Breaking; ಮಹಾ ರಾಜಕೀಯ; ಮತ್ತೆ 3 ಶಿವಸೇನೆ ಶಾಸಕರು ಗುವಾಹಟಿಗೆ
ಮುಂಬೈ, ಜೂನ್ 23; ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಗುರುವಾರವೂ ಮುಂದುವರೆದಿದೆ. ಏಕನಾಥ ಶಿಂಧೆ ನೇತೃತ್ವದ ಗುಂಪಿಗೆ ಮತ್ತೆ ಮೂವರು ಶಿವಸೇನೆ ಶಾಸಕರು ಸೇರ್ಪಡೆಗೊಂಡಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಶಾಸಕರು ಅಸ್ಸಾಂ ರಾಜ್ಯದ ಗುವಾಹಟಿಯ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಗುರುವಾರ ಬೆಳಗ್ಗೆ ಮೂವರು ಶಿವಸೇನೆ ಶಾಸಕರು ಬಂಡಾಯ ಶಾಸಕರು ಇರುವ ಹೋಟೆಲ್ ತಲುಪಿದ್ದಾರೆ. ಏಕನಾಥ ಶಿಂಧೆ ನೇತೃತ್ವದ ಗುಂಪಿನಲ್ಲಿ ಸುಮಾರು 40 ಶಾಸಕರು ಇದ್ದಾರೆ ಎಂದು ಅಂದಾಜಿಸಲಾಗಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ತಾವು ರಾಜೀನಾಮೆ ನೀಡಲು ಸಿದ್ಧ ಎಂದು ಘೋಷಣೆ ಮಾಡಿದ್ದರು. ರಾತ್ರಿ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ತೊರೆದು ಖಾಸಗಿ ನಿವಾಸ ಮಾತೋಶ್ರೀಗೆ ಅವರು ಸ್ಥಳಾಂತರಗೊಂಡಿದ್ದಾರೆ.
ಏಕನಾಥ ಶಿಂಧೆ ನೇತೃತ್ವದ ಗುಂಪಿನ ಬಂಡಾಯ ಶಾಸಕರು ಮಹಾರಾಷ್ಟ್ರ ರಾಜ್ಯಪಾಲರಿಗೆ ಪತ್ರವೊಂದನ್ನು ಬರೆದಿದ್ದಾರೆ. ಏಕನಾಥ ಶಿಂಧೆ ಶಿವಸೇನೆ ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರೆಯಬೇಕು ಎಂದು ಪತ್ರದಲ್ಲಿ ತಿಳಿಸಿದ್ದು, ಸಹಿ ಹಾಕಿದ್ದಾರೆ.
ಸೋಮವಾರ ನಡೆದ ವಿಧಾನ ಪರಿಷತ್ ಚುನಾವಣೆ ನಡೆದ ಬಳಿಕ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರ ಬಿಕ್ಕಟ್ಟಿಗೆ ಸಿಲುಕಿದೆ. ಸರ್ಕಾರದ ವಿರುದ್ಧ ಶಿವಸೇನೆಯ ಶಾಸಕರೇ ಬಂಡಾಯ ಎದ್ದಿದ್ದಾರೆ.
ಶಾಸಕರ ಬೇಡಿಕೆ ಏನು?; ಶಿವಸೇನೆಯ ಶಾಸಕರು ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದು ಏಕೆ? ಎಂಬುದು ಪ್ರಶ್ನೆ. ಏಕನಾಥ ಶಿಂಧೆ, "ಮಹಾವಿಕಾಸ್ ಅಘಾಡಿ ಒಕ್ಕೂಟವು ಅಸಹಜ ಮೈತ್ರಿಯಾಗಿದೆ" ಎಂದು ಹೇಳಿದ್ದಾರೆ.
"ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗಿನ ಒಕ್ಕೂಟದಿಂದ ಹೊರ ನಡೆಯುವುದು ನಮ್ಮ ಪಕ್ಷ ಮತ್ತು ಕಾರ್ಯಕರ್ತರಿಗೆ ಅನಿವಾರ್ಯವಾಗಿದೆ" ಎಂದು ಏಕನಾಥ ಶಿಂಧೆ ಹೇಳಿದ್ದು, ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications