ನಟ ನವೀನ್ ಕೊಲೆ : ನಾಲ್ವರು ಆರೋಪಿಗಳು ಶರಣು
ಮೈಸೂರು, ಮಾ. 24 : 'ಹಾಯ್ ಕೃಷ್ಣ' ಚಿತ್ರದ ನಾಯಕ, ನಿರ್ಮಾಪಕ ನವೀನ್ ಕೊಲೆ ಪ್ರಕರಣದ ನಾಲ್ವರು ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಇದುವರೆಗೂ 6 ಆರೋಪಿಗಳು ಸಿಕ್ಕಿಬಿದ್ದಿದ್ದು, ಇಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ.
ಸೋಮವಾರ ಬೆಳವಾಡಿ ನಿವಾಸಿಗಳಾದ ದೀಪು, ಲೋಕೇಶ್, ದಿವಾಕರ ಮತ್ತು ಕೃಷ್ಣ ಎಂಬ ಆರೋಪಿಗಳು ವಕೀಲರೊಂದಿಗೆ ಆಗಮಿಸಿ ಮೈಸೂರು ಜಿಲ್ಲಾ ನ್ಯಾಯಾಲಯಕ್ಕೆ ಶರಣಾದರು. ಎಲ್ಲಾ ಆರೋಪಿಗಳನ್ನು ಕೋರ್ಟ್ ಪೊಲೀಸರ ವಶಕ್ಕೆ ನೀಡಿದೆ. [ನವೀನ್ ಕೊಲೆ ಇಬ್ಬರ ಬಂಧನ]

ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಣಿ ಮತ್ತು ಶಂಕರ್ ಎಂಬ ಆರೋಪಿಗಳನ್ನು ವಿಜಯನಗರ ಪೊಲೀಸರು ಮಾ.19ರಂದು ಬೋಗಾದಿಯ ತೋಟದ ಮನೆಯಲ್ಲಿ ಬಂಧಿಸಿದ್ದರು. ಪ್ರಕರಣದಲ್ಲಿ ಒಟ್ಟು 6 ಆರೋಪಿಗಳು ಸಿಕ್ಕಿಬಿದ್ದಂತಾಗಿದೆ. [ನಟ ನವೀನ್ ಹತ್ಯೆ]
ಒಟ್ಟು 8 ಜನರ ತಂಡ ಹಾಯ್ ಕೃಷ್ಣ' ಚಿತ್ರದ ನಾಯಕ, ನಿರ್ಮಾಪಕ ನವೀನ್ ಅವರನ್ನು ಮಾ.15ರ ಭಾನುವಾರ ರಾತ್ರಿ ಕೊಲೆ ಮಾಡಿತ್ತು. ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದೇವೆ ಎಂದು ವಿಜಯನಗರ ಠಾಣೆ ಇನ್ಸ್‌ಪೆಕ್ಟರ್ ಸಿ.ವಿ.ರವಿ ಹೇಳಿದ್ದಾರೆ.
ಜಾತ್ರೆಗೆ ಬಂದವರು ಕೊಲೆ ಮಾಡಿದ್ದರು : ಮಾ.15ರ ಭಾನುವಾರ ಮೈಸೂರಿನ ಬೆಳವಾಡಿಯ ಮಾರಮ್ಮ ದೇಗುಲದ ಬಳಿ ನವೀನ್ ಹತ್ಯೆ ನಡೆದಿತ್ತು. ನವೀನ್ ನಿವಾಸದ ಬಳಿಯ ಮಾರಮ್ಮ ದೇವಾಲಯದಲ್ಲಿ ಭಾನುವಾರ ಮಾರಮ್ಮ ದೇವಿಯ ಉತ್ಸವವಿತ್ತು. ನವೀನ್ ಇದರಲ್ಲಿ ಪಾಲ್ಗೊಂಡಿದ್ದರು, ಉತ್ಸವ ಮುಗಿದ ಬಳಿಕ ಈ ಕೊಲೆ ನಡೆದಿತ್ತು.












Click it and Unblock the Notifications