ಮದ್ಯಕ್ಕೆ ಮಾನಿನಿಯರ ಹೆಸರಿಟ್ಟರೆ ಸೇಲ್ಸ್ ಜೋರಾಗತ್ತೆ!
ಮುಂಬೈ, ನವೆಂಬರ್ 06: ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಸಚಿವ ಗಿರೀಶ್ ಮಹಾಜನ್ ಅವರು ನೀಡಿರುವ ಸಲಹೆ ಕೇಳಿ ಎಲ್ಲರ ಹುಬ್ಬೇರಿದೆ. ಮದ್ಯ ಮತ್ತು ಯಾವುದೇ ಉತ್ಪನ್ನದ ಮಾರಾಟ ಹೆಚ್ಚಾಗಬೇಕಾದರೆ ಉತ್ಪನ್ನಗಳಿಗೆ ಮಹಿಳೆಯರ ಹೆಸರಿಡಬೇಕು ಎಂದು ಸಲಹೆ ನೀಡಿದ್ದಾರೆ.
ಗಿರೀಶ್ ಮಹಾಜನ್ ಅವರು ನಂದೂರ್ಬಾರ್ ಜಿಲ್ಲೆಯ ಸಕ್ಕರೆ ಕಾರ್ಖಾನೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, 'ನಿಮ್ಮ ಕಂಪನಿಯ ಮದ್ಯದ ಬ್ರಾಂಡ್ ಹೆಸರನ್ನು ಮಹಾರಾಜ ಎಂಬುದರ ಬದಲು ಮಹಾರಾಣಿ ಎಂದು ಬದಲಿಸಿ. ಹೆಸರು ಬದಲಿಸಿದ ನಂತರ ಖಂಡಿತವಾಗಿಯೂ ಮದ್ಯದ ಮಾರಾಟ ಹೆಚ್ಚಾಗಲಿದೆ' ಎಂದರು.

ಕೋಲ್ಹಾಪುರ, ಸಾಂಗ್ಲಿಯಲ್ಲಿರುವ ಕಾರ್ಖಾನೆಗಳು ತಮ್ಮ ಮದ್ಯದ ಬ್ರ್ಯಾಂಡ್ ಗಳಿಗೆ ಜ್ಯೂಲಿ, ಭಿಂಗಾರಿ, ಬಾಬ್ಬಿ ಎಂಬ ಹೆಸರಿಟ್ಟು ಒಳ್ಳೆ ವ್ಯಾಪಾರ ಮಾಡಿರುವುದನ್ನು ಉದಾಹರಿಸಿದರು.
ತಂಬಾಕು ಉತ್ಪನ್ನಗಳಿಗೂ ಕೂಡಾ ಹೀಗೆ ಮಾಡಿ ಎಂದಿದ್ದಾರೆ. ಸಚಿವರ ಹೇಳಿಕೆಯನ್ನು ಮಹಿಳಾ ಪರ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು, ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಕೋರಿವೆ. ಸಾಮಾಜಿಕ ಕಾರ್ಯಕರ್ತೆ ಪರೋಮಿತ ಗೋಸ್ವಾಮಿ ಅವರು ಸಚಿವರ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ, ನಾನು ತಮಾಷೆಗೆ ಹೇಳಿದ್ದು, ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಸಚಿವ ಮಹಾಜನ್ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.
ಆದರೆ, ಕಾಂಗ್ರೆಸ್ ಮುಖಂಡ ಕಾರ್ಖಾನೆ, ಬ್ರ್ಯಾಂಡ್ ಬಗ್ಗೆ ಹೇಳಿಕೆ ನೀಡಿ ತಪ್ಪು ಮಾಡಿದೆ, ಈ ಬಗ್ಗೆ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ.












Click it and Unblock the Notifications