ಮುಂಬೈನಲ್ಲಿ ಕಳೆದ 12 ವರ್ಷಗಳಲ್ಲೇ ದಾಖಲೆ ಮಳೆ

Posted By:
Subscribe to Oneindia Kannada

ಮುಂಬೈ, ಆಗಸ್ಟ್ 29: ಕಳೆದ 12 ವರ್ಷಗಳಲ್ಲೇ ಸುರಿಯದಿರುವಷ್ಟು ದೊಡ್ಡ ಮಳೆಗೆ ಸಿಲುಕಿರುವ ಮುಂಬೈ ಮಹಾ ನಗರ, ಅಕ್ಷರಶಃ ತೊಯ್ದು ತೊಪ್ಪೆಯಾಗಿದೆಯಲ್ಲದೆ, ಜನ ಸಾಮಾನ್ಯರ ಬದುಕನ್ನು ಭಾರೀ ಮಟ್ಟದಲ್ಲಿ ಅಸ್ತವ್ಯಸ್ತಗೊಳಿಸಿದೆ.

ಇಡೀ ಮುಂಬೈನಲ್ಲಿ ಎಲ್ಲಿ ನೋಡಿದರೂ ನೀರೋ ನೀರು ಎಂಬಂತಾಗಿದೆ. ಮುಂಬೈ ನಗರ ಪ್ರವಾಹಕ್ಕೆ ಸಿಲುಕಿದೆ ಎಂಬಂತೆ ಗೋಚರಿಸುತ್ತಿದೆ. ಇಷ್ಟು ಪ್ರಮಾಣದಲ್ಲಿ ನೀರು ನಿಂತಿರುವುದನ್ನು ನೋಡಿದರೆ, ಟೈಫೂನ್ ಚಂಡಮಾರುತದ ಗಾಢವಾದ ಪರಿಣಾಮಗಳು ನೆನಪಾಗುತ್ತಿವೆ.

ಮಡಿಕೇರಿ, ಆಗುಂಬೆ ಸೇರಿ ರಾಜ್ಯಾದ್ಯಂತ ಧಾರಾಕಾರ ಮಳೆ

ರಸ್ತೆಗಳಲ್ಲಿ ಅಗಾಧ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ಬಸ್, ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ನೀರಿನಲ್ಲಿ ಭಾಗಶಃ ಮುಳುಗಿ ನಿಂತ ವಾಹನಗಳು, ಉದ್ದುದ್ದ ಟ್ರಾಫಿಕ್ ಜಾಮ್ ಗಳು ಕಂಡುಬರುತ್ತಿವೆ.

ಪ್ರಮುಖ ಪ್ರಾಂತ್ಯಗಳು ಜಲಾವೃತ

ಪ್ರಮುಖ ಪ್ರಾಂತ್ಯಗಳು ಜಲಾವೃತ

ವಾಣಿಜ್ಯ ನಗರದ ಪ್ರಮುಖ ಪ್ರಾಂತ್ಯಗಳಾದ ಸಿಯಾನ್, ದಾದರ್, ಕೇಂದ್ರೀಯ ಮುಂಬೈ, ಕುರ್ಲಾ, ಅಂಧೇರಿ ಮುಂತಾದ ಕಡೆ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡಿದೆ.

ನಿವಾಸಿಗಳ ನಿದ್ದೆಗೆಡಿಸಿದ ಮಳೆ

ನಿವಾಸಿಗಳ ನಿದ್ದೆಗೆಡಿಸಿದ ಮಳೆ

ಅಗಾಧ ಮಳೆ ಬಂದಾಗ ಎಲ್ಲಾ ನಗರಗಳಲ್ಲಿ ಆಗುವಂತೆ ಮುಂಬೈನಲ್ಲಿಯೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳ ನಿದ್ದೆಗೆಡಿಸಿದೆ ಈ ಮಳೆ. ಅಲ್ಲಿನ ಮನೆಗಳಿಗೆ ನೀರು ನುಗ್ಗಿರುವುದರಿಂದ ಅಲ್ಲಿನ ನಿವಾಸಿಗಳ ಬಾಳು ಗೋಳು ಎಂಬಂತಾಗಿದೆ.

ಅಗತ್ಯ ವಸ್ತುಗಳಿಗಾಗಿ ಪರದಾಟ

ಅಗತ್ಯ ವಸ್ತುಗಳಿಗಾಗಿ ಪರದಾಟ

ಕಳೆದ 12 ಗಂಟೆಗಳಿಂದಲೂ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲಿಯೂ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಜನರಿಗೆ ನಿತ್ಯ ಬಳಕೆಗೆ ಬೇಕಾದ ಹಾಲು, ತರಕಾರಿ ಸಿಗದೇ ಪರದಾಡುವಂತಾಗಿದೆ. ದೂರದ ಅಂಗಡಿಗೋ, ಮಾರುಕಟ್ಟೆಗೋ ಹೋಗಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬರಲೂ ಸಾಧ್ಯವಾಗುತ್ತಿಲ್ಲ. ರಸ್ತೆಯಲ್ಲಿ ಸೊಂಟದವರೆಗೆ ನಿಂತ ನೀರು ಇದಕ್ಕೆ ಅಡ್ಡಿ ಪಡಿಸುತ್ತಿದೆ. ಅಲ್ಲದೆ, ತರಕಾರಿ, ಸೊಪ್ಪು, ಹಣ್ಣು, ಹಂಪಲು ಸಿಗುವ ಮಾರುಕಟ್ಟೆಗಳು ಮಳೆಯಿಂದಾಗಿ ಬಿಕೋ ಎನ್ನುತ್ತಿವೆ. ಹಾಲಿನ ಟ್ರಕ್ ಗಳ ಪೂರೈಕೆಯಲ್ಲೂ ಅಸ್ತವ್ಯಸ್ತವಾಗಿದೆ.

ಎಲ್ಲೆಡೆಯೂ ಅಸ್ವಚ್ಛತೆ

ಎಲ್ಲೆಡೆಯೂ ಅಸ್ವಚ್ಛತೆ

ಅಗಾಧವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಜನರು ಅನೇಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಭೀತಿ ಎದುರಾಗಿದೆ. ತಗ್ಗು ಪ್ರದೇಶಗಳಿಗೆ ನುಗ್ಗುತ್ತಿರುವ ಕೊಳಚೆ ನೀರು, ಕುಡಿಯುವ ನೀರಿನೊಂದಿಗೆ ಮಿಶ್ರವಾಗುತ್ತಿರುವ ಮಳೆ ನೀರು - ಈ ಎಲ್ಲವೂ ಜನರನ್ನು ಹೈರಾಣಾಸಿವೆ.

ಇನ್ನೂ 24 ಗಂಟೆ ಸುರಿಯಲಿದೆ ಮಳೆ

ಇನ್ನೂ 24 ಗಂಟೆ ಸುರಿಯಲಿದೆ ಮಳೆ

ಹವಾಮಾನ ಇಲಾಖೆಯ ಪ್ರಕಾರ, ಮುಂಬೈನಲ್ಲಿ ಸುರಿಯುತ್ತಿರುವ ಈ ಧಾರಾಕಾರ ಮಳೆಯು ಮುಂದಿನ 24 ಗಂಟೆಯವರೆಗೂ ಮುಂದುವರಿಯಲಿದೆ. ಇಲಾಖೆಯ ಈ ಮಾಹಿತಿಯು ಈಗಾಗಲೇ ಗಾಬರಿಗೊಂಡಿರುವ ಮುಂಬೈ ನಾಗರಿಕರನ್ನು ಮತ್ತಷ್ಟು ಚಿಂತೆಗೀಡುಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mumbai is bracing for what weather officials believe could be the heaviest and longest bout of rain since July 26, 2005, when the city was paralysed by floods.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X