ಮೈಸೂರು ಪ್ರಸಿದ್ಧ ತಾಣಗಳ ಪ್ರಚಾರಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಹೊಸ ಪ್ರಯೋಗ: ಇಲ್ಲಿದೆ ವಿವರ
ಮೈಸೂರು, ಸೆಪ್ಟೆಂಬರ್ 13: ಮೈಸೂರು ನಗರಕ್ಕೆ ದಸರಾ ಕಳೆ ಬರಲಾರಂಭಿಸಿದ್ದು, ನಗರದ ಬೀದಿ ಬೀದಿಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡುತ್ತಿದೆ. ಈ ಬಾರಿಯ ದಸರಾಕ್ಕೆ ಭರ್ಜರಿ ಸಿದ್ಧತೆಗಳು ಆರಂಭವಾಗಿದ್ದು, ಹಲವು ಹೊಸತನಕ್ಕೆ 2024ರ ದಸರಾ ಮಹೋತ್ಸವ ಸಾಕ್ಷಿಯಾಗಲಿದೆ. ಇತರೆ ದಿನಗಳಿಗೆ ಹೋಲಿಸಿದರೆ ದಸರಾ ಸಮಯದಲ್ಲಿ ನಿರೀಕ್ಷೆಗೂ ಮೀರಿ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಮೈಸೂರಿನಲ್ಲಿ ಅಕ್ಟೋಬರ್ 3ರಿಂದ ಅಕ್ಟೋಬರ್ 12ರವರೆಗೆ ವಿಶ್ವವಿಖ್ಯಾತ ದಸರಾ-2024 ಉತ್ಸವಗಳು ನಡೆಯಲಿದೆ. ಈ ಸಂಭ್ರಮವನ್ನು ದುಪ್ಪಟ್ಟು ಮಾಡಲು ಪ್ರವಾಸೋದ್ಯಮ ಇಲಾಖೆಯು ಸಾಮಾಜಿಕ ಜಾಲತಾಣಗಳನ್ನು ಕೇಂದ್ರೀಕರಿಸಿ 'ಡಿಸ್ಕವರ್ ಮೈಸೂರು' ಉಪಕ್ರಮದ ಮೂಲಕ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿದೆ.

ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ, ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ಟೂರಿಸಂ ಸೊಸೈಟಿ (ಕೆಟಿಎಸ್) ಸಹಯೋಗದಲ್ಲಿ ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳ ಪ್ರಚಾರಕ್ಕೆ ಬ್ಲಾಗರ್ಸ್ ಮೀಟ್ ಆಯೋಜಿಸಲಾಗಿದೆ. ಮೈಸೂರಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸುವುದು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ಈ ಕಾರ್ಯಕ್ರಮದ ಮೊದಲ ಹೆಜ್ಜೆಯಾಗಿ ಬ್ಲಾಗರ್‌ಗಳ ತಂಡ ಸೋಮನಾಥಪುರದ ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಇತಿಹಾಸ ಹಾಗೂ ವಾಸ್ತುಶಿಲ್ಪದ ಬಗ್ಗೆ ಗೈಡ್‌ಗಳಿಂದ ಮಾಹಿತಿ ಪಡೆದುಕೊಂಡರು. ಹೊಸ ಮಾಹಿತಿ ಪಡೆದುಕೊಂಡ ತಂಡ ದೇವಸ್ಥಾನದ ಶಿಲ್ಪಕಲೆ ಹಾಗೂ ಕೆತ್ತನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ವಿವಿಧ ರೀತಿಯ ವಿಡಿಯೋ ಹಾಗೂ ಫೋಟೋಗಳನ್ನು ಸಂಗ್ರಹಿಸಿಕೊಂಡರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರಾದ ಎಂ.ಕೆ.ಸವಿತಾ ಉಪಸ್ಥಿತರಿದ್ದು, ಬ್ಲಾಗರ್‌ಗಳನ್ನು ಸ್ವಾಗತಿಸಿ ಡಿಸ್ಕವರ್ ಮೈಸೂರು ಕಾರ್ಯಕ್ರಮದ ಉದ್ದೇಶದ ಬಗ್ಗೆ ತಂಡಕ್ಕೆ ವಿವರಿಸಿದರು. ಪ್ರವಾಸೋದ್ಯಮ ಇಲಾಖೆ ಈ ಹೊಸ ಪ್ರಯೋಗದಿಂದ ದಸರಾ ವೇಳೆ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಈ ಸಂದರ್ಭದಲ್ಲಿ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಪ್ರಾದೇಶಿಕ ಆಯುಕ್ತರಾದ ಫಾರುಕ್ ಅಹಮದ್, ಸಹಾಯಕ ನಿರ್ದೇಶಕರಾದ ಕೇದಾರ್‌ನಾಥ್ , ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಸ್ವಾಮಿ, ದಸರಾ ವಸ್ತುಪ್ರದರ್ಶನ ಕಾರ್ಯನಿರ್ವಹಣಾಧಿಕಾರಿ ರುದ್ರೇಶ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ.ಡಿ. ಸುದರ್ಶನ್, ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ನಾರಾಯಣಗೌಡ, ಸೇಫ್ ವೀಲ್ ಚೇರ್ ಮೆನ್ ಪ್ರಶಾಂತ್, ಗೈಡ್ ಅಸೋಸಿಯೇಷನ್ ಅಧ್ಯಕ್ಷರಾದ ಅಶೋಕ್ ಹಾಗೂ ಇತರರು ಉಪಸ್ಥಿತರಿದ್ದರು.












Click it and Unblock the Notifications