ಮೈಲ್ಯಾಂಗ್ ಆಡಿಯೋ ಸ್ಟೋರಿ ಚಾಲೆಂಜ್: ಇಲ್ಲಿದೆ ಸ್ಪರ್ಧೆಯ ಸಂಪೂರ್ಣ ವಿವರ
ಬೆಂಗಳೂರು, ಜುಲೈ 17: ಹೊಸ ಓದುಗರನ್ನು ಆಡಿಯೋ ಮೂಲಕ ಓದಿನತ್ತ ತರುವ ಒಂದು ಕಮ್ಯೂನಿಟಿ ಪ್ರಾಡಕ್ಟ್ ಆಗಿ "ಮೈಲ್ಯಾಂಗ್ ಆಡಿಯೋ" ಅನ್ನು ಮೈಲ್ಯಾಂಗ್ ಸಂಸ್ಥೆ ಹೊರ ತಂದಿದೆ. ಇದು ಕತೆಗಾರರನ್ನು, ದನಿ ಕಲಾವಿದರನ್ನು ಬೆಸೆದು ಆಡಿಯೋ ಕತೆಗಳ ಮಾಧ್ಯಮವನ್ನು ಬಳಸಿ ಹೊಸ ಓದುಗರನ್ನು ಕೇಳುವಿಕೆಯ ಮೂಲಕ ಕನ್ನಡ ಓದಿನತ್ತ ತರುವ ಗುರಿ ಹೊಂದಿದೆ.
"ಮೈಲ್ಯಾಂಗ್ ಆಡಿಯೋ" ಅಪ್ಲಿಕೇಶನ್ ಅಲ್ಲಿ ನೂರಾರು ಕತೆಗಾರರು ಮತ್ತು ಕಥಾ ವಾಚಕರು ಈಗ ದಿನವೂ ಹೊಸ ಕತೆಗಳನ್ನು ಆಡಿಯೋ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಒಂದು ಪ್ರಬಲವಾದ ಸಮುದಾಯ ಇಲ್ಲಿ ನೆಲೆಗೊಳ್ಳುತ್ತಿದೆ. ಈ ನೆಲೆಯನ್ನು ಇನ್ನಷ್ಟು ಹಿಗ್ಗಿಸುವ ಪ್ರಯತ್ನವಾಗಿ ಮೈಲ್ಯಾಂಗ್ ಸಂಸ್ಥೆ ಇದೇ ಮೊದಲ ಬಾರಿ ಆಡಿಯೋ ಸ್ಟೋರಿ ಚಾಲೆಂಜ್ ಒಂದನ್ನು ಕನ್ನಡದಲ್ಲಿ ಹಮ್ಮಿಕೊಂಡಿದ್ದು, ಕೇಳುಗರ ಅತೀ ಹೆಚ್ಚು ಮನ್ನಣೆ ಪಡೆಯುವ ಕತೆಗೆ 10,000 ರೂಪಾಯಿಗಳ ಬಹುಮಾನವನ್ನು ಘೋಷಿಸಿದೆ.

ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗಿರುವ ಯುವ ಕನ್ನಡಿಗರನ್ನು ಕನ್ನಡ ಓದಿನತ್ತ ಸೆಳೆಯುವ ಉದ್ದೇಶದಿಂದ ಮೈಲ್ಯಾಂಗ್ ಸಂಸ್ಥೆ ಕನ್ನಡದ ಮೊಟ್ಟ ಮೊದಲ ಆಡಿಯೋ ಸ್ಟೋರಿ ಚಾಲೆಂಜ್ ಅನ್ನು ಜುಲೈ 16ರಿಂದ ಜುಲೈ 25ರವರೆಗೆ ಮೈಲ್ಯಾಂಗ್ ಆಡಿಯೋ ಅಪ್ಲಿಕೇಶನ್ ಅಲ್ಲಿ ಹಮ್ಮಿಕೊಂಡಿದೆ. ಇದರಡಿ ಲೇಖಕರು ತಮ್ಮ ಕತೆಯನ್ನು ಆ್ಯಪ್‍ನಲ್ಲಿ ಪ್ರಕಟಿಸಿ, ತಾವೇ ವಾಚಿಸಬಹುದು ಇಲ್ಲವೇ ಗೆಳೆಯರನ್ನೂ ಆಹ್ವಾನಿಸಬಹುದಾಗಿದೆ.
ಕಥಾ ವಾಚಕರು ತಮ್ಮ ಇಷ್ಟದ ಕತೆಯನ್ನು ಆಯ್ದುಕೊಂಡು ವಾಚಿಸಿ, ಪ್ರಕಟಿಸಬಹುದು. ಸ್ಪರ್ಧೆಯ ಕೊನೆಯಲ್ಲಿ ಯಾವ ಆಡಿಯೋ ಕತೆಗೆ ಅತೀ ಹೆಚ್ಚು ಪ್ಲೇ-ಕೌಂಟ್ ದೊರೆಯುತ್ತದೆಯೋ ಆ ಕತೆಗೆ 10,000 ರೂಪಾಯಿ ಬಹುಮಾನ ದೊರೆಯಲಿದ್ದು, ಕನ್ನಡದ ಕತೆಗಾರರು ಮತ್ತು ಕಥಾ ವಾಚಕರು www.mylangaudio.in/kn/challenge ಕೊಂಡಿಯಲ್ಲಿ ಹೆಚ್ಚಿನ ವಿವರಗಳನ್ನು ಪಡೆಯುವಂತೆ ಎಂದು ಮೈಲ್ಯಾಂಗ್ ಸಂಸ್ಥೆ ಮನವಿ ಮಾಡಿಕೊಂಡಿದೆ.












Click it and Unblock the Notifications