ಮುಂದಿನ ಸಿಎಂ ಯಾರು ಎಂದು ಚುನಾವಣಾ ಫಲಿತಾಂಶದ ನಂತರ ಗೊತ್ತಾಗುತ್ತೆ!
ಮೈಸೂರು, ಜುಲೈ 1: "ಸೊಸೆ ಮನೆಗೆ ಬರುವವರೆಗೂ ಹೊರಗಿನವಳು, ಬಂದ ಮೇಲೆ ಮನೆಯವಳೇ. ಅಂತೆಯೇ ನಾನು ಹೊರಗಿನಿಂದ ಬಂದು ಮನೆಯವನೇ ಆಗಿದ್ದೇನೆ,'' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈಸೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಯಾರು ಎಂಬ ಬಗ್ಗೆ ಚರ್ಚೆಯೇ ನಡೆದಿಲ್ಲ. ನನ್ನ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ಸಮನ್ವಯ ಸಮಿತಿ ರಚನೆ ಆಗುತ್ತಿಲ್ಲ. ಕಾಂಗ್ರೆಸ್‌ನಲ್ಲಿ ಮೂಲ- ವಲಸಿಗ ಎಂಬ ಪ್ರಶ್ನೆಯೂ ಇಲ್ಲ. ಸಿಎಂ ಯಾರಾಗಬೇಕೆಂಬುದು ಚುನಾವಣೆ ಫಲಿತಾಂಶ ನಂತರ. ಇದನ್ನು ಶಾಸಕರು, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಚುನಾವಣೆ ಇನ್ನೂ ಎರಡೂವರೆ ವರ್ಷ ಇದೆ. ಈಗಲೇ ಸಿಎಂ ಅಭ್ಯರ್ಥಿ ಬಗ್ಗೆ ಮಾತುಗಳು ಇಲ್ಲ,'' ಎಂದು ಸ್ಪಷ್ಟಪಡಿಸಿದರು.
ಯೂತ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ವಿಚಾರದ ಗೊಂದಲ ವಿಚಾರವಾಗಿ, "ಅದಕ್ಕೂ, ನನಗೂ ಯಾವುದೇ ಸಂಬಂಧ ಇಲ್ಲ. ಅದೇ ಪ್ರತ್ಯೇಕವಾದ ವ್ಯವಸ್ಥೆ, ಆದರೂ ನಾನು ಸಲಹೆ ಕೊಟ್ಟಿದ್ದೆ. ಪ್ರತ್ಯೇಕ ಚುನಾವಣೆ ನಡೆದ ಮೇಲೆ ಅವರ ಆಯ್ಕೆ ಆಗಿದೆ. ಹೊಂದಾಣಿಕೆಯಿಂದ ಒಬ್ಬರನ್ನು ನೇಮಿಸಿ ಎಂದು ಹೇಳಿದ್ದೆ. ಇದರಲ್ಲಿ ನನ್ನದಾಗಲಿ ಡಿಕೆಶಿಯವರದ್ದಾಗಲಿ ಪಾತ್ರ ಇಲ್ಲ, ಈ ವಿಚಾರದಲ್ಲಿ ಗೊಂದಲಗಳು ಬೇಡ, ಎಂದರು.

ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, "ಘಟನೆ ನಡೆದು ಇಷ್ಟು ದಿನ ಆದರೂ ಸಿಎಂ ಹೋಗಿಲ್ಲ. ಅವರು ಮೂಢನಂಬಿಕೆಗೆ ಜೋತು ಬಿದ್ದಿದ್ದಾರೆ. ಅಲ್ಲಿ ಹೋದರೆ ಅಧಿಕಾರ ಹೋಗುತ್ತೇ ಅನ್ನೋ ಭಯದಲ್ಲಿದ್ದಾರೆ. ಸಿಎಂ ಆದ ದಿನದಿಂದಲೂ ಅಲ್ಲಿಗೆ ಹೋಗಿಲ್ಲ. ನಾನು ಸಿಎಂ ಆದಾಗ 12 ಬಾರಿ ಚಾಮರಾಜನಗರಕ್ಕೆ ಹೋಗಿದ್ದೆ. ನಾನು 5 ವರ್ಷ ಪೂರೈಸಿದೆ. ಯಡಿಯೂರಪ್ಪ ಚಾಮರಾಜನಗರಕ್ಕೆ ಹೋಗಬೇಕು. ಅಲ್ಲಿನ ಜನರ ಕಷ್ಟ ಕೇಳಬೇಕು,'' ಎಂದು ಒತ್ತಾಯಿಸಿದರು.












Click it and Unblock the Notifications