Get Updates
Get notified of breaking news, exclusive insights, and must-see stories!

ತವರಲ್ಲೇ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಆಘಾತ; ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸೋಲು!

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸೋತ ಬೆನ್ನಲ್ಲೇ ಇದೀಗ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲೂ ಕಾಂಗ್ರೆಸ್ ನೆಲಕಚ್ಚಿದ್ದು, ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಭರ್ಜರಿ ಜಯ ಸಾಧಿಸಿದ್ದಾರೆ. ಇದರಿಂದ ಸಿಎಂ ತವರಿನಲ್ಲೇ ಸಿದ್ದರಾಮಯ್ಯ ಅವರಿಗೆ ಭಾರೀ ಮುಖಭಂಗವಾಗಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ 10,823 ಮತಗಳನ್ನು ಪಡೆಯುವ ಮೂಲಕ 4622 ಮತಗಳ ಅಂತರದಿಂದ ನಾಲ್ಕು ಬಾರಿ ಗೆದ್ದಿದ್ದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರನ್ನು ಸೋಲಿಸಿದರು. ಮರಿತಿಬ್ಬೇಗೌಡರು 6201 ಮತಗಳನ್ನು ಪಡೆದುಕೊಂಡರು.

Another Blow to CM Siddaramaiah in Mysuru Congress Candidate Loses in South Teachers Constituency Election

ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡಿದ್ದ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜೂನ್ 3ರಂದು ಮತದಾನ ನಡೆದಿತ್ತು. ನಾಲ್ಕು ಜಿಲ್ಲೆಗಳ ಒಟ್ಟು 44 ಮತಗಟ್ಟೆಗಳಿಂದ 19320 ಮತಗಳು ಚಲಾವಣೆ ಆಗಿದ್ದವು. ಗುರುವಾರ ಬಳಗ್ಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿ ಮೊದಲ ಸುತ್ತಿನಲ್ಲೇ ಜಾತ್ಯಾತೀತ ಜನತಾದಳ ಅಭ್ಯರ್ಥಿ ಕೆ. ವಿವೇಕಾನಂದ ಅವರು 1396 ಮತಗಳಿಂದ ಮುನ್ನಡೆ ಸಾಧಿಸಿದರು. 2ನೇ ಸುತ್ತಿನಲ್ಲೂ 2000ಕ್ಕೂ ಹೆಚ್ಚು ಮತಗಳನ್ನು ಪಡೆದು ಮುನ್ನಡೆ ಕಾಯ್ದುಕೊಂಡರು. ಮತ ಎಣಿಕೆಯ ಅಂತಿಮ ಸುತ್ತಿನಲ್ಲಿ ನಿರೀಕ್ಷೆಯಂತೆ ಮತಗಳನ್ನು ಪಡೆದು ಜಯ ದಾಖಲಿಸಿದರು.

ಕಳೆದ ಮೂರು ಚುನಾವಣೆಗಳಲ್ಲಿ ಇದೇ ಮೊದಲ ಬಾರಿಗೆ ಮೊದಲ ಪ್ರಾಶಸ್ತ್ಯ ಮತಗಳನ್ನು ಪಡೆದು ಗೆಲುವು ಸಾಧಿಸಿರುವುದು ವಿಶೇಷವಾಗಿದೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯ ಮತಗಳಿಂದ ಫಲಿತಾಂಶ ಬಾರದ ಕಾರಣ ದ್ವಿತೀಯ ಪ್ರಾಶಸ್ತ್ಯ ಮತಗಳ ಎಣಿಕೆ ಕಾರ್ಯ ನಡೆದ ಪರಿಣಾಮ ಮುಂಜಾನೆವರೆಗೂ ಎಣಿಕೆ ಕಾರ್ಯ ನಡೆದಿತ್ತು. ಆದರೆ ಈ ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮೊದಲ ಪ್ರಾಶಸ್ತಯ ಮತಗಳಿಂದ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿರುವುದು ದಾಖಲೆಯಾಗಿದೆ.

ಕಾಂಗ್ರೆಸ್‌ಗೆ ದೊಡ್ಡ ಆಘಾತ

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸತತ ಐದನೇ ಗೆಲುವಿನ ಕನಸು ಕಂಡಿದ್ದ ಮರಿತಿಬ್ಬೇಗೌಡ ಅವರ ಕನಸು ಭಗ್ನಗೊಂಡಿದೆ. ಈ ಮೂಲಕ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮರಿತಿಬ್ಬೇಗೌಡ ಅವರ ಪ್ರಾಬಲ್ಯ ಅಂತ್ಯಗೊಂಡಿದೆ. 2000ನೇ ಇಸವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಸಿ ಮೊದಲ ಗೆಲುವು ಕಂಡಿದ್ದ ಮರಿತಿಬ್ಬೇಗೌಡ ಅವರು 2006ರಲ್ಲಿ ಪಕ್ಷೇತರರಾಗಿ ಆಯ್ಕೆಯಾದರು. 2012ರಲ್ಲಿ ಜೆಡಿಎಸ್ ಜೊತೆಗೆ ಕೈಜೋಡಿಸಿ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿದ್ದರು. 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರನ್ನು ಸೋಲಿಸಿ ನಾಲ್ಕನೇ ಬಾರಿಗೆ ಮೇಲ್ಮನೆ ಪ್ರವೇಶ ಮಾಡಿದ್ದರು.

ಜೆಡಿಎಸ್‌ನಿಂದಲೇ ಉಪ ಸಭಾಪತಿ ಆಗಿದ್ದ ಮರಿತಿಬ್ಬೇಗೌಡ, ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿದ್ದರು. ಆದರೆ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ಬೆಂಬಲಿಗೆ ಕೀಲಾರ ಜಯರಾಮ್ ಅವರಿಗೆ ಜೆಡಿಎಸ್ ಟಿಕೆಟ್ ನೀಡದ ಕಾರಣಕ್ಕೆ ಅಸಮಾಧಾನಗೊಂಡು ಪಕ್ಷದಿಂದ ದೂರ ಉಳಿದಿದ್ದ ಅವರು, ನಂತರ ಡಿಕೆಶಿ, ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಚುನಾವಣಾ ಅಖಾಡಕ್ಕೆ ಧುಮುಕಿದ್ದರು.

ಕಳೆದ 24 ವರ್ಷಗಳಿಂದ ಈ ಕ್ಷೇತ್ರದಲ್ಲಿ ಹಿಡಿತ ಸಾಧಿಸಿ, ಶಿಕ್ಷಕರ ಜೊತೆಗೆ ನಿರಂತರ ಸಂಪರ್ಕ ಹೊಂದಿದ್ದ ಮರಿತಿಬ್ಬೇಗೌಡ ಅವರ ಗೆಲುವು ಸುಲಭ ಎಂದು ಹೇಳಲಾಗಿತ್ತು. ಆದರೆ ಬಿಜೆಪಿ-ಜೆಡಿಎಸ್ ಒಗ್ಗಟಿನ ಶ್ರಮ, ನಾಯಕರ ಕ್ಷೇತ್ರ ಉಳಿಸಿಕೊಳ್ಳುವ ಸವಾಲನ್ನು ಎದುರಿಸಲಾಗದೆ ಸೋಲು ಕಾಣಬೇಕಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+