ಕುಟುಂಬ ಹುಡುಕುತ್ತಾ ಸ್ವೀಡನ್‌ನಿಂದ ಮೈಸೂರಿಗೆ ಬಂದ ಯುವತಿ! ಏನಿದು ಪ್ರಕರಣ
ಮೈಸೂರು: ಸ್ವೀಡನ್‌ನಲ್ಲಿ ನೆಲೆಸಿರುವ ಯುವತಿಯೊಬ್ಬಳು ತನ್ನ ಮೂಲ ಹುಡುಕುತ್ತಾ ಮೈಸೂರಿಗೆ ಬಂದಿದ್ದಾರೆ. ಕುಟುಂಬದ ಯಾರೊಬ್ಬರು ಸಿಗದೆ ನೋವಿನಲ್ಲೇ ಕಣ್ಣೀರು ಹಾಕಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಯುವತಿ, ಜಾಲಿ ಸ್ಯಾಂಡ್ ಬರ್ಗ್ (ನೆನಪಿರುವಂತೆ ಮೂಲ ಹೆಸರು ಜಾನು) ನಾನು ಕರ್ನಾಟಕದವಳು. ಆದರೆ, ನನ್ನನ್ನು ವಿದೇಶಿ ದಂಪತಿಗಳು ದತ್ತು ತೆಗೆದುಕೊಂಡು ಸ್ವೀಡನ್‌ಗೆ ಹೋದರು. ಇದೀಗ ನನ್ನ ತಂದೆತಾಯಿ ಹುಡುಕುತ್ತಾ ಬಂದಿದ್ದೇನೆ, ಎಂದು ಮಾಹಿತಿ ನೀಡಿದರು.

1989ರಲ್ಲಿ ನಾನು ಎಂಟು ವರ್ಷ ಇದ್ದಾಗ ಸ್ವೀಡನ್ ದಂಪತಿ ಬೆಂಗಳೂರಿನ ಆಶ್ರಯ ಚಿಲ್ಡ್ರನ್ ಹೋಂ ಎಂಬ ಸಂಸ್ಥೆಯಲ್ಲಿ ನನ್ನನ್ನು ದತ್ತು ತೆಗೆದುಕೊಂಡು ಅವರ ದೇಶಕ್ಕೆ ಹೋದರು. ನಾನು ಅಲ್ಲಿಯೇ ಶಿಕ್ಷಣ ಪೂರೈಸಿದೆ. ಆದರೆ, ನಿತ್ಯ ನನಗೆ ನನ್ನ ಕುಟುಂಬ ನೆನಪು ಬರುತ್ತಿತ್ತು. ಆದರೆ, ಹೋಗುವುದು ಹೇಗೆ ಎಂಬ ಅಳುಕು ಇತ್ತು. ಏನು ಮಾಡುವ ಪರಿಸ್ಥಿತಿಯಲ್ಲಿ ನಾನು ಇರಲಿಲ್ಲ. ಆದರೆ, ನನ್ನ ತಂದೆತಾಯಿ, ಸಹೋದರ ಅಥವಾ ಸಹೋದರಿಯನ್ನು ನೋಡುವ ತವಕ ಸದಾ ಇರುತ್ತದೆ ಎಂದು ಕಣ್ಣೀರು ಹಾಕಿದರು.
ನಾನು ಸಾಕಷ್ಟು ಕಡೆ ಹುಡುಕಿದಾಗ ಮೈಸೂರು ಜಿಲ್ಲೆಯಲ್ಲಿ 1985ರಲ್ಲಿ ಜನಿಸಿದ್ದು ಎಂಬ ಮಾಹಿತಿ ದೊರೆಕಿತು. ನನ್ನ ತಾಯಿ ಮದ್ದೂರಿನವರು ಅವರ ಹೆಸರು ವಸಂತಮ್ಮ. ತಂದೆ ಆತ್ಮಹತ್ಯೆ ಮಾಡಿಕೊಂಡ ಕಾರಣ ಜೀವನ ನಡೆಸುವುದು ಕಷ್ಟವಾಗಿತ್ತು. ಹೀಗಾಗಿ ನನ್ನ ಅಜ್ಜಿ ತನಗೆ ಪರಿಚಿತರಾದ ಜಯಮ್ಮ ಎಂಬುವವರಿಗೆ ನನ್ನನ್ನು ನೀಡಿದರು. ಆಕೆ ನನ್ನನ್ನು ಆಶ್ರಯ ಚಿಲ್ಡ್ರನ್ ಹೋಂಗೆ ನೀಡಿದರು ಎಂಬ ಮಾಹಿತಿ ದೊರೆತಿದೆ ಎಂದು ತಿಳಿಸಿದರು.
ಮದ್ದೂರಿನ ಮೂಲವನ್ನು ಹುಡುಕಿ ಹೋದಾಗ ಮದ್ದೂರಿನ ಪ್ರೌಢಶಾಲೆ ಪಕ್ಕದ ಮನೆಯಲ್ಲಿದ್ದ ಜಯಮ್ಮ ಎಂಬುವವರು ನನ್ನನ್ನು ಸಂಸ್ಥೆಗೆ ನೀಡಿದ್ದರೆಂಬುದು ಪತ್ತೆಯಾಯಿತು. ಆದರೆ, ಆಕೆಗೆ ತನ್ನನ್ನು ನೀಡಿದವರು ಯಾರು ಎಂಬುದು ತಿಳಿಯಲು ಹೋದರೆ ಜಯಮ್ಮ ಈ ಹಿಂದೆಯೇ ಸಾವಿಗೀಡಾಗಿದ್ದಾರೆ. ನನಗೆ ಯಾರೂ ಬದುಕಿಲ್ಲ. ಹೀಗಿದ್ದರೂ ತನಗೆ ಸಹೋದರರು, ಸಹೋದರಿಯರು ಇರಬಹುದು ಎಂಬ ಕಾರಣಕ್ಕೆ ಅವರ ಹುಡುಕಾಟದಲ್ಲಿದ್ದೇನೆ ಎಂದು ತಿಳಿಸಿದರು.












Click it and Unblock the Notifications