ಸುಶಾಂತ್ ಸಿಂಗ್ ಆತ್ಮಹತ್ಯೆ: ಪೊಲೀಸರ ಮುಂದೆ ಹಾಜರಾದ ಸಂಜಯ್ ಲೀಲಾ ಬನ್ಸಾಲಿ
ಮುಂಬೈ, ಜುಲೈ 6: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಇಂದು ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ಬನ್ಸಾಲಿಗೆ ಮುಂಬೈ ಪೊಲೀಸರು ನೋಟಿಸ್ ನೀಡಿದ್ದರು. ಹೀಗಾಗಿ, ಇಂದು ಮಧ್ಯಾಹ್ನ 12.30ರ ಸಮಯಕ್ಕೆ ಬನ್ಸಾಲಿ ಪೊಲೀಸ್ ಠಾಣೆಗೆ ಆಗಮಿಸಿದರು.
ಬನ್ಸಾಲಿ ಜೊತೆ ವಕೀಲ ಹಾಗೂ ಇಬ್ಬರು ಸಿಬ್ಬಂದಿ ಸಹ ಜೊತೆಯಲ್ಲಿ ಬಂದಿದ್ದರು. ರಜನಪೂತ್ ಜೊತೆ ಸಿನಿಮಾಗೆ ಸಂಬಂಧಪಟ್ಟಂತೆ ಒಪ್ಪಂದ ಮಾಡಿಕೊಂಡಿದ್ದರು. ಹಾಗಾಗಿ, ಸುಶಾಂತ್ ಮತ್ತು ಬನ್ಸಾಲಿ ನಡುವೆ ವ್ಯವಹಾರದ ಕುರಿತು ವಿವರಣೆ ಪಡೆಯಲಿದ್ದಾರೆ.

ಈಗಾಗಲೇ ಸುಶಾಂತ್ ಸಿಂಗ್ ಆತ್ಮಹತ್ಯೆ ಕೇಸ್‌ನಲ್ಲಿ 30 ಜನರನ್ನು ವಿಚಾರಣೆ ಮಾಡಲಾಗಿದೆ. ಸುಶಾಂತ್ ಕುಟುಂಬಸ್ಥರು, ಗೆಳತಿ ರಿಯಾ ಚಕ್ರವರ್ತಿ, ಕಾಸ್ಟಿಂಗ್ ನಿರ್ದೇಶಕ ಮುಖೇಶ್, ಯಶ್ ರಾಜ್ ಬ್ಯಾನರ್ ನ ಕಾಸ್ಟಿಂಗ್ ನಿರ್ದೇಶಕ ಸೇರಿಸಂತೆ ಹಲವರ ಹೇಳಿಕೆ ಪಡೆಯಲಾಗಿದೆ.
ಅಂದ್ಹಾಗೆ, ಸುಶಾಂತ್ ಸಿಂಗ್ ಜೂನ್ 14 ರಂದು ಬಾಂದ್ರಾದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಾಥಮಿಕ ವರದಿ ಹಾಗೂ ಮರಣೋತ್ತರ ಪರೀಕ್ಷೆಯಲ್ಲಿ ಆತ್ಮಹತ್ಯೆ ಎಂದು ತಿಳಿದು ಬಂದಿದೆ. ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿರುವ ಕಾರಣ ಬಾಲಿವುಡ್ ಸೆಲೆಬ್ರಿಟಿಗಳು ವಿಚಾರಣೆ ಮಾಡಲಾಗುತ್ತಿದೆ.
ಇನ್ನು ಸುಶಾಂತ್ ಸಾವಿನ ಹಿನ್ನೆಲೆ ಪಾಟ್ನಾದ ನ್ಯಾಯಾಲಯದಲ್ಲಿ ಸಲ್ಮಾನ್ ಖಾನ್, ಸಂಜಯ್ ಲೀಲಾ ಬನ್ಸಾಲಿ, ಕರಣ್ ಜೋಹರ್ ಸೇರಿದಂತೆ ಹಲವು ಜನರ ಮೇಲೆ ಕೇಸ್ ದಾಖಲಾಗಿದೆ. ನಟಿ ಹಾಗೂ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ವಿರುದ್ಧವೂ ದೂರು ದಾಖಲಾಗಿದೆ.












Click it and Unblock the Notifications