸಂಖ್ಯೆ ಕಡಿಮೆಯಾಗಲು ಮಾಂಗೋಲಿಯಾದಲ್ಲಿ ಈ ವರ್ಷ ವಾತಾವರಣದಲ್ಲಿ ಸ್ವಲ್ಪ ಏರುಪೇರಾಗಿದ್ದು ಅಲ್ಲಿ ಚಳಿ ಪ್ರಮಾಣ ಕಡಿಮೆ ಇರುವುದರಿಂದ ಹೆಚ್ಚಿನ ಹೆಬ್ಬಾತುಗಳು ಬಂದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಪಕ್ಷಿಪ್ರೇಮಿ ಮನೋಜ್ ಗನ್ನಾ ಹೇಳುವುದೇನು?
ಹೆಬ್ಬಾತುಗಳು ಬೂದು ಬಣ್ಣದಿಂದ ಕೂಡಿದ್ದು ತಲೆಯು ಪಟ್ಟೆಗಳಿಂದ ಕೂಡಿದೆ, ಅನ್ಸೆರ್ ಇಂಡಿಕಸ್ ಜಾತಿಗೆ ಸೇರುವ ಇತರ ಬೂದು ಹೆಬ್ಬಾತುಗಳಿಗಿಂತ (ಬಾರ್ ಹೆಡೆಡ್ ಗೂಸ್)ಗಳು ವಿಭಿನ್ನವಾಗಿವೆ. 71 ರಿಂದ 76 ಸೆ.ಮೀ ಉದ್ದ ಹಾಗೂ 3.2ಕೆ.ಜಿ ತೂಕ ತೂಗುತ್ತವೆ.

ಪರಿಸರ ಪ್ರೇಮಿ ಪಕ್ಷಿಪ್ರೇಮಿಯೂ ಆಗಿರುವ ಮನೋಜ್ ಗನ್ನಾ ಅವರು ಹೇಳುವಂತೆ ಕಬಿನಿ ಹಿನ್ನೀರು, ಅಚ್ಚುಕಟ್ಟು ಪ್ರದೇಶದ ಗದ್ದೆಗಳಲ್ಲಿ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿದ್ದ ಬಾರ್ ಹೆಡೆಡ್ ಗೂಸ್ ಪಕ್ಷಿಗಳು ಈ ಬಾರಿ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಚಳಿಗಾಲದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ವಲಸೆ ಬಂದು ತಾಲೂಕಿನ ಮೇಟಿಕುಪ್ಪೆ, ತಾರಕ, ಮೊತ್ತ ಭಾಗದಲ್ಲಿ ಗುಂಪು ಗುಂಪಾಗಿ ಕಾಣಿಸಿಕೊಳ್ಳುತ್ತಿದ್ದ ರೋಸಿ ಸ್ಟರ್ಲೀಂಗ್ ಎಂಬ ಪಕ್ಷಿಗಳು ಕಳೆದ ನಾಲ್ಕೈದು ವರ್ಷದಿಂದ ವಲಸೆ ಬರುವುದನ್ನು ನಿಲ್ಲಿಸಿವೆ ಎಂದಿದ್ದಾರೆ.
ಹಲವು ಪಕ್ಷಿಗಳು ವಲಸೆ ನಿಲ್ಲಿಸಿವೆ
ಮೈನಾ ಪಕ್ಷಿಯನ್ನು ಹೊಲುವ ರೋಸಿ ಸ್ಟರ್ಲೀಂಗ್ ಬರ್ಡ್ ಎಲ್ಲಿ ಹುಡುಕಿದರೂ ಕಾಣಿಸುತ್ತಿಲ್ಲ, ವಾತಾವರಣದಲ್ಲಿ ಏರುಪೇರು, ಜತೆಗೆ ಮಳೆ ಹೆಚ್ಚಾಗಿ, ಚಳಿ ಕಡಿಮೆಯಾಗಿ ಕೆಲ ಪಕ್ಷಿಗಳು ಅವಧಿಗೂ ಮುನ್ನವೇ ಸಂತಾನೋತ್ಪತ್ತಿ ಹೊಂದಿ ಮರಿಗೆ ಜನ್ಮ ನೀಡುತ್ತಿರುವುದು ಕೂಡ ವಲಸೆ ಪಕ್ಷಿಗಳ ಸಂಖ್ಯೆ ಕ್ಷೀಣಿಸಲು ಕಾರಣ, ಅದೇ ರೀತಿ ಹಲವಾರು ನೀರು ಪಕ್ಷಿಗಳಾದ ಸ್ಯಾಂಡ್ ಪೈಪರ್, ಫೆಲಿಕಾನ್ ಇನ್ನಿತರ ವಲಸೆ ಪಕ್ಷಿಗಳ ಕಂಡರೂ ಅತಿ ವಿರಳವಾಗಿದೆ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಸಮಯದಲ್ಲಿ ಹೆಬ್ಬಾತುಗಳು ಕಬಿನಿ ಹಿನ್ನೀರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀಡು ಬಿಡುತ್ತವೆ ಎಂಬ ಕಾರಣಕ್ಕೆ ಅವುಗಳನ್ನು ನೋಡಲೆಂದೇ ಪಕ್ಷಿಪ್ರೇಮಿಗಳು ಇಲ್ಲಿಗೆ ಬರುತ್ತಿದ್ದರು. ಆದರೆ ಈ ಬಾರಿ ಅವುಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಪಕ್ಷಿ ಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications