Get Updates
Get notified of breaking news, exclusive insights, and must-see stories!

ಮೈಸೂರಿನಲ್ಲಿ ಮರಗಳ ಮಾರಣ ಹೋಮ: ಪರಿಸರ ಪ್ರೇಮಿಗಳ ವ್ಯಾಪಕ ಆಕ್ರೋಶ

ಮೈಸೂರು, ಏಪ್ರಿಲ್‌ 14: ಮೈಸೂರು ನಗರವನ್ನು ತಂಪಾಗಿಟ್ಟಿದ್ದರೆ ಅದು ರಸ್ತೆ ಬದಿಯಲ್ಲಿರುವ ಮರಗಳು ಎಂದರೆ ಅತಿಶಯೋಕ್ತಿ ಆಗಲಾರದು. ಹಿಂದಿನ ಕಾಲದಲ್ಲಿ ರಸ್ತೆ ಬದಿಯಲ್ಲಿ ನೆಟ್ಟ ಮರಗಳು ಹೆಮ್ಮರವಾಗಿದ್ದು, ಈಗ ತಂಪು ನೀಡುವುದಲ್ಲದೇ, ಪುಟ್ಟ ಪುಟಾಣಿ ಪ್ರಾಣಿ ಪಕ್ಷಿಗಳಿಗೂ ಆಸರೆಯಾಗಿವೆ.

ಕಾಂಕ್ರಿಟ್ ಕಾಡಿನ ನಡುವೆ ಅಳಿದುಳಿದ ಮರಗಳು ಜನರಿಗೆ ನೆಮ್ಮದಿ ತಂದಿದೆ. ಆದರೆ ನಗರ ಬೆಳೆದಂತೆಲ್ಲ ರಸ್ತೆಗಳ ವಿಸ್ತರಣೆ ಅನಿವಾರ್ಯವಾಗುತ್ತಿದ್ದು, ಅನಿವಾರ್ಯವಾಗಿ ರಸ್ತೆ ಬದಿಯ ಮರವನ್ನು ಕಡಿಯುವುದು ಅನಿವಾರ್ಯವಾಗುತ್ತಿದೆ. ಹೀಗಾಗಿ ಆಗೊಮ್ಮೆ ಈಗೊಮ್ಮೆ ರಸ್ತೆ ಬದಿಯಲ್ಲಿ ಹೆಮ್ಮರವಾಗಿ ಬೆಳೆದ ಮರಗಳನ್ನು ಕಡಿಯುವುದು ಕಂಡು ಬರುತ್ತಿದ್ದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗುತ್ತಿದೆ.

40 Trees Felled In Mysuru For Road Widening Sparking Outrage Over compensatory Afforestation Plans

ಇದೀಗ ಮೈಸೂರು ನಗರದ ಜಲಪುರಿ ಬಳಿ ಇರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಚೇರಿ ವೃತ್ತದಿಂದ ಮಹದೇವಪುರ ರಸ್ತೆಯ ಕಾಳಿಕಾಂಬ ದೇವಸ್ಥಾನದವರೆಗೆ ರಸ್ತೆ ವಿಸ್ತರಣೆಗಾಗಿ 40ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದೆ. ಚಿಗುರಿ ಹಸಿರಿನಿಂದ ನಳನಳಿಸುತ್ತಿದ್ದ ಮರಗಳು ರಸ್ತೆಗುರುಳಿದ್ದು ಅದನ್ನು ನೋಡಿದವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಮೈಸೂರಿನಲ್ಲಿ ಮರಗಳ ಮಾರಣ ಹೋಮ ಯಾಕೆ?

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ರಸ್ತೆ ಅಗಲೀಕರಣ ನಡೆಯುತ್ತಿದ್ದು, ಪಿಡಬ್ಲ್ಯೂಡಿ ಇಲಾಖೆ ಕಾಮಗಾರಿ ಉಸ್ತುವಾರಿ ಹೊತ್ತುಕೊಂಡಿದೆ. ಸುಮಾರು 30 ಮೀಟರ್ ಉದ್ದದ ರಸ್ತೆಯನ್ನು 50 ಅಡಿಯಿಂದ ನೂರಡಿಗೆ ಪರಿವರ್ತನೆ ಮಾಡುವ ಸಲುವಾಗಿ ಬದಿಯಲ್ಲಿ ಬೆಳೆದಿದ್ದ ಮರಗಳನ್ನು ಕಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಮರಗಳನ್ನು ಕಡಿಯುವ ಸಂದರ್ಭದಲ್ಲಿ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿತ್ತು. ರಸ್ತೆಯ ಎರಡೂ ತುದಿಯಲ್ಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.

40 Trees Felled In Mysuru For Road Widening Sparking Outrage Over compensatory Afforestation Plans

ಮರ ಕಡಿಯಲು ಗುತ್ತಿಗೆ ಪಡೆದಿದ್ದವರು ಬೆಳಗ್ಗೆ ಜೆಸಿಬಿ ಸೇರಿದಂತೆ ಮರ ಕತ್ತರಿಸುವ ಆಧುನಿಕ ಯಂತ್ರಗಳ ಜೊತೆ ಸ್ಥಳಕ್ಕೆ ಆಗಮಿಸಿ, ಸಮರೋಪಾದಿಯಲ್ಲಿ ಮರಗಳನ್ನು ಕತ್ತರಿಸಿ ಭೂಮಿಗೆ ಉರುಳಿಸಿದರು. ಬಳಿಕ ರಂಬೆ-ಕೊಂಬೆಗಳನ್ನು ಬೇರ್ಪಡಿಸಿದರು. ಬಿದ್ದಿದ್ದ ಮರಗಳನ್ನು ದೊಡ್ಡ-ದೊಡ್ಡ ದಿಮ್ಮಿಗಳಾಗಿ ಮಾಡಿದರು. ಈ ಸಮಯದಲ್ಲಿ ವಾಹನಗಳು ಸಂಚಾರ ಮಾಡದಂತೆ ತಡೆ ಹಿಡಿಯಲಾಗಿತ್ತಲ್ಲದೆ ಆ ಕಡೆ ತೆರಳಲು ಅವಕಾಶವಿರಲಿಲ್ಲ. ಆದರೆ ಏಕಾಏಕಿ ಈ ನಿರ್ಧಾರವನ್ನು ತೆಗೆದುಕೊಂಡು ಮರಗಳನ್ನು ಕಡಿದು ಹಾಕಿರುವುದಕ್ಕೆ ಸ್ಥಳೀಯ ಆಡಳಿತದ ಈ ಕೆಲಸದ ವಿರುದ್ಧ ಮೈಸೂರಿನ ಪರಿಸರ ಪ್ರೇಮಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಧುನಿಕತೆ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ವಿನಾಶದಂಚಿಗೆ ಹೋಗುತ್ತಿರುವ ಪರಿಸರ ಸಂರಕ್ಷಣೆಗೆ ಎಲ್ಲೆಡೆ ಜಾಗೃತಿ ಕಾರ್ಯಕ್ರಮಗಳು ಜರುತ್ತಿವೆ. ಮೈಸೂರಿನಂತಹ ಬೃಹತ್‌ ಜಿಲ್ಲೆಯಲ್ಲಿ ಎಲ್ಲೆಡೆ ಈ ರೀತಿಯ ಜಾಗೃತಿ ಕ್ರಮಗಳು ನಡೆಯುತ್ತಲೇ ಇರುತ್ತದೆ. ಆದರೆ, ಅದೇ ಮೈಸೂರಿನಲ್ಲಿ ಇಂದು ರಸ್ತೆ ಅಗಲೀಕರಣದ ಹೆಸರಿನಲ್ಲಿ ಸಾಮೂಹಿಕವಾಗಿ ಮರಗಳ ಹನನ ನಡೆದಿದೆ. ರಸ್ತೆ ಅಗಲೀಕರಣದ ಹೆಸರಿನಲ್ಲಿ ಬೆಳೆದು ನಿಂತಿರುವ, ಹಲವು ಜೀವಿಗಳಿಗೆ ಆಶ್ರಯ ತಾಣವಾಗಿರುವ ಫೆಲ್ಟೋ ಫೋರಮ್ ವೃಕ್ಷಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದಿರುವುದು ಸರಿಯಾದ ಕ್ರಮವಲ್ಲ ಎಂದು ಸ್ಥಳೀಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

40 Trees Felled In Mysuru For Road Widening Sparking Outrage Over compensatory Afforestation Plans

ಮರಗಳ ಮಾರಣಹೋಮದ ಕುರಿತು ಡಿಸಿಎಫ್ ಡಾ.ಬಸವರಾಜು ಹೇಳಿದ್ದೇನು?

ರಸ್ತೆಯ ಇಕ್ಕೆಲಗಳಲ್ಲಿ ಹಲವು ವರ್ಷಗಳಿಂದ ನೆರಳು ನೀಡುತ್ತಿದ್ದ, ಹಕ್ಕಿ-ಪಕ್ಷಿಗಳಿಗೆ ಆಶ್ರಯ ನೀಡಿದ್ದ ಹಾಗೂ ಎಲ್ಲದಕ್ಕಿಂತ ಹೆಚ್ಚಾಗಿ ಶುದ್ಧ ಆಮ್ಲಜನಕವನ್ನು ನೀಡುತ್ತಿದ್ದ ಮರಗಳಿಗೆ ಕೊಡಲಿ ಪೆಟ್ಟು ನೀಡಲಾಗಿದೆ. ಕೇಂದ್ರದ ಹಸಿರು ಪೀಠದ ನಿರ್ದೇಶನದಂತೆ ಒಂದು ಮರಕ್ಕೆ ಬದಲಾಗಿ 10 ಸಸಿಗಳನ್ನು ನೆಡಬೇಕು. ಆದರೆ, 50 ವರ್ಷಕ್ಕೂ ಹೆಚ್ಚು ವಯಸ್ಸಿನ ಈ ಬೃಹದಾಕಾರದ ಮರಗಳನ್ನು ಮರು ಸೃಷ್ಟಿಸಲು ಸಾಧ್ಯವೇ ಆ ಮರಗಳನ್ನು ಬಿಟ್ಟು ರಸ್ತೆ ಅಗಲೀಕರಣ ಮಾಡಬೇಕಿತ್ತು ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಅಧಿಕಾರಿಗಳು ಮರಗಳನ್ನು ಕಡಿದು ನೆಲಸಮ ಮಾಡಿದ ಬಗ್ಗೆ ಉತ್ತರ ಕೊಡಲೇಬೇಕಾಗಿದೆ. ಹೀಗಾಗಿ ಈ ಸಂಬಂಧ ಡಿಸಿಎಫ್ ಡಾ.ಬಸವರಾಜು ಪ್ರತಿಕ್ರಿಯಿಸಿ ಎಸ್‌ಪಿ ಕಚೇರಿ ವೃತ್ತದಿಂದ ಕಾಳಿಕಾಂಬ ದೇವಸ್ಥಾನದವರೆಗೆ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಮೈಸೂರು ಮಹಾನಗರ ಪಾಲಿಕೆ ಸಲ್ಲಿಸಿರುವ ಕೋರಿಕೆಯಂತೆ, ಅರಣ್ಯ ಇಲಾಖೆ ರಸ್ತೆ ವಿಸ್ತರಣೆಗೆ ಅತ್ಯವಶ್ಯಕವಾದ 40 ಫೆಲ್ಟೋ ಫೋರಮ್ ಜಾತಿಯ ಮರಗಳ ತೆರವಿಗೆ ನಿಯಮಾನುಸಾರ ಅನುಮತಿ ನೀಡಿರುವುದಾಗಿ ಹೇಳಿದ್ದಾರೆ.

ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶವೇನು?

ಮೈಸೂರು ನಗರದ ಜಲಪುರಿ ಬಳಿ ಇರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ವೃತ್ತದಿಂದ ಮಹದೇವಪುರ ರಸ್ತೆಯ ಕಾಳಿಕಾಂಬ ದೇವಸ್ಥಾನದವರೆಗೆ ರಸ್ತೆ ವಿಸ್ತರಣೆಗಾಗಿ 40ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದೆ ಎಂದು ಮೈಸೂರು ಪರಿಸರ ಬಳಗದ ಪರಶುರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಬಿರು ಬೇಸಿಗೆಯಲ್ಲಿ ತಂಪಾದ ನೆರಳು ನೀಡುತ್ತಿದ್ದ ಮರಗಳನ್ನು ಅಭಿವೃದ್ಧಿ ಹೆಸರಲ್ಲಿ ಕಡಿದಿರುವುದು ಆತಂಕ ಮೂಡಿಸಿದೆ. ಈ ಕ್ರಮವನ್ನು ಪರಿಸರ ಬಳಗ ತೀವ್ರವಾಗಿ ಖಂಡಿಸುತ್ತದೆ. ಮರಗಳನ್ನು ಉಳಿಸಿಕೊಂಡೇ ರಸ್ತೆ ಅಗಲೀಕರಣಕ್ಕೆ ಯೋಜನೆ ಮಾಡಬಹುದಾಗಿತ್ತು ಎಂದು ಹೇಳಿದ್ದಾರೆ.

ಈಗೀಗ ತಂತ್ರಜ್ಞಾನಗಳು ಬದಲಾಗಿದ್ದು, ಮರಗಳನ್ನು ಸ್ಥಳಾಂತರಿಸುವ ಅವಕಾಶಗಳು ಕೂಡ ಇದೆ. ಹೀಗಾಗಿ ರಸ್ತೆ ಅಗಲೀಕರಣದ ಸಮಯದಲ್ಲಿ ಮರಗಳನ್ನು ತೆರವು ಮಾಡುವುದು ಅಗತ್ಯವೇ ಆದರೆ ಒಂದಿಷ್ಟು ಮರಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬಹುದಿತ್ತು. ಸುಮಾರು ನೆಲವತ್ತಕ್ಕೂ ಹೆಚ್ಚು ಮರಗಳನ್ನು ನೆಲಸಮ ಮಾಡಲು ಆಧುನಿಕ ತಂತ್ರಜ್ಞಾನ ಬಳಸಿರುವ ಅಧಿಕಾರಿಗಳು, ಒಂದಿಷ್ಟು ಮರಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಕೂಡ ಯೋಚಿಸಬೇಕಿತ್ತು. ಏಕಾಏಕಿ ಇಷ್ಟು ವರ್ಷಗಳು ಬೆಳೆದು ನಿಂತಿದ್ದ ಮರಗಳನ್ನು ಕಡಿದು, ಈಗ ಗಿಡಗಳನ್ನು ನೆಡುತ್ತೇವೆ ಎಂದರೆ ಹೇಗೆ?.

ಮರಗಳನ್ನು ಕಡಿಯುವ ಮೊದಲು ಕೆಲವೊಂದಿಷ್ಟು ಬದಲಿ ಆಯ್ಕೆಗಳನ್ನು ಸಹ ಅಧಿಕಾರಿಗಳು ಯೋಚಿಸಬೇಕು ಎನ್ನುವುದು ಪರಿಸರ ಪ್ರಿಯರ ಆಗ್ರಹವಾಗಿದೆ. ಈ ಅದೇನೇ ಇದ್ದರೂ ಸುಮಾರು 50 ವರ್ಷ ಬೆಳೆದು ನೆರಳು ನೀಡುತಿದ್ದ ಬೃಹತ್‌ ಮರಗಳು ಧರೆಗುರುಳಿವೆ. ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಮಣಿದು ಕೂಡಲೇ ಹೊಸ ಸಸಿಗಳನ್ನು ನೆಟ್ಟು ಬೆಳೆಸುವ ಕೆಲಸವನ್ನು ಸಂಬಂಧಿಸಿದವರು ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+