ಮೈಸೂರು: 600 ನಿವೇಶನಗಳ ಮಾಹಿತಿ ನಾಪತ್ತೆ; ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್
ಮೈಸೂರು, ಏಪ್ರಿಲ್ 25: ನಿವೇಶನಕ್ಕೆ ಸಂಬಂಧಿಸಿದ ಲೆಡ್ಜರ್‌ನಲ್ಲಿ 300 ಪುಟಗಳು ನಾಪತ್ತೆಯಾಗಿರುವುದರಿಂದ ಒಟ್ಟು 600 ನಿವೇಶನಗಳ ಮಾಹಿತಿ ನಾಪತ್ತೆಯಾಗಿದ್ದು, ಅವುಗಳ ನೈಜತೆಯನ್ನು ಲೆಕ್ಕಶಾಖೆಯಲ್ಲಿನ ದಾಖಲೆಯೊಂದಿಗೆ ಪರಿಶೀಲಿಸಲಾಗುತ್ತಿದೆ ಎಂದು ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ವಿ. ರಾಜೀವ್, ಮುಡಾ ಕಚೇರಿಯಲ್ಲಿ ಕಳೆದ ಎರಡು ದಿನಗಳ ಕಾಲ ನಡೆದ ಮೂಲ ದಾಖಲೆಗಳ ವಿಶೇಷ ಪರಿಶೀಲನಾ ಕಾರ್ಯದಲ್ಲಿ 300 ಪುಟಗಳು, 216 ನಿವೇಶನಗಳ ದಾಖಲೆಗಳು, ವ್ಯತ್ಯಾಸವಾಗಿರುವ ಕಡತಗಳು ನಾಪತ್ತೆಯಾಗಿದೆ. ಮೇಲ್ನೋಟಕ್ಕೆ ಸಿಎ ನಿವೇಶನ, ಮೂಲ ನಿವೇಶನ, ಬದಲಿ ನಿವೇಶನ, ಹರಾಜು ನಿವೇಶನಗಳಿಗೆ ಸಂಬಂಧಪಟ್ಟಂತೆ ದಾಖಲೆಗಳು ನಾಪತ್ತೆಯಾಗಿರುವುದು ಕಂಡುಬಂದಿದೆ ಎಂದು ಮಾಹಿತಿ ನೀಡಿದರು.
ಮನೆಯವರೇ ಕಳ್ಳರು
ಮನೆಯ ಒಳಗಡೆ ಕೆಲಸ ಮಾಡುವವರೇ ಕಳ್ಳರಾಗಿರುವುದು ಕಂಡು ಬಂದಿದೆ. ಮನೆಯ ಒಳಗಿರುವವರು ಹೊರಗಿನವರಿಗೆ ಕೈ ಜೋಡಿಸಿರುವ ಕಾರಣ ಸುಲಭವಾಗಿ ಇಂತಹ ಅಕ್ರಮಗಳನ್ನು ಮಾಡಲಾಗಿದೆ ಎಂದರು. ಮುಡಾ ಕಾರ್ಯದರ್ಶಿ ಡಾ.ಎನ್.ಸಿ. ವೆಂಕಟರಾಜು ನೇತೃತ್ವದಲ್ಲಿ ಐದು ಜನ ವಿಶೇಷ ತಹಸಿಲ್ದಾರ್, ಒಬ್ಬರು ಸಹಾಯಕ ಕಾರ್ಯದರ್ಶಿ ಆರು ತಂಡಗಳನ್ನು ರಚಿಸಲಾಗಿತ್ತು.

ಈ ತಂಡವು ಎರಡು ದಿನಗಳ ಕಾಲ ನಡೆಸಿದ ವಿಶೇಷ ದಾಖಲೆಗಳ ಪರಿಶೀಲನಾ ವೇಳೆಯಲ್ಲಿ ಸದ್ಯಕ್ಕೆ 300 ಪುಟಗಳು ಕಾಣೆಯಾಗಿವೆ. ಹಾಗಾಗಿ, ಈ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ ಬಳಿಕ ಸೂಕ್ತ ತನಿಖೆ ನಡೆಸುವ ಕುರಿತು ಪ್ರಾಧಿಕಾರದ ಸಭೆಯಲ್ಲಿ ಮಂಡಿಸಿ ಅಂತಿಮ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.

ಸಿಐಡಿಯಲ್ಲಿ 13 ಪ್ರಕರಣಗಳು ದೃಢ:
2005ರಲ್ಲಿ ಪ್ರಾಧಿಕಾರದಿಂದ ಮಂಜೂರಾದ ಆಶಾಮಂದಿರ ಯೋಜನೆಯಡಿ ಮಂಜೂರಾದ ನಿವೇಶನಗಳಿಗೆ ಸಂಬಂಧಿಸಿದಂತೆ ಅಕ್ರಮ ನಡೆದಿರುವ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ವಹಿಸಿದ್ದು, 142 ಪ್ರಕರಣಗಳಲ್ಲಿ 13 ಪ್ರಕರಣಗಳು ಮಾತ್ರ ದೃಢವಾಗಿತ್ತು. ಸಿಐಡಿಯು ಕೇಳಿದ ದಾಖಲೆಗಳನ್ನು ಸಮರ್ಪಕವಾಗಿ ಒದಗಿಸಲು ಸಾಧ್ಯವಾಗದ ಕಾರಣ ಹಲವು ಕೇಸುಗಳು ಮುಕ್ತಾಯವಾಯಿತು. ಹೀಗಾಗಿಯೇ, ಈ ಬಾರಿ ದಾಖಲೆಗಳನ್ನು ಗಣಕೀಕರಣ ಮಾಡುವ ಜತೆಗೆ ಪ್ರತಿಯೊಂದು ದಾಖಲೆಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಯಾವ ಏಜೆನ್ಸಿಯಿಂದ ತನಿಖೆ ನಡೆಸಬಹುದು ಎಂಬುದನ್ನು ನಿರ್ಧರಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಡಾ ಸದಸ್ಯರಾದ ಎನ್. ಲಕ್ಷ್ಮೀದೇವಿ, ಜಿ. ಲಿಂಗಯ್ಯ, ಎಂ.ಎಸ್. ನವೀನ್‌ಕುಮಾರ್, ಕೆ. ಮಾದೇಶ್, ಕಾರ್ಯದರ್ಶಿ ಡಾ.ಎನ್.ಸಿ. ವೆಂಕಟರಾಜು ಇದ್ದರು.












Click it and Unblock the Notifications