ಸರಕಾರದಿಂದಲೇ ನಡೆಯುತ್ತಿದೆ ಖಾಸಗಿ ಮಿನರಲ್ ಬಾಟಲ್ ದಂಧೆ!
ಮೈಸೂರು,ಜೂನ್ 9: ಮಾಲ್ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಖನಿಜಯುಕ್ತ ನೀರಿನ ಬಾಟಲಿಗಳಿಗೆ ಗರಿಷ್ಠ ಮಾರಾಟ ದರ (ಎಂಆರ್ ಪಿ)ಕ್ಕಿಂತ ಹೆಚ್ಚು ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿರುವಾಗಲೇ ಸರ್ಕಾರಿ ಅಧಿಕಾರಿಗಳೇ ಹೆಚ್ಚು ದರ ನೀಡಿ ಖಾಸಗಿ ಕಂಪನಿಗಳ ಖನಿಜಯುಕ್ತ (ಮಿನರಲ್) ನೀರಿನ ಬಾಟಲಿಗಳನ್ನು ಖರೀದಿಸುತ್ತಿದ್ದಾರೆ.
ಹೌದು, ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಸರ್ಕಾರದ ಕೊಟ್ಟ ಮಾತು-ದಿಟ್ಟ ಸಾಧನೆ' ಮೈಸೂರು ವಿಭಾಗ ಮಟ್ಟದ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಕೂಡ ಖಾಸಗಿ ಕಂಪನಿಗಳ ನೀರಿನ ಬಾಟಲಿಗಳನ್ನೇ ಬಳಸಲಾಗಿತ್ತು. ಜಿಲ್ಲೆಯಲ್ಲಿ ನಡೆಯುವ ಸರ್ಕಾರಿ ಸಮಾರಂಭಗಳಲ್ಲಿ, ಜಿಪಂ ಸಭೆಯಲ್ಲಿ, ಮಹಾನಗರ ಪಾಲಿಕೆ ಸಭೆ, ತಾಪಂ ಸಭೆಯಲ್ಲಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಸಭೆಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ಕಂಪನಿಯ ಮಿನರಲ್ ವಾಟರ್ ಬಾಟಲಿಗಳನ್ನೇ ನೀಡಲಾಗುತ್ತಿದೆ. [ಮಾರುಕಟ್ಟೆಗೆ ಬರಲಿದೆ ಕೆಎಂಎಫ್ ಮಿನರಲ್ ವಾಟರ್]
ಅಷ್ಟೇ ಏಕೆ, ಬೆಂಗಳೂರಿನಲ್ಲಿ ವಿಧಾನಸೌಧ, ವಿಕಾಸಸೌಧ, ಮುಖ್ಯಮಂತಿಗಳ ಗೃಹ ಕಚೇರಿ, ಅಧಿಕೃತ ನಿವಾಸ ಮತ್ತಿತರ ಕಡೆ, ಸಭೆ, ಸಮಾರಂಭಗಳಲ್ಲಿ ವರ್ಷಕ್ಕೆ ಕನಿಷ್ಠ 1 ಲಕ್ಷದಷ್ಟು ಅರ್ಧ ಲೀಟರ್ ನೀರಿನ ಬಾಟಲ್ ಗಳ ಅಗತ್ಯವಿರುತ್ತದೆ. ಇದಕ್ಕಾಗಿ ಸರ್ಕಾರ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದೆ. ಖಾಸಗಿ ಕಂಪನಿಗಳ ನೀರಿನ ಬಾಟಲು ಅರ್ಧ ಲೀಟರ್ ಗೆ ಗರಿಷ್ಠ ಮಾರಾಟ ಬೆಲೆ 10 ರೂ., ಇದರ ಜತೆಗೆ ಸಾಗಣೆ ಮತ್ತು ಪೂರೈಕೆ ವೆಚ್ಚ, ಸೇವಾ ಶುಲ್ಕ ಸೇರಿ 11ರಿಂದ 12 ರೂ.ವರೆಗೂ ಸರ್ಕಾರದ ಇಲಾಖೆಗಳಿಂದ ಪಡೆಯಲಾಗುತ್ತಿದೆ.[ಕೆಎಂಎಫ್ ನಂದಿನಿಯಿಂದ ಮತ್ತೊಂದು ಜನಸ್ನೇಹಿ ಉತ್ಪನ್ನ]

ದುಬಾರಿ ಬೆಲೆಯ ನೀರೇ ಬೇಕು!
ಎಂಎಸ್‍ಐಎಲ್ (Mysore Sales International Limited) ನ ಕ್ಲಾಸ್ ಒನ್ ಬ್ರಾಂಡ್‍ನ ಅರ್ಧ ಲೀಟರ್ ಬೆಲೆ (ಸಗಟು) 4.87 ರೂ. ಇದರ ಗರಿಷ್ಠ ಮಾರಾಟ ದರ 10 ರೂ. ಇದ್ದರೂ ಎಂಎಸ್‍ಐಎಲ್ ನಿಂದಲೇ ನೇರವಾಗಿ ಖರೀದಿಸಿದರೆ ಸಾಗಣೆ ವೆಚ್ಚ ಸೇರಿ 5 ರೂ.ಗೆ ಅರ್ಧ ಲೀಟರ್ ನೀರು ಲಭ್ಯ. ಆದರೆ ಸರ್ಕಾರದ ವಿವಿಧ ಇಲಾಖೆ ಗಳು ಅಗ್ಗದ ದರದಲ್ಲಿ ಸಿಗುವ ನೀರು ಬಿಟ್ಟು, ಹೆಚ್ಚಿನ ದರದಲ್ಲಿ ದೊರೆಯುವ ಖಾಸಗಿ ಕಂಪನಿಗಳ ನೀರಿನ ಬಾಟಲುಗಳನ್ನೇ ಖರೀದಿ ಮಾಡುತ್ತಿವೆ.

ವಿಧಾನ ಸೌಧದಲ್ಲೂ ಇದೇ ನೀರು
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಸಹಿತ ಪ್ರಮುಖ ಸಭೆ, ಸಮಾರಂಭಗಳಿಗೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಊಟ-ತಿಂಡಿ, ನೀರು ಪೂರೈಕೆ ಮಾಡುತ್ತದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ಇದ್ದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬಾಬ್ತಿನಲ್ಲಿ ನೀರು ಪೂರೈಕೆ ಮಾಡಲಾಗುತ್ತದೆ.

ಅಧಿವೇಶನದ ಸಮಯದಲ್ಲಿ
ಅಧಿವೇಶನ ಸಂದರ್ಭದಲ್ಲಿ ಸಚಿವಾಲಯದಿಂದ ವ್ಯವಸ್ಥೆ ಮಾಡಲಾಗುತ್ತದೆ. ಅದೇ ರೀತಿ ಬೇರೆ ಬೇರೆ ಇಲಾಖೆಗಳು ಹಾಗೂ ಸಚಿವರ ಕೊಠಡಿಗಳಲ್ಲಿ ನಡೆಯುವ ಸಭೆಗಳಿಗೆ ಆಯಾಯ ಇಲಾಖೆಯಿಂದ ನೀರು ಖರೀದಿಸಲಾಗುತ್ತಿದೆ.

ಐಷಾರಾಮಿ ಬಸ್ ನಲ್ಲಷ್ಟೇ ಎಂಎಸ್‍ಐಎಲ್ ಬಾಟಲ್
ಇತ್ತೀಚೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಐಷಾರಾಮಿ ಬಸ್ಸುಗಳಲ್ಲಿ ನೀರಿನ ಬಾಟಲಿಗಳನ್ನು ಕೊಡುವ ವ್ಯವಸ್ಥೆ ಪುನರಾರಂಭಿಸಿದ್ದು, ಇಲ್ಲಿ ಎಂಎಸ್‍ಐಎಲ್ ನ ಮಿನರಲ್ ವಾಟರ್ ಬಾಟಲಿಗಳನ್ನೇ ನೀಡುತ್ತಿರುವುದು ಸಮಾಧಾನದ ಸಂಗತಿ. ಇನ್ನಾದ್ರೂ ಸರಕಾರ ಇತ್ತಗಮನ ಹರಿಸಲಿ ಎಂಬುದು ನಮ್ಮ ಅಭಿಲಾಷೆ.












Click it and Unblock the Notifications