Karnataka Election 2023: ನಂಜನಗೂಡು ಕಣದಿಂದ ಹಿಂದೆ ಸರಿದ ಎಚ್.ಸಿ.ಮಹದೇವಪ್ಪ: ಧ್ರುವನಾರಾಯಣ್ ಪುತ್ರಗೆ ಟಿಕೆಟ್ ಬಹುತೇಕ ಖಚಿತ
ನಂಜನಗೂಡು ಟಿಕೆಟ್ ಆಕಾಂಕ್ಷಿ ಡಾ.ಎಚ್.ಸಿ.ಮಹದೇವಪ್ಪ ಚುನಾವಣಾ ಕಣದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದು, ಈ ಕ್ಷೇತ್ರದ ಟಿಕೆಟ್ ಧ್ರುವನಾರಾಯಣ್ ಪುತ್ರ ದರ್ಶನ್‌ಗೆ ಬಹುತೇಕ ಖಚಿತವಾದಂತಾಗಿದೆ.
ಮೈಸೂರು, ಮಾರ್ಚ್, 15: ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ನಿಧನದ ಬಳಿಕ, ನಂಜನಗೂಡು ಟಿಕೆಟ್ ಅನ್ನು ಅವರ ಹಿರಿಯ ಮಗ ದರ್ಶನ್‌ಗೆ ನೀಡಬೇಕೆಂಬ ಕೂಗು ಕೇಳಿಬಂದಿತ್ತು. ಇದೀಗ ಮಾಜಿ ಸಚಿವ, ನಂಜನಗೂಡು ಟಿಕೆಟ್ ಆಕಾಂಕ್ಷಿ ಡಾ.ಎಚ್.ಸಿ.ಮಹದೇವಪ್ಪ ಚುನಾವಣಾ ಕಣದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ.
ಮೈಸೂರಿನಲ್ಲಿ ಧ್ರುವನಾರಾಯಣ್ ಪುತ್ರ ದರ್ಶನ್‌ಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಎಚ್.ಸಿ. ಮಹದೇವಪ್ಪ, ನನ್ನ ಸಂಪೂರ್ಣ ಬೆಂಬಲ ದರ್ಶನ್ ಧ್ರುವನಾರಾಯಣ್‌ಗೆ ನೀಡುತ್ತಿದ್ದೇನೆ. ಹಾಗಾಗಿ ನಂಜನಗೂಡು ಚುನಾವಣಾ ಕಣದಿಂದ ನಾನು ಹಿಂದೆ ಸರಿದ್ದೇದ್ದೇನೆ. ನನ್ನ ಆತ್ಮಸಾಕ್ಷಿ ಪ್ರಕಾರ ಈ ನಿರ್ಧಾರ ಮಾಡಿದ್ದೇನೆ. ಸಿದ್ದರಾಮಯ್ಯ ಅಥವಾ ಇನ್ಯಾವಾ ರಾಜಕೀಯ ನಾಯಕರ ಜೊತೆಯೂ ನಾನು ಈ ಬಗ್ಗೆ ಚರ್ಚೆ ಮಾಡಿಲ್ಲ ಎಂದರು.

ದರ್ಶನ್ ಧ್ರುವನಾರಾಯಣ್‌ನನ್ನು ಬೆಂಬಲಿಸುತ್ತೇನೆ
ಇವತ್ತಿನಿಂದ ನಂಜನಗೂಡು ಚುನಾವಣಾ ವಿಚಾರದಲ್ಲಿ ನಾನು ದರ್ಶನ್ ಧ್ರುವನಾರಾಯಣ್‌ನನ್ನು ಬೆಂಬಲಿಸುತ್ತೇನೆ ಎಂದು ಘೋಷಿಸಿದ್ದಾರೆ. ಧ್ರುವನಾರಾಯಣ್ ಜೊತೆ ನನಗೆ ಯಾವತ್ತೂ ರಾಜಕೀಯ ಭಿನ್ನಾಭಿಪ್ರಾಯ ಇರಲಿಲ್ಲ. ನಂಜನಗೂಡು ಉಪಚುನಾವಣೆಯಲ್ಲಿ ನನ್ನ ಮಗ ಸುನೀಲ್ ಬೋಸ್‌ಗೆ ಟಿಕೆಟ್ ಕೊಡಿ ಎಂದು ಹಲವರು ಒತ್ತಾಯಿಸಿದ್ದರು. ಆದರೆ, ಕಳಲೆ ಕೇಶವಮೂರ್ತಿಗೆ ಹೈಕಮಾಂಡ್ ಟಿಕೆಟ್ ಕೊಟ್ಟಿತ್ತು.
ಧ್ರುವನಾರಾಯಣ್ ನೆನೆದು ಮಾಜಿ ಸಚಿವ ಭಾವುಕ
ನಂಜನಗೂಡು ಅಭಿವೃದ್ಧಿ ಮಾಡಿದ್ದು ನೋಡಿ ನನಗೆ ಅಲ್ಲಿಯೇ ಸ್ಪರ್ಧಿಸುವಂತೆ ಜನ ಕರೆದಿದ್ದರು. ಆದ್ದರಿಂದ ನಂಜನಗೂಡು ಸ್ಪರ್ಧೆಗೆ ನಿರ್ಧರಿಸಿದ್ದೆ. ನಾನು ಧ್ರುವನಾರಾಯಣ್ ಇಬ್ಬರು ಅರ್ಜಿ ಹಾಕಿದ್ದು, ಸತ್ಯ. ಧ್ರುವನಾರಾಯಣ್ ಅಗಲಿಕೆಯಿಂದ ದಲಿತ ಸಮುದಾಯಕ್ಕೆ ಬಹುದೊಡ್ಡ ನಷ್ಟವಾಗಿದೆ ಎಂದು ಹೇಳುವ ಮೂಲಕ ಭಾವುಕರಾಗಿದ್ದಾರೆ.
ಸಮಾಧಿಯ ಮೇಲೆ ರಾಜಕೀಯ ಮಾಡುವ ವ್ಯಕ್ತಿ ನಾನಲ್ಲ. ಸಮಾಧಿ ಮೇಲೆ ರಾಜಕೀಯ ಬೆಳೆ ತೆಗೆಯುವ ವ್ಯಕ್ತಿತ್ವ ನನ್ನದಲ್ಲ. ಅಧಿಕಾರದ ರಾಜಕಾರಣಕ್ಕೆ ಯಾವತ್ತೂ ಅಂಟಿ ಕೂತಿಲ್ಲ. ವ್ಯಕ್ತಿಗಿಂತ ಅಧಿಕಾರ ಅಂತಸ್ತು ಮುಖ್ಯವಲ್ಲ. ನನ್ನ ಮಗ ಸುನೀಲ್ ಬೋಸ್ ಬೇರೆ ಅಲ್ಲ. ದರ್ಶನ್ ಧ್ರುವನಾರಾಯಣ್ ಬೇರೆಯಲ್ಲ ಎಂದು ಹೇಳಿದ್ದಾರೆ.

ಈ ವೇಳೆ ದರ್ಶನ್ ಧ್ರುವನಾರಾಯಣ್ ಜೊತೆ ನಿಲ್ಲುವುದು ನನ್ನ ಕರ್ತವ್ಯವಾಗಿದೆ. ಧ್ರುವನಾರಾಯಣ್ ಸಾವಿನಲ್ಲೂ ಇರಿಯುವ ಕೆಲಸ ಮಾಡಬಾರದು. ಕೆಲವರು ಈ ಕೆಲಸ ಮಾಡಿದ್ದಕ್ಕೆ ನನಗೆ ಬೇಸರವಿದೆ ಎಂದು ಪರೋಕ್ಷವಾಗಿ ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಅವರಿಗೆ ತಿವಿದರು.












Click it and Unblock the Notifications