ಕರ್ನಾಟಕದ ವಲಸೆ ಕಾರ್ಮಿಕರ ಪಾಲಿಗೆ ಹೀರೋ ಆದ ಖಳನಾಯಕ ಸೋನು ಸೂದ್
ಮುಂಬೈ, ಮೇ 11: ಕರ್ನಾಟಕದ ವಲಸೆ ಕಾರ್ಮಿಕರ ಪಾಲಿಗೆ ಖಳನಾಯಕ ಸೋನು ಸೂದ್ ಹೀರೋ ಆಗಿದ್ದಾರೆ. ಮುಂಬೈನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕನ್ನಡದ ವಲಸೆ ಕಾರ್ಮಿಕರಿಗೆ ಸೋನು ಸೂದ್ ನೆರವಾಗಿದ್ದಾರೆ.
ಲಾಕ್‌ಡೌನ್‌ನಿಂದ ವಲಸೆ ಕಾರ್ಮಿಕರು ಬೇರೆ ಬೇರೆ ರಾಜ್ಯಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇದೀಗ ಅವರನ್ನು ಗೂಡು ಸೇರಿಸುವ ಪ್ರಯತ್ನದಲ್ಲಿ ಸರ್ಕಾರ ನಿರತವಾಗಿದೆ. ಅದೇ ರೀತಿ ಕರ್ನಾಟಕದ ಸಾಕಷ್ಟು ವಲಸೆ ಕಾರ್ಮಿಕರು ಮುಂಬೈನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.
ಸರ್ಕಾರ ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ನಟ ಸೋನು ಸೂದ್ ಸಹ ಕೈ ಜೋಡಿಸಿದ್ದಾರೆ. ಮುಂಬೈನಿಂದ ಕಲಬುರಗಿಗೆ ಬರಬೇಕಿದ್ದ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ. ಬಸ್ ವ್ಯವಸ್ಥೆಯ ಜೊತೆಗೆ ಅವರಿಗೆ ಊಟವನ್ನು ಸಹ ನೀಡಿದ್ದಾರೆ.

ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ
ಸೋನು ಸೂದ್ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರ ಅನುಮತಿ ಪಡೆದು, ವಲಸೆ ಕಾರ್ಮಿಕರನ್ನು ಬಸ್‌ನಲ್ಲಿ ಕರ್ನಾಟಕಕ್ಕೆ ಕಳುಹಿಸಿದ್ದಾರೆ. 10 ಬಸ್‌ಗಳಲ್ಲಿ ಕಾರ್ಮಿಕರು ಮುಂಬೈನಿಂದ ಕಲಬುರಗಿಗೆ ಬರುತ್ತಿದ್ದಾರೆ. ಸೋಮವಾರ ಬಸ್‌ಗಳು ಮಹಾರಾಷ್ಟ್ರದಿಂದ ಹೊರಟಿವೆ. ಬಸ್ ವ್ಯವಸ್ಥೆಯ ಜೊತೆಗೆ ಊಟ ವ್ಯವಸ್ಥೆಯನ್ನು ಸೋನು ಸೂದ್ ಮಾಡಿದ್ದಾರೆ.

ಕುಟುಂಬದೊಂದಿಗೆ ಇರಲು ಅರ್ಹರು
ಈ ಬಗ್ಗೆ ಮಾತನಾಡಿರುವ ಸೋನು ಸೂದ್ ''ವಲಸಿಗರು ಪುಟ್ಟ ಮಕ್ಕಳು ಮತ್ತು ವೃದ್ಧ ಪೋಷಕರೊಂದಿಗೆ ರಸ್ತೆಗಳಲ್ಲಿ ನಡೆದುಕೊಂಡು ಹೋಗುವುದನ್ನು ನೋಡಿ ನೊವಾಯಿತು. ಈ ಸಮಯದಲ್ಲಿ ಪ್ರತಿಯೊಬ್ಬ ಭಾರತೀಯರು ತಮ್ಮ ಕುಟುಂಬಗಳು ಮತ್ತು ಆತ್ಮೀಯರೊಂದಿಗೆ ಇರಲು ಅರ್ಹರು'' ಎಂದಿದ್ದಾರೆ. ಊರು ಬಿಟ್ಟು ಬಂದವರನ್ನು ಊರಿಗೆ ಸೇರಿಸಿದ್ದಾರೆ.

ಸೋನು ಸಹಾಯ ಹಸ್ತ
ಸೋನು ಸೂದ್ ಕೊರೊನಾ ವೈರಸ್ ಸಮಯದಲ್ಲಿ ತಮ್ಮ ಕೈಲಾದ ನೆರವು ನೀಡಿದ್ದಾರೆ. ಈಗಾಗಲೇ ಸೋನು ಸೂದ್ ಪಂಜಾಬ್‌ನಲ್ಲಿ 1,500 PPEಗಳನ್ನು ವೈದ್ಯರಿಗೆ ನೀಡಿದ್ದಾರೆ. ತಮ್ಮ ಮುಂಬೈ ಹೋಟೆಲ್‌ನಲ್ಲಿ ವೈದ್ಯರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ. ಇತರ ರಾಜ್ಯಗಳ ವಲಸೆ ಕಾರ್ಮಿಕರಿಗೂ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

ಸೋನು ಸೂದ್ ಹಾಗೂ ಕನ್ನಡ ಸಿನಿಮಾ
ಸೋನು ಸೂದ್ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹೊಸಬರಲ್ಲ. ಹಿಂದಿ, ತಮಿಳು, ತೆಲುಗು, ಪಂಜಾಬಿ ರೀತಿ ಅವರು ಕನ್ನಡದಲ್ಲಿಯೂ ನಟಿಸಿದ್ದಾರೆ. ಸುದೀಪ್‌ರೊಂದಿಗೆ 'ವಿಷ್ಣುವರ್ಧನ' ಹಾಗೂ ದರ್ಶನ್‌ರೊಂದಿಗೆ 'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ವರ್ಷ ಮೂರು ಬೇರೆ ಸಿನಿಮಾಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.












Click it and Unblock the Notifications