ಲೋಕಸಭಾ ಚುನಾವಣೆ; ಮೈಸೂರು-ಕೊಡಗು ಕ್ಷೇತ್ರದಲ್ಲಿ 18 ಅಭ್ಯರ್ಥಿಗಳು ಅಖಾಡಕ್ಕೆ
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಉಮೇದುವಾರಿಕೆ ಸಲ್ಲಿಸಿದವರಲ್ಲಿ 6 ಮಂದಿ ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದಿದ್ದು, ಅಂತಿಮವಾಗಿ ಕಣದಲ್ಲಿ 18 ಅಭ್ಯರ್ಥಿಗಳು ಉಳಿದಿದ್ದಾರೆ.
ಕ್ಷೇತ್ರದಲ್ಲಿ 28 ಅಭ್ಯರ್ಥಿಗಳಿಂದ 37 ನಾಮಪತ್ರ ಸಲ್ಲಿಕೆಯಾಗಿತ್ತು. ಈ ಪೈಕಿ 4 ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರಗೊಂಡಿತ್ತು. ಇದೀಗ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಮುಕ್ತಾಯವಾಗಿದ್ದು, ಅರು ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ.

ನಾಮಪತ್ರ ಹಿಂಪಡೆದವರು
ಪಕ್ಷೇತರ ಅಭ್ಯರ್ಥಿಗಳಾದ ಮಹೇಶ್, ಎಸ್.ದೊರೆಸ್ವಾಮಿ ನಾಯಕ, ರಾಜಣ್ಣ ಶಿವನಂಜಯ್ಯ, ಶ್ರೀನಿವಾಸ್ ಬೋಗಾದಿ ಹಾಗೂ ಸಣ್ಣನಾಯಕ ನಾಮಪತ್ರ ವಾಪಸ್ ಪಡೆದಿದ್ದಾರೆ. ಅಂತಿಮ ಕಣದಲ್ಲಿ ನಾನಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರು ಸೇರಿದಂತೆ ಒಟ್ಟು 18 ಮಂದಿ ಇದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ಬಿಜೆಪಿ), ಎಂ.ಲಕ್ಷ್ಮಣ್ (ಕಾಂಗ್ರೆಸ್), ಟಿ.ಆರ್.ಸುನಿಲ್, (ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷ), ಎಂ.ಎಸ್ ಪ್ರವೀಣ್ (ಕರ್ನಾಟಕ ರಾಷ್ಟ್ರ ಸಮಿತಿ), ಎ.ಎಸ್. ಸತೀಶ್, (ಅಖಿಲ ಭಾರತ ಹಿಂದೂ ಮಹಾ ಸಭಾ), ಎಸ್.ಯಡಿಯೂರಪ್ಪ ರಾಜಕುಮಾರ್ (ಪಕ್ಷೇತರ), ಎಚ್.ಕೆ.ಕೃಷ್ಣ (ಕರುನಾಡು ಪಾರ್ಟಿ), ಜೆ.ಎಸ್. ಲೀಲಾವತಿ(ಉತ್ತಮ ಪ್ರಜಾಕೀಯ ಪಕ್ಷ), ಎಂ. ರಂಗಸ್ವಾಮಿ (ಪಕ್ಷೇತರ), ಎಂ.ರಾಮಮೂರ್ತಿ (ಪಕ್ಷೇತರ), ಎನ್.ಹರೀಶ್ (ಸೋಶಿಯಲಿಸ್ಟ್ ಪಾರ್ಟಿ), ಭಾರತೀಯ ರಾಷ್ಟ್ರೀಯ ಪಿ.ಕೆ.ದರ್ಶನ್ ಶೌರಿ (ಪಕ್ಷೇತರ), ರಾಜು (ಪಕ್ಷೇತರ), ಎಚ್.ಎಂ.ನಂಜುಂಡಸ್ವಾಮಿ (ಸಮಾಜವಾದಿ ಜನತಾ ಪಾರ್ಟಿ -ಕರ್ನಾಟಕ), ಎನ್.ಆಂಬರೀಷ್ (ಕರ್ನಾಟಕ ಜನತಾ ಪಕ್ಷ), ಎ.ಜಿ.ರಾಮಚಂದ್ರ ರಾವ್ (ಜಾತ್ಯತೀತ ಪ್ರಜಾಪ್ರಭುತ್ವ ಕಾಂಗ್ರೆಸ್), ಸಿ.ಜೆ.ಅಂಬೇಡ್ಕರ್ (ಪಕ್ಷೇತರ).
ಕಣದಲ್ಲಿ ಏಕೈಕ ಮಹಿಳಾ ಅಭ್ಯರ್ಥಿ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಕ್ಷೇತ್ರದಲ್ಲಿ ಒಬ್ಬರೇ ಮಹಿಳಾ ಅಭ್ಯರ್ಥಿ ಸ್ಪರ್ಧಿಸಿದ್ದಾರೆ. 18 ಅಭ್ಯರ್ಥಿಗಳ ಪೈಕಿ ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಸ್ಪರ್ಧಿಸಿರುವ ಲೀಲಾ ಶಿವಕುಮಾರ್ ಮಾತ್ರ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ಪುತ್ರಿ ರತ್ನಪ್ರಭಾ ಅರಸ್ 1991ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಏಕೈಕ ಮಹಿಳೆಯಾಗಿದ್ದಾರೆ.
ರಂಗೇರಿದ ಮೈಸೂರು-ಕೊಡಗು ಅಖಾಡ
ಇದೀಗ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಚುನಾವಣಾ ಕಣ ರಂಗೇರಿದ್ದು, ಪ್ರಮುಖ ಎರಡು ಪಕ್ಷಗಳ ನಾಯಕರು ಹಾಗೂ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಸತತ ಎರಡು ಬಾರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿರುವುದರಿಂದ ಕ್ಷೇತ್ರ ಉಳಿಸಿ ಕೊಳ್ಳಲು ಬಿಜೆಪಿ ನಾಯಕರು ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ಜೆಡಿಎಸ್ ನಾಯಕರು ಮತ್ತು ಕಾರ್ಯ ಕರ್ತರು ಸಾಥ್ ನೀಡುತ್ತಿದ್ದಾರೆ. ಇತ್ತ ಮುಖ್ಯ ಮಂತ್ರಿ ಸಿದ್ದರಾಮಯ್ಯ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಎಂದು ಪಣತೊಟ್ಟಿದ್ದಾರೆ.












Click it and Unblock the Notifications