Breaking : ಶಿವಸೇನೆ ನಾಯಕನ ಮೇಲೆ ಹಲ್ಲೆ, ಇಬ್ಬರ ಬಂಧನ
ಮುಂಬೈ, ಜುಲೈ 21: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ನಾಯಕರೊಬ್ಬರ ಮೇಲೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಇಬ್ಬರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಿವಸೇನೆಯ ಕಲ್ಯಾಣ್ ನಗರ ಘಟಕದ ಉಪ ಮುಖ್ಯಸ್ಥ ಹರ್ಷವರ್ಧನ್ ಪಲಾಂಡೆ ಮೇಲೆ ಬುಧವಾರ ದಾಳಿ ನಡೆದಿದ್ದು, ಗಾಯಗೊಂಡಿರುವ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕಲ್ಯಾಣ್ ಪೂರ್ವದ ಪುಣೆ ಲಿಂಕ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ನಾಲ್ಕೈದು ಮಂದಿ ಕಾರಿನಲ್ಲಿ ಬಂದು ಹರ್ಷವರ್ಧನ್ ಪಲಾಂಡೆ ಮೇಲೆ ದೊಣ್ಣೆ, ಕಬ್ಬಿಣದ ರಾಡ್ ಮತ್ತು ಚಾಕುಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಕೊಲ್ಸೆವಾಡಿ ಪೊಲೀಸರು ಗುರುವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆರೋಪಿಗಳ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323, 324 , 504, 506 ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪುತ್ರ, ಕಲ್ಯಾಣ್ ಲೋಕಸಭಾ ಸದಸ್ಯ ಶ್ರೀಕಾಂತ್ ಶಿಂಧೆ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಆರೋಗ್ಯವನ್ನು ವಿಚಾರಿಸಲು ಕರೆ ಮಾಡಿದ್ದಾರೆ ಎಂದು ಗಾಯಾಳು ಹರ್ಷವರ್ಧನ್ ಪಲಾಂಡೆ ಸುದ್ದಿಗಾರರಿಗೆ ತಿಳಿಸಿದರು.
ಜೊತೆಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವನ್ನು ಬೆಂಬಲಿಸುತ್ತಿರುವ ಮಾಜಿ ಕಾರ್ಪೊರೇಟರ್‌ನ ಕೆಲವು ಸಹಚರರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆದರೆ, ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲ, ಯಾರೇ ಆಗಲಿ ತನ್ನ ಮಾನಹಾನಿ ಮಾಡಲು ಯತ್ನಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಕಾರ್ಪೋರೇಟರ್ ಹೇಳಿದ್ದಾರೆ.












Click it and Unblock the Notifications